Wednesday, July 6, 2022

Latest Posts

ಚಿಕ್ಕಮಗಳೂರು| ವರುಣನ ಆರ್ಭಟ: ಜನಜೀವನ ಅಸ್ತವ್ಯಸ್ತ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………

ಹೊಸದಿಗಂತ ವರದಿ, ಚಿಕ್ಕಮಗಳೂರು:

ಜಿಲ್ಲೆಯಲ್ಲಿ ವರುಣನ ಆರ್ಭಟ ಮುಂದುವರಿದಿದ್ದು, ವ್ಯಾಪಕವಾಗಿ ಮಳೆಯಾಗುತ್ತಿದೆ. ಮಲೆನಾಡು ಭಾಗವದಲ್ಲಿ
ಬಿಡುವಿಲ್ಲದ ವರ್ಷಧಾರೆಯಿಂದಾಗಿ ಕೆಲವೆಡೆ ಜನಜೀವನ ಅಸ್ಥವ್ಯಸ್ಥಗೊಂಡಿದೆ.
ಶನಿವಾರ ದಿನವಿಡೀ ಬಿಡುವು ನೀಡಿದ ಮಳೆರಾಯ ರಾತ್ರಿ ವೇಳೆಗೆ ಜಿಲ್ಲೆಯಾದ್ಯಂತ ಸುರಿಯಲಾರಂಭಿಸಿ ಭಾನುವಾರ ಇಡೀ ದಿನ ಒಂದೇ ಸಮನೆ ಮುಂದುವರಿದಿದೆ.
ಮೂಡಿಗೆರೆ, ಕೊಪ್ಪ, ಎನ್‍ಆರ್‍ಪುರ ಶೃಂಗೇರಿ ಹಾಗೂ ಚಿಕ್ಕಮಗಳೂರಿನ ಕೆಲವು ಭಾಗಗಳಲ್ಲಿ ಜನರು ಇಡೀ ದಿನ ಮನೆಯಿಂದ ಹೊರಬರಲಾಗದ ರೀತಿ ಮಳೆಯಾಗುತ್ತಿದೆ. ಕೆಲವಡೆ ಜಿಟಿ ಜಿಟಿ ಮಳೆಇದ್ದರೆ ಇನ್ನೂ ಕೆಲವಡೆ ರಭಸವಾಗಿ ಸುರಿಯುತ್ತಿದೆ.
ನದಿಗಳಲ್ಲಿ ನೀರಿನ ಮಟ್ಟ ಹೆಚ್ಚಾಗಿದ್ದು, ಜಲಾಶಯಗಳ ಒಳ ಹರಿವು ಹೆಚ್ಚಾಗಿದೆ. ಹಲವು ಮರಗಳು ಹಾಗೂ ವಿದ್ಯುತ್ ಕಂಬಗಳು ಭಾನುವಾರವೂ ನೆಲಕ್ಕುರುಳಿದ್ದು, ಕೆಲವು ಗ್ರಾಮಗಳಲ್ಲಿ ಕತ್ತಲಾವರಿಸಿದೆ. ಮಳೆ ಜೋರಾಗಿರುವ ಹಿನ್ನೆಲೆಯಲ್ಲಿ ತಕ್ಷಣಕ್ಕೆ ದುರಸ್ಥಿಪಡಿಸಲಾಗಿದೆ ಮೆಸ್ಕಾಂ ಸಿಬ್ಬಂದಿಗಳು ಪರದಾಡುವಂತಾಗಿದೆ.
ಕೊಪ್ಪದಲ್ಲಿ ಅಧಿಕ ಮಳೆ, ಗಾಳಿಯಿಂದ ಮನೆಯೊಂದರ ಮೇಲ್ಚಾವಣಿ ಹಾರಿಹೋಗಿದ್ದು, ಗೋಡೆಗಳು ಕುಸಿದು ಹಾನಿ ಸಂಭವಿಸಿದೆ. ಚಿಕ್ಕಮಗಳೂರು ತಾಲ್ಲೂಕಿನ ಬ್ಯಾಗದಳ್ಳಿ ಬಳಿ ಮರವೊಂದು ವಿದ್ಯುತ್ ತಂತಿ ಮೇಲೆ ಬಿದ್ದ ಪರಿಣಾಮ ಕಂಬವೂ ನೆಲ ಕಚ್ಚಿ ವಿದ್ಯುತ್ ಕಡಿತ ಉಂಟಾಗಿದೆ.
ಮಳೆಯಲ್ಲೇ ಮಸ್ತಿ
ಜಿಲ್ಲೆಗೆ ಭೇಟಿ ನೀಡುವ ಪ್ರವಾಸಿಗರಿಗೆ ಮುಂಗಾರು ಮುದ ನೀಡುತ್ತಿದೆ. ಮಳೆಗಾಲದ ಪ್ರವಾಸವನ್ನು ಇಷ್ಟಪಡುವ ಸಾವಿರಾರು ಪ್ರವಾಸಿಗರು ಇಂದೂ ಜಿಲ್ಲೆಯ ಪ್ರಮುಖ ತಾಣಗಳಿಗೆ ಭೇಟಿ ನೀಡಿದ್ದು, ಮಳೆಯಲ್ಲಿ ತೋಯ್ದು, ಮೋಜು ಮಸ್ತಿ ಅನುಭವಿಸಿದ್ದಾರೆ.
ಕೋವಿಡ್ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಪ್ರವಾಸಿಗರ ಮೇಲೆ ನಿಗಾ ಇಡಲು ಮಾರ್ಷಲ್ ತಂಡಗಳನ್ನು ನೇಮಿಸಿದ್ದು, ಸಿಬ್ಬಂದಿಗಳು ಹದ್ದಿನ ಕಣ್ಣಿಟ್ಟಿದ್ದಾರೆ. ಇದರ ನಡುವೆಯೂ ಪ್ರವಾಸಿಗರು ಮಳೆಯ ಮಜಾ ಅನುಭವಿಸಲು ದೊಡ್ಡ ಸಂಖ್ಯೆಯಲ್ಲಿ ಜಿಲ್ಲೆಗೆ ಆಗಮಿಸಿದ್ದು ಕಂಡುಬಂದಿದೆ.
ಚಾರ್ಮಾಡಿ ಘಾಟಿಯಲ್ಲಿ ಪ್ರವಾಸಿಗರ ಗುಂಪು ಅಲ್ಲಲ್ಲಿ ರಸ್ತೆ ಮಧ್ಯೆ ವಾಹನಗಳನ್ನು ನಿಲ್ಲಿಸಿಕೊಂಡು ಕುಣಿದು ಕುಪ್ಪಳಿಸಿದ್ದಾರೆ. ಇದರಿಂದ ಇತರೆ ಪ್ರಯಾಣಿಕರಿಗೆ ತೊಂದರೆ ಉಂಟಾದ ಪರಿಣಾಮ ಮಾತಿನ ಚಕಮಕಿ ನಡೆದಿದೆ.
ಕೆಲವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸಾಮಾಜಿಕ ಜಾಲತಾಣದಲ್ಲೇ ದೂರು ಸಲ್ಲಿಸಿ ಕ್ರಮಕ್ಕೆ ಒತ್ತಾಯಿಸಿದ್ದು, ಎಸ್ಪಿ ಎಂ.ಎಚ್.ಅಕ್ಷಯ್ ಅವರು ಸ್ಥಳೀಯ ಪೊಲೀಸರಿಗೆ ಸೂಕ್ತ ಕ್ರಮಕ್ಕೆ ಸೂಚನೆ ನೀಡಿದ್ದಾರೆ.
ಗಿರಿಶ್ರೇಣಿ ಹಾಗೂ ಚಾರ್ಮಾಡಿ ಘಾಟಿ ಮಾರ್ಗದಲ್ಲಿ ಜಲಪಾತಗಳು ಮೈದುಂಬಿಕೊಂಡು ರುದ್ರರಮಣೀಯವಾಗಿ ಧುಮ್ಮುಕ್ಕುತ್ತಿವೆ. ಆದರೆ ಪ್ರವಾಸಿಗರು ಕೊರೋನಾ ಮಾರ್ಗಸೂಚಿಗಳನ್ನು ಅಲ್ಲಲ್ಲಿ ಉಲ್ಲಂಘಿಸುತ್ತಿರುವುದು ಕಂಡುಬಂದಿದ್ದು, ಜನತೆ ಆತಂಕ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯ ಬಯಲು ಭಾಗದ ತಾಲ್ಲುಕುಗಳಲ್ಲೂ ಮುಂಗಾರು ಉತ್ತಮವಾಗಿದ್ದು ರೈತರು ಸಂತಸಗೊಂಡಿದ್ದಾರೆ. ಕಡೂರು, ತರೀಕೆರೆ ಹಾಗೂ ಅಜ್ಜಂಪುರ ಭಾಗದಲ್ಲಿ ಬೆಳಗಿನಿಂದ ಮಳೆಯಾಗುತ್ತಿದ್ದು, ಕೃಷಿ ಹಾಗೂ ತೋಟಗಾರಿಕೆ ಬೆಳೆಗಳಿಗೆ ಅನುಕೂಲವಾಗುತ್ತಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss