ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………
ಹೊಸ ದಿಗಂತ ವರದಿ, ಚಿಕ್ಕಮಗಳೂರು:
ಬಾಲ್ಯ ವಿವಾಹ ನಡೆಯುತ್ತಿದ್ದ ಬಗ್ಗೆ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ಮಕ್ಕಳ ಸಹಾಯವಾಣಿ ತಂಡ ಮತ್ತು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ದಾಳಿ ನಡೆಸಿ ವರನ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಿದ್ದಾರೆ.
ತಾಲ್ಲೂಕಿನ ಮರ್ಲೆ ಗ್ರಾ.ಪಂ. ರಾಮನಹಳ್ಳಿಯಲ್ಲಿ ದೇಗಲಾಪುರ ಗ್ರಾಮದ ರಾಮೇಗೌಡ ಎಂಬುವವರ 16 ವರ್ಷದ ಅಪ್ರಾಪ್ತ ಯುವತಿಯೊಂದಿಗೆ ಸತೀಶ್ ಎಂಬಾತನ ವಿವಾಹ ನಡೆಯುತ್ತಿರುವ ಬಗ್ಗೆ ಮಾಹಿತಿ ಬಂದಿತ್ತು. ಕೂಡಲೇ ತಾಲ್ಲೂಕು ಶಿಶು ಅಭಿವೃದ್ದಿ ಯೋಜನಾಧಿಕಾರಿ ಬಿ.ಹೆಚ್. ಕೃಷ್ಣಪ್ಪ, ಸಹಾಯವಾಣಿ ಕ್ಷೇತ್ರ ಸಹಾಯಕರಾದ ರುಕ್ಮಿಣಿ, ಹರಿಹರದಹಳ್ಳಿ ಗ್ರಾಮ ಪಂಚಾಯಿತಿ ಪಿಡಿಒ ವಿಜಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ಸತೀಶ್ ಮನೆಯಲ್ಲಿ ಮದುವೆ ಚಪ್ಪರ ಹಾಕಿದ್ದು, ವಿವಾಹ ನೆರವೇರಿಸುತ್ತಿರುವುದು ಕಂಡುಬಂದಿದೆ.
ಈ ವೇಳೆ ಅಧಿಕಾರಿಗಳನ್ನು ಕಂಡ ತಕ್ಷಣ ವಧು-ವರರು ಹಿಂಬಾಗಿಲಿನಿಂದ ಓಡಿಹೋಗಿದ್ದಾರೆ. ಅಲ್ಲದೇ ರಾಮೇಶ್ವರ ದೇವಸ್ಥಾನದ ಅರ್ಚಕ ಓಂಕಾರಪ್ಪ ಮದುವೆ ಕಾರ್ಯಕ್ರಮ ನಡೆಸುತ್ತಿದ್ದು. ಮನೆಯ ಹಿಂಭಾಗದಲ್ಲಿ ಅಡುಗೆ ಮಾಡಿರುವುದು ಬೆಳಕಿಗೆ ಬಂದಿದೆ.
ಕೋವಿಡ್ ಸಂದರ್ಭವನ್ನು ದುರುಪಯೋಗಪಡಿಸಿಕೊಂಡು ಜೊತೆಗೆ ಅಪ್ರಾಪ್ತ ಯುವತಿಯೊಂದಿಗೆ ಮದುವೆ ನಡೆಸಿರುವ ಕುರಿತು ವರ ಸತೀಶ್ ವಿರುದ್ದ ಬಾಲ್ಯ ವಿವಾಹ ನಿಷೇಧ ಕಾಯ್ದೆ, ಪೋಕ್ಸೋ ಮತ್ತು ಹಾಗೂ ವಿಪತ್ತು ನಿರ್ವಹಣಾ ಕಾಯ್ದೆಯಡಿ ಕಾನೂನು ರೀತಿ ಕ್ರಮ ಕೈಗೊಳ್ಳುವಂತೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.