Saturday, July 2, 2022

Latest Posts

ಚಿಕ್ಕಮಗಳೂರು ನಗರಸಭೆ ಚುನಾವಣೆ: ಸತತ ಮೂರನೇ ಬಾರಿಗೆ ಗದ್ದುಗೆ ಏರಿದ ಬಿಜೆಪಿ

ಹೊಸ ದಿಗಂತ ವರದಿ, ಚಿಕ್ಕಮಗಳೂರು:

ನಗರಸಭೆ ಚುನಾವಣೆಯಲ್ಲಿ ನಿಚ್ಛಳ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿರುವ ಬಿಜೆಪಿ ಸತತ ಮೂರನೇ ಬಾರಿಗೆ ಗದ್ದುಗೆ ಏರುತ್ತಿದೆ.
ಈ ಮೂಲಕ ಚಿಕ್ಕಮಗಳೂರು ಮತ್ತೊಮ್ಮೆ ತನ್ನದೇ ಭದ್ರಕೋಟೆ ಎನ್ನುವುದನ್ನು ಬಿಜೆಪಿ ಸಾಬೀತು ಪಡಿಸಿದ್ದು, ಕಾಂಗ್ರೆಸ್ ಮತ್ತು ಜೆಡಿಎಸ್ ಶಕ್ತಿ ವೃದ್ಧಿಸಿಕೊಳ್ಳುವಲ್ಲಿ ವಿಫಲವಾಗಿವೆ.
ಒಟ್ಟು 35 ಸ್ಥಾನಗಳ ಪೈಕಿ 18 ವಾರ್ಡ್‌ಗಳಲ್ಲಿ ಗೆಲುವಿನ ನಗೆ ಬೀರಿದ ಬಿಜೆಪಿ ಸ್ವಂತ ಬಲದ ಮೇಲೆ ಅಧಿಕಾರಕ್ಕೇರಿದೆ. ಉಳಿದಂತೆ ಕಾಂಗ್ರೆಸ್ 12, ಜೆಡಿಎಸ್ 2 ಹಾಗೂ ಪಕ್ಷೇತರರು 2 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು, 1 ಸ್ಥಾನದಲ್ಲಿ ಎಸ್‌ಡಿಪಿಐ ಅಭ್ಯರ್ಥಿ ಆಯ್ಕೆಯಾಗಿದ್ದಾರೆ.
ಬಿಜೆಪಿ ಹಾಗೂ ಕಾಂಗ್ರೆಸ್‌ಎರಡೂ ಪಕ್ಷಗಳು ಕಳೆದ ಬಾರಿ ಚುನಾವಣೆಯಲ್ಲಿ ಗಳಿಸಿದ್ದಷ್ಟೇ ಸ್ಥಾನಗಳನ್ನು ಈ ಬಾರಿಯೂ ಉಳಿಸಿಕೊಂಡಿರುವುದು ವಿಶೇಷ. ಜೆಡಿಎಸ್ ಮಾತ್ರ ಒಂದು ಸ್ಥಾನ ಹೆಚ್ಚು ಗಳಿಸಿಕೊಂಡಿದೆ.
ತೀವ್ರ ಕುತೂಹಲ ಕೆರಳಿಸಿದ್ದ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ತನ್ನ ಸಾಂಪ್ರದಾಯಿಕ ಮತಗಳು ಹೆಚ್ಚಿರುವ ವಾರ್ಡ್‌ಗಳನ್ನು ಕಳೆದುಕೊಂಡಿದ್ದು, ತಮಗೆ ನೆಲೆಯೇ ಇಲ್ಲದ ಕೆಲವು ವಾರ್ಡ್‌ಗಳಲ್ಲಿ ಗೆದ್ದು ಅಚ್ಚರಿ ಮೂಡಿಸಿವೆ.
ಈ ಗೆಲುವಿನಿಂದ ಶಾಸಕರೂ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರೂ ಆದ ಸಿ.ಟಿ.ರವಿ ಅವರ ವರ್ಚಸ್ಸು ಮತ್ತಷ್ಟು ಹೆಚ್ಚಾದಂತಾಗಿದೆ. ಸಾಕಷ್ಟು ನಕಾರಾತ್ಮ ಅಂಶಗಳು, ಆಡಳಿತ ವಿರೋಧಿ ಅಲೆಯ ನಡುವೆ ಇಡೀ ಚುನಾವಣೆಯ ಜವಾಬ್ದಾರಿಯನ್ನು ಹೆಗಲಿಗೇರಿಸಿಕೊಂಡು ಸರಿಯಾದ ತಂತ್ರಗಳನ್ನು ರೂಪಿಸುವಲ್ಲಿ ಅವರು ಯಶಸ್ವಿಯಾಗಿದ್ದಾರೆ.
ಕಳೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಪ್ರಯಾಸದ ಗೆಲುವು ಸಾಧಿಸಿದ್ದ ಬಿಜೆಪಿಗೆ ನಗರಸಭೆ ಚುನಾವಣೆ ಒಂದು ಸವಾಲಾಗಿತ್ತು. ಪರಿಷತ್ ಚುನಾವಣೆಯಲ್ಲಿ ಗೆಲುವಿನ ಅಂಚಿಗೆ ಬಂದು ಎಡವಿದ್ದ ಕಾಂಗ್ರೆಸ್ ನಗರಸಭೆ ಚುನಾವಣೆಯನ್ನು ಉತ್ಸಾಹದಿಂದಲೇ ಎದುರಿಸಿತ್ತು. ಇಷ್ಟಾದರೂ ಬಿಜೆಪಿ ತನ್ನ ಬಿಗಿ ಹಿಡಿತ ಸಡಿಲಗೊಳ್ಳಲು ಅವಕಾಶವನ್ನೇ ನೀಡದೆ ವಿಜಯ ಪತಾಕೆಯನ್ನು ಹಾರಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss