Thursday, July 7, 2022

Latest Posts

ಚಿಕ್ಕಮಗಳೂರು ನಗರಸಭೆಯ ಚುನಾವಣೆ: ಕಣದಲ್ಲಿ 146 ಅಭ್ಯರ್ಥಿಗಳು

ಹೊಸ ದಿಗಂತ ವರದಿ, ಚಿಕ್ಕಮಗಳೂರು:

ನಗರಸಭೆಯ ೩೫ ವಾರ್ಡ್‌ಗಳಿಗೆ ಸೋಮವಾರ ಚುನಾವಣೆ ನಡೆಯಲಿದ್ದು, ೧೦೦೫೯೩ ಮತದಾರರು ೧೪೬ ಅಭ್ಯರ್ಥಿಗಳ ಹಣೆ ಬರಹ ನಿರ್ಧರಿಸಲಿದ್ದಾರೆ.
ಬರೋಬ್ಬರಿ ೨ ವರ್ಷ ೯ ತಿಂಗಳ ನಂತರ ನಡೆಯುತ್ತಿರುವ ಚುನಾವಣೆ ತೀವ್ರ ಕುತೂಹಲ ಪಡೆದುಕೊಂಡಿದ್ದು, ಬಹುತೇಕ ವಾರ್ಡ್‌ಗಳಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ನೇರ ಹಣಾಹಣಿ ಇದೆ.
೧೧೦ ಮತಗಟ್ಟೆಗಳು
ಒಟ್ಟು ೧೧೦ ಮತಗಟ್ಟೆಗಳಲ್ಲಿ ಸೋಮವಾರ ಬೆಳಗ್ಗೆ ೭ ರಿಂದ ಮತದಾನ ಆರಂಭವಾಗಲಿದ್ದು, ಸಂಜೆ ೫ ಕ್ಕೆ ಮುಕ್ತಾಯವಾಗಲಿದೆ. ಒಟ್ಟು ೬೬ ಸಾಮಾನ್ಯ ಮತಗಟ್ಟೆಗಳು, ೨ ಆಕ್ಸಿಲರಿ, ೨೯ ಸೂಕ್ಷ್ಮ, ೧೩ ಅತಿ ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದ್ದು, ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
೧೦೦೫೯೩ ಮತದಾರರು
ಒಟ್ಟು ೪೯೩೬೧ ಮಹಿಳಾ ಮತದಾರರು ಹಾಗೂ ೫೧೨೧೪ ಪುರುಷರು ಸೇರಿ ಒಟ್ಟು ೧೦೦೫೯೩ ಮಂದಿ ಮತದಾರರು ೩೫ ಮಂದಿ ಪ್ರತಿನಿಧಿಗಳನ್ನು ಆಯ್ಕೆ ಮಾಡಲಿದ್ದಾರೆ.
ಒಟ್ಟು ೩೫ ಸ್ಥಾನಗಳ ಪೈಕಿ ೧೯ ರಲ್ಲಿ ಪುರುಷರು ಹಾಗೂ ೧೬ ವಾರ್ಡ್‌ಗಳಲ್ಲಿ ಮಹಿಳಾ ಸದಸ್ಯರು ಆಯ್ಕೆಯಾಗಿ ಬರಲಿದ್ದಾರೆ. ಸಾಮಾನ್ಯ ಕ್ಷೇತ್ರ, ಸಾಮಾನ್ಯ ಮಹಿಳೆ ಹಾಗೂ ಹಿಂದುಳಿದ ವರ್ಗ ಎ ಕ್ಷೇತ್ರಗಳಿಂದ ತಲಾ ೯ ಮಂದಿ ಹಾಗೂ ಪರಿಶಿಷ್ಟ ಜಾತಿ ೫, ಹಿಂದುಳಿದವರ್ಗ ಬಿ ೨ ಹಾಗೂ ಪರಿಶಿಷ್ಠ ಪಂಗಡ ಕ್ಷೇತ್ರದಿಂದ ಒಬ್ಬರು ಆರಿಸಿ ಬರಲಿದ್ದಾರೆ.
೫೭ ಪಕ್ಷೇತರರು
೩೫ ವಾರ್ಡ್‌ಗಳಲ್ಲಿ ವಿವಿಧ ರಾಜಕೀಯ ಪಕ್ಷಗಳಿಂದ ಸ್ಪರ್ಧಿಸಿದವರ ಸಂಖ್ಯೆ ೮೯ ಆದರೆ ೫೭ ಮಂದಿ ಪಕ್ಷೇತರರು ಕಣದಲ್ಲಿದ್ದಾರೆ. ಈ ಪೈಕಿ ಬಿಜೆಪಿ-೩೩, ಕಾಂಗ್ರೆಸ್-೩೨, ಜೆಡಿಎಸ್-೧೨, ಬಿಎಸ್ಪಿ-೬ ಹಾಗೂ ಎಎಪಿ ಯಿಂದ ೬ ಮಂದಿ ಸ್ಪರ್ಧಿಸಿದ್ದಾರೆ. ಉಳಿದ ೫೭ ಮಂದಿ ಪಕ್ಷೇತರರಾಗಿದ್ದಾರೆ.
ಮತಯಂತ್ರಗಳ ರವಾನೆ
ನಗರಸಭೆ ಚುನಾವಣೆಗೆ ವಿದ್ಯುನ್ಮಾನ ಮತಯಂತ್ರಣಗಳನ್ನೇ ಬಳಿಸಿಕೊಳ್ಳಲಾಗುತ್ತಿದ್ದು, ಭಾನುವಾರ ನಗರದ ಸರ್ಕಾರಿ ಪದವೀಪೂರ್ವ ಕಾಲೇಜಿನಲ್ಲಿ ಜಿಲ್ಲಾಧಿಕಾರಿಗಳು ಮತಯಂತ್ರಗಳ ಪರಿಶೀಲನೆ ನಡೆಸಿ ಆಯಾ ಮತಗಟ್ಟೆಗಳಿಗೆ ಕಳಿಸಿಕೊಟ್ಟರು.
ಆಯಾ ಮತಗಟ್ಟೆ ಅಧಿಕಾರಿಗಳು ಹಾಗೂ ಸಹಾಯಕ ಅಧಿಕಾರಿಗಳು ಸೇರಿದಂತೆ ಸಿಬ್ಬಂದಿಗಳು ಹಾಜರಿದ್ದು, ಮತಯಂತ್ರಗಳನ್ನು ರವಾನಿಸಿದರು. ಉಪವಿಭಾಗಾಧಿಕಾರಿ ಡಾ.ಎಚ್.ಎಲ್.ನಾಗರಾಜು ಇತರರು ಹಾಜರಿದ್ದು, ಸಿಬ್ಬಂದಿಗಳಿಗೆ ಸೂಕ್ತ ಮಾರ್ಗದರ್ಶನ ಮಾಡಿದರು.
ಈ ವೇಳೆ ಜಿಲ್ಲಾಧಿಕಾರಿ ಕೆ.ಎನ್.ನಾಗರಾಜ್ ಮಾತನಾಡಿ, ನಾಳಿನ ನಗರಸಭೆ ಚುನಾವಣೆ ಮತದಾನಕ್ಕೆ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಮತಗಟ್ಟೆ ಅಧಿಕಾರಿಗಳಿಗೆ ಸೂಕ್ತ ತರಬೇತಿ ನೀಡಲಾಗಿದ್ದು, ಇಂದು ಎಲ್ಲಾ ಪರಿಕರಗಳನ್ನು ವಿತರಣೆ ಮಾಡಲಾಗಿದೆ ಎಂದರು.
ಮುಕ್ತ ಹಾಗೂ ಒಳ್ಳೆಯ ರೀತಿ ಚುನಾವಣೆ ನಡೆಸಲು ಎಲ್ಲರೂ ತಯಾರಾಗಿದ್ದೇವೆ. ಕೆಲವು ದೂರುಗಳು ಬಂದ ಹಿನ್ನೆಲೆಯಲ್ಲಿ ಕೆಲವು ವಾರ್ಡ್‌ಗಳಿಗೆ ಬೆಳಗ್ಗೆ ಖುದ್ದು ಭೇಟಿ ನೀಡಿ ಪರಿಶೀಲಿಸಿದ್ದೇವೆ. ಎಂಸಿಸಿ ತಂಡಗಳು ಸಹ ಸಜ್ಜಾಗಿದ್ದು, ನಿಗಾವಹಿಸಿವೆ ಎಂದು ತಿಳಿಸಿದರು.
ಶಾಂತಿಯುತ ಮತದಾನಕ್ಕೆ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸೂಕ್ಷ್ಮ ಮತಗಟ್ಟೆಗಳ ವ್ಯಾಪ್ತಿಯಲ್ಲಿ ಸೂಕ್ತ ಬಂದೋಬಸ್ತ್ ಕೈಗೊಳ್ಳಲಾಗಿದೆ ಈ ಸಂಬಂಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಜೊತೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದರು.
ಈ ಹಿಂದೆ ಅಹಿತಕರ ಘಟನೆಗಳು ಸಂಭವಿಸಿರುವ ವಾರ್ಡ್‌ಗಳು ಹಾಗೂ ಜಿದ್ದಾ ಜಿದ್ದಿನ ಪೈಪೋಟಿ ಇರುವ ವಾರ್ಡ್‌ಗಳನ್ನು ಗುರುತಿಸಿ ಹೆಚ್ಚಿನ ಬಂದೋಬಸ್ತ್ ಮಾಡಲಾಗಿದೆ ಎಂದು ತಿಳಿಸಿದರು.
ಉಪ ವಿಭಾಗಾಧಿಕಾರಿ ಎಚ್.ಎಲ್.ನಾಗರಾಜು ಮಾತನಾಡಿ, ಪ್ರತಿ ಮತಗಟ್ಟೆಗೆ ಮತಗಟ್ಟೆ ಅಧಿಕಾರಿ, ಸಹಾಯಕ ಅಧಿಕಾರಿ ಸೇರಿ ಒಟ್ಟು ೪ ಮಂದಿ ಸಿಬ್ಬಂದಿಗಳನ್ನು ನೇಮಿಸಲಾಗಿದೆ. ಹೆಚ್ಚಿನ ಭದ್ರತೆಗಾಗಿ ಪ್ರತಿ ಮತಗಟ್ಟೆಗೆ ಇಬ್ಬರು ಪೊಲೀಸ್ ಸಿಬ್ಬಂದಿಗಳನ್ನು ನೇಮಿಸಲಾಗಿದೆ ಎಂದರು.
ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಮತಗಟ್ಟೆಗಳಿಗೆ ಹೆಚ್ಚುವರಿ ಪೊಲೀಸರನ್ನು ನೇಮಿಸಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ೨೫೦ ಪೊಲೀಸ್ ಸಿಬ್ಬಂದಿ ಸೇರಿ ಒಟ್ಟು ೭೫೦ ಸಿಬ್ಬಂದಿಗಳನ್ನು ಚುನಾವಣೆ ಕಾರ್ಯದಲ್ಲಿ ತೊಡಗಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.
ಸರ್ಕಾರಿ ಪದವೀ ಪೂರ್ವ ಕಾಲೇಜಿನ ೧೦ ಕೊಠಡಿಗಳಲ್ಲಿ ಇಂದು ಮಸ್ಟರಿಂಗ್ ಕಾರ್ಯ ನಡೆದಿದೆ. ಪ್ರತಿ ಕೊಠಡಿಗಳಲ್ಲಿ ತಲಾ ೧೦ ಮತಗಟ್ಟೆ ಸಿಬ್ಬಂದಿಗಳನ್ನು ಕೂರಿಸಿ ಮತದಾನದ ಪ್ರಕ್ರಿಯೆ ಮತ್ತು ನಿಯಮಾವಳಿಗಳ ಬಗ್ಗೆ ಮಾಹಿತಿ ನೀಡಲಾಗಿದೆ. ಇವಿಎಂಗಳನ್ನು ಇಲ್ಲೇ ಪರಿಶೀಲಿಸಿಕೊಂಡು ಸಮಸ್ಯೆಗಳಿದ್ದರೆ ಇಲ್ಲೇ ಸರಿಪಡಿಸಿಕೊಂಡು ಹೋಗಲು ಸೂಚಿಸಲಾಗಿದೆ ಎಂದು ತಿಳಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss