Thursday, August 18, 2022

Latest Posts

ಚಿಕ್ಕಮಗಳೂರು| ಜಿಲ್ಲಾ ಪೊಲೀಸ್ ವತಿಯಿಂದ ಪೊಲೀಸ್ ಧ್ವಜ ದಿನಾಚರಣೆ

ಹೊಸ ದಿಗಂತ ವರದಿ, ಚಿಕ್ಕಮಗಳೂರು:

ಪೊಲೀಸರ ಕರ್ತವ್ಯ ನಿಷ್ಠೆಯಿಂದಾಗಿ ಸಮಾಜದಲ್ಲಿ ಪ್ರತಿಯೊಬ್ಬರೂ ಶಾಂತಿ ಮತ್ತು ನೆಮ್ಮದಿ ಜೀವನ ನಡೆಸಲು ಸಾಧ್ಯವಾಗಿದೆ ಎಂದು ಒಂದನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಧೀಶರಾದ ಪುಷ್ಪಾಂಜಲಿ ಹೇಳಿದರು.
ನಗರದ ರಾಮನಹಳ್ಳಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಕವಾಯತು ಮೈದಾನದಲ್ಲಿ ಗುರುವಾರ ಜಿಲ್ಲಾ ಪೊಲೀಸ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಹುತಾತ್ಮ ಪೊಲೀಸರ ಸ್ಮಾರಕಕ್ಕೆ ಗೌರವ ಸಲ್ಲಿಸಿ ಅವರು ಮಾತನಾಡಿದರು.
ಪೊಲೀಸರ ತ್ಯಾಗ, ಪ್ರಾಮಾಣಿಕ ಸೇವಾ ಮನೋಭಾವ ಶ್ರೇಷ್ಠವಾದುದು. ಕೊರೋನಾ ಲಾಕ್ ಡೌನ್ ಸಂದರ್ಭದಲ್ಲಿ ಕುಟುಂಬ, ಮಕ್ಕಳೆನ್ನದೇ ಜನರ ಸೇವೆಗಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಜನಸಾಮಾನ್ಯರ ಆಸ್ತಿಪಾಸ್ತಿ ಸುಭದ್ರವಾಗಿರಲು ಕಾರಣ ಪೊಲೀಸರು. ಜನಸಾಮಾನ್ಯರು ಅವರನ್ನು ಗೌರವಿಸಿ, ಅಗತ್ಯ ಸೇವೆಗಳನ್ನು ಪಡೆದುಕೊಳ್ಳಬೇಕೆಂದರು.
ಪೊಲೀಸರು ಎಂಥ ಕಠಿಣ ಪ್ರಕರಣವನ್ನೂ ಭೇದಿಸುತ್ತಾರೆ. ಸಮಾಜದಲ್ಲಿ ಶಾಂತಿ ನೆಲೆಸಲು ಕಾರಣರಾಗಿರುವ ಪೊಲೀಸರನ್ನು ರಾಷ್ಟಲಾಂಛನದಲ್ಲಿರುವ ಕಣ್ಣಿಗೆ ಕಾಣಿಸದ ನಾಲ್ಕನೇ ಸಿಂಹಕ್ಕೆ ಹೋಲಿಸಲಾಗುತ್ತದೆ. ಶ್ರೇಷ್ಟವಾದ ವೃತ್ತಿಗಳಲ್ಲಿ ಪೊಲೀಸ್ ವೃತ್ತಿ ಕೂಡ ಒಂದು, ಪೊಲೀಸ್ ವ್ಯವಸ್ಥೆ ಇಲ್ಲದ ಸಮಾಜವನ್ನು ಊಹಿಸಲು ಅಸಾಧ್ಯ ಎಂದರು.
ಜಿಲ್ಲಾಧಿಕಾರಿ ಕೆ.ಎನ್. ರಮೇಶ್ ಮಾತನಾಡಿ ದೇಶದಲ್ಲಿ ಆಂತರಿಕ ಶತ್ರುಗಳು ಹಾಗೂ ದೇಶ ವಿರೋಧಿ ಕೃತ್ಯಗಳನ್ನೆಸಗುವ ದುಷ್ಟರ ವಿರುದ್ಧ ಧೀರತನದಿಂದ ಹೋರಾಡಿ ಪ್ರಾಣ ಸಮರ್ಪಿಸಿದ ಪೊಲೀಸ್ ಯೋಧರಿಗೆ ಶ್ರದ್ಧಾಂಜಲಿ ಅರ್ಪಿಸುವುದರ ಮೂಲಕ ಈ ದಿನ ಪೊಲೀಸ್ ಹುತಾತ್ಮರ ದಿನವನ್ನಾಗಿ ಆಚರಿಸುತ್ತಿದ್ದೇವೆ. ವಿಪತ್ತು ನಿರ್ವಹಣೆ, ಕೋವಿಡ್ ಸಂದರ್ಭ, ಭಯಾನಕ ಅಪರಾಧ, ಆಂತರಿಕ ಭದ್ರತೆ ಕಾಪಾಡುವಲ್ಲಿ ಪೊಲೀಸರ ನಿರಂತರ ನಿಸ್ವಾರ್ಥ ಸೇವೆ ಶ್ಲಾಘನೀಯ ಎಂದರು.
ಕೋವಿಡ್ ಸಂದರ್ಭದ ಕರ್ತವ್ಯ ಪಾಲನೆ ವೇಳೆ ರಾಜ್ಯದಲ್ಲಿ 41 ಮಂದಿ ಪೊಲೀಸರು ಮರಣಹೊಂದಿದ್ದಾರೆ. ಈ ಪೈಕಿ ಜಿಲ್ಲೆಯ ಶಕುಂತಲಾ ಎಂಬ ಪೇದೆಯೂ ಒಬ್ಬರಾಗಿದ್ದಾರೆ ಎಂದು ಸ್ಮರಿಸಿದರು.
ಹುತಾತ್ಮರ ಕುಟುಂಬ ಅಥವಾ ಪೊಲೀಸ್ ಸಿಬ್ಬಂದಿಗಳು ಸಮಸ್ಯೆಗಳನ್ನು ಜಿಲ್ಲಾಡಳಿತದೊಂದಿಗೆ ಮುಕ್ತವಾಗಿ ಹಂಚಿ ಕೊಂಡಲ್ಲಿ, ಸ್ಪಂದಿಸಿ ಪರಿಹರಿಸುವುದಾಗಿ ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಹೆಚ್.ಅಕ್ಷಯ್ ಮಾತನಾಡಿ ಪೊಲೀಸ್ ಹುತಾತ್ಮರ ದಿನ ಸರ್ವೋತ್ತಮ ತ್ಯಾಗ ಬಲಿದಾನದ ಹೆಮ್ಮೆಯ ದಿನ. ಮತ್ತೊಂದೆಡೆ ಭಾವನಾತ್ಮಕ ದಿನವೂ ಹೌದು, ಲಡಾಕ್ ಗಡಿಯಲ್ಲಿ 1959ರಲ್ಲಿ ಹುತಾತ್ಮರಾದ ಪೊಲೀಸರು ಹಾಗೂ ದೇಶದ ವಿವಿಧೆಡೆ ಕರ್ತವ್ಯ ನಿರತ ಪೊಲೀಸರು ದೇಶಕ್ಕಾಗಿ ಪ್ರಾಣತೆತ್ತ ನೆನಪಿಗಾಗಿ ಪ್ರತಿ ವರ್ಷ ಅಕ್ಟೋಬರ್ 21 ರಂದು ಪೊಲೀಸ್ ಹುತಾತ್ಮ ದಿನಾಚರಣೆಯನ್ನು ದೇಶದಾದ್ಯಂತ ಆಚರಿಸಲಾಗುತ್ತಿದೆ ಎಂದರು.
ದೇಶ ರಕ್ಷಕರು ತಮ್ಮ ಕರ್ತವ್ಯದಲ್ಲಿ ತೊಡಗಿ ಕಾನೂನು ಮತ್ತು ಸುವ್ಯವಸ್ಥೆ ಪಾಲನೆ, ನಾಗರಿಕ ಆಸ್ತಿ, ಪಾಸ್ತಿ ರಕ್ಷಣೆ, ಅಪರಾಧ ತಡೆ ಮತ್ತು ಹಲವು ಕರ್ತವ್ಯ ಪಾಲನೆಗಳಲ್ಲಿ ಸದಾ ನಿರತರಾಗಿ ಸಮಾಜದ ಸುರಕ್ಷತೆಗಾಗಿ ಪ್ರಾಣ ತ್ಯಾಗ ಮಾಡಿದ್ದಾರೆ. ಇಂತಹ ಸಂದರ್ಭದಲ್ಲಿ ಅವರ ನೆನಪು ಮಾಡಿಕೊಳ್ಳುವುದು ನಮ್ಮ ಆದ್ಯ ಕರ್ತವ್ಯ ಎಂದು ಹೇಳಿದರು.
ದೇಶದಲ್ಲಿ ಈ ವರ್ಷ 377 ಪೊಲೀಸರು ಕರ್ತವ್ಯ ಸೇವೆಯ ವೇಳೆ ಮರಣ ಹೊಂದಿದ್ದು, ರಾಜ್ಯದ 16 ಮಂದಿ ಪೊಲೀಸರು ಹುತಾತ್ಮರಾಗಿದ್ದಾರೆ. ದೇಶರಕ್ಷಣೆ ಜೊತೆಗೆ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಮೂಲಕ ಒತ್ತಡದ ನಡುವೆಯೂ ಪೊಲೀಸರು ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕೋವಿಡ್ ಕರ್ತವ್ಯ, ಪ್ರಕೃತಿ ವಿಕೋಪ, ಉಗ್ರರ ದಾಳಿ, ಗಣ್ಯರಿಗೆ ಬಂದೋಬಸ್ತ್ ಸೇರಿದಂತೆ ಸಮಾಜದ ಸುವ್ಯವಸ್ಥೆಗೆ ಶ್ರಮಿಸುತ್ತಿದ್ದಾರೆ ಅವರ ಸೇವೆಗೆ ಸಾರ್ವಜನಿಕರು ಸಹಕರಿಸಬೇಕಿದೆ ಎಂದು ಕೇಳಿಕೊಂಡರು.
ಪೊಲೀಸ್ ಹುತಾತ್ಮರ ಗೌರವ ಸೂಚಕವಾಗಿ ಪರೇಡ್ ಕಮಾಂಡರ್ ನೇತೃತ್ವದಲ್ಲಿ ಮೂರು ಸುತ್ತು ಕುಶಾಲತೋಪನ್ನು ಹಾರಿಸಿದ ನಂತರ ಮೌನಾಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಶೃಂಗೇರಿ ಶಾಸಕ ಟಿ.ಡಿ. ರಾಜೇಗೌಡ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪ್ರಭು, ಚಿಕ್ಕಮಗಳೂರು ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ಡಾ. ಸುನೀಲ್ ಪನ್ವಾರ್, ಹೆಚ್ಚುವರಿ ಪೊಲೀಸ್ ಅಧೀಕ್ಷಕಿ ಶೃತಿ, ಹಿರಿಯ ಸಿವಿಲ್ ನ್ಯಾಯಾಧೀಶ ಸೋಮ, ಸೇರಿದಂತೆ ಮತ್ತಿತರರು ಇದ್ದರು

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!