ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………………………
ಹೊಸ ದಿಗಂತ ವರದಿ, ಚಿಕ್ಕಮಗಳೂರು:
ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಭಾನುವಾರ ಬಿರುಸಿನ ಮಳೆಯಾಗಿದ್ದು, ರೈತಾಪಿ ಜನನ ಮುಖದಲ್ಲಿ ಮಂದಹಾಸ ಮೂಡಿಸಿದೆ.
ಮಧ್ಯಾಹ್ನ 2.30 ರ ಸಮಯಕ್ಕೆ ಗುಡುಗಿನ ಭಾರೀ ಸದ್ದಿನೊಂದಿಗೆ ಆರಂಭವಾದ ಮಳೆ ಅರ್ಧಗಂಟೆ ಸಮಯ ರಭಸವಾಗಿ ಸುರಿಯಿತು. ನಗರ ಸೇರಿದಂತೆ ತಾಲ್ಲೂಕಿನ ಗ್ರಾಮೀಣ ಪ್ರದೇಶದಲ್ಲೂ ಉತ್ತಮ ಪ್ರಮಾಣದಲ್ಲಿ ಮಳೆ ಬಿದ್ದಿದೆ. ನಗರದಲ್ಲಿ ಚರಂಡಿಗಳೆಲ್ಲವೂ ಮಳೆ ನೀರಿನಿಂದ ಶುಚಿಗೊಂಡರೆ, ಕೆಲವು ತಗ್ಗು ಪ್ರದೇಶಕ್ಕೆ ನೀರು ನುಗ್ಗಿ ನಿವಾಸಿಗಳು ಪರದಾಡುವಂತಾಯಿತು.
ಗ್ರಾಮೀಣ ಪ್ರದೇಶಲ್ಲೂ ಮಳೆ ಬಿದ್ದಿರುವುದರಿಂದ ಕೃಷಿ ಹಾಗೂ ತೋಟಗಾರಿಕೆ ಬೆಳೆಗಳಿಗೆ ವರದಾನವಾದಂತಾಗಿದೆ. ಕಳೆದ ಮೂರು ದಿನಗಳಿಂದಲೂ ಭರಣಿ ಮಳೆ ಆಭಟಿಸುತ್ತಿದ್ದು, ಕೃಷಿ ಹಾಗೂ ತೋಟಗಾರಿಕೆ ಚಟುವಟಿಕೆಗಳು ಗರಿಗೆದರಲು ಅನುವು ಮಾಡಿಕೊಟ್ಟಂತಾಗಿದೆ.
ಹದವಾಗಿ ಮಳೆ ಸುರಿದಿರುವ ಹಿನ್ನೆಲೆಯಲ್ಲಿ ರೈತರು ಭೂಮಿಯನ್ನು ಉಳುಮೆ ಮಾಡಿ, ಮುಂದಿನ ಬೆಳೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಕಳೆದ ಹಲವು ವರ್ಷಗಳ ನಂತರ ಸಮಯಕ್ಕೆ ಸರಿಯಾಗಿ ಹದ ಮಳೆಯಾಗುತ್ತಿರುವುದು ರೈತರ ಸಂತೋಷಕ್ಕೆ ಕಾರಣವಾಗಿದೆ. ಕಳೆದ ಮೂರ್ನಾಲ್ಕು ವರ್ಷದಿಂದ ಅಕಾಲಿಕವಾಗಿ ಮಳೆ ಬಿದ್ದ ಪರಿಣಾಮ ಬೆಳೆ ಹಾನಿ, ಧರೆ ಕುಸಿತ, ಜೀವ ಹಾನಿ ಜೊತೆಗೆ ಮನೆ, ಮಠಗಳನ್ನು ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಿತ್ತು. ಆದರೆ ಈ ವರ್ಷ ಸಮಯಕ್ಕೆ ಸರಿಯಾಗಿ ಹದವಾಗಿ ಮಳೆ ಬೀಳುತ್ತಿರುವುದು ಕೃಷಿಕರಲ್ಲಿ ಹೊಸ ಆಶಾಭಾವನೆ ಮೂಡುವಂತಾಗಿದೆ.
ಜೊತೆಗೆ ಬೇಸಿಗೆಯಲ್ಲಿ ಸಾಮಾನ್ಯವಾಗಿ ಇರುತ್ತಿದ್ದ ಉಷ್ಣಾಂಶವನ್ನೂ ಈ ಮಳೆ ತಗ್ಗಿಸಿದೆ. ಕಾಫಿ ಸೇರಿದಂತೆ ಇನ್ನಿತರೆ ತೋಟಗಾರಿಕೆ ಬೆಳೆಗಳನ್ನು ಪಂಪ್ ಸೆಟ್ ಬಳಸಿ ಕೃತವಾಗಿ ನೀರುಣಿಸಿ ಉಳಿಸಿಕೊಳ್ಳಲು ಹೆಣಗಾಡುವ ಪರಿಸ್ಥಿತಿಯಿಂದ ಸಧ್ಯಕ್ಕೆ ಹೊರಬರುವಂತಾಗಿದೆ. ಡೀಸೆಲ್ಗಾಗಿ ಸಹಸ್ರಾರು ರೂ. ಖರ್ಚುಮಾಡುವುದು ಸಹ ತಪ್ಪಿದಂತಾಗಿದೆ.