ಹೊಸ ದಿಗಂತ ವರದಿ, ಕಾರ್ಕಳ:
ಮಗು ಮಾರಾಟ ಜಾಲದಲ್ಲಿ ಕಾರ್ಕಳ ತಾಲೂಕಿನ ಕುಕ್ಕುಂದೂರು ಗ್ರಾಮದ ಕವಿತಾ ಭಾಗಿಯಾಗಿರುವುದು ಇದೀಗ ಕಾರ್ಕಳದ ಜನತೆಯನ್ನು ಬೆಚ್ಚಿ ಬೀಳಿಸಿದೆ. ಹಾಸನದ ಹಸುಗೂಸು ವೊಂದನ್ನು ಪಡೆದು ಮರಿಯಾ ಎಂಬಾಕೆಗೆ ನೀಡಿದ ಆರೋಪದ ಮೇರೆಗೆ ಕವಿತಾ ಅವಳನ್ನು ಮಂಗಳೂರು ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ.
ಜೋಡುರಸ್ತೆಯಲ್ಲಿ ಫ್ಯಾನ್ಸಿ ಹೊಂದಿರುವ ಈಕೆ ಈ ಹಿಂದೆ ಕೆಲವೊಂದು ಸಂಘ- ಸಂಸ್ಥೆಗಳಲ್ಲೂ ಸಕ್ರಿಯವಾಗಿದ್ದಳು ಎಂದು ತಿಳಿದುಬಂದಿದೆ.
ಮೂಲ್ಕಿ ಮೂಲದ ರೆಯಾನ್ 3 ಲಕ್ಷ ರೂ. ನೀಡಿ ಖರೀದಿಸಿದ ಐದು ತಿಂಗಳ ಹಸುಳೆಯೊಂದನ್ನು ರೂ. 5 ಲಕ್ಷ ನೀಡಿ ಕವಿತಾ ಖರೀದಿಸಿದ್ದು, ಬಳಿಕ ಮಗುವನ್ನು ಮರಿಯಮ್ಮ ಎನ್ನುವವರಿಗೆ ಮಾರಾಟ ಮಾಡಿರುತ್ತಾಳೆ. ಆದರೆ, ಕವಿತಾ ಯಾವ ಮೊತ್ತಕ್ಕೆ ಮಾರಾಟ ಮಾಡಿದ್ದಾಳೆ ಎನ್ನುವುದು ತನಿಖೆಯಿಂದ ಇನ್ನಷ್ಟೇ ತಿಳಿಯಬೇಕಾಗಿದೆ.
ಮರಿಯಮ್ಮಳಿಗೆ ಮದುವೆಯಾಗಿ 8 ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಹೀಗಾಗಿ ಮಗುವನ್ನು ಪಡೆಯಲು ನಿರ್ಧರಿಸಿದ್ದರು ಎನ್ನಲಾಗಿದೆ. ಕವಿತಾ ಅವಳು ಫ್ಯಾನ್ಸಿ ವ್ಯವಹಾರ ದೊಂದಿಗೆ ಇನ್ನಿತರ ವ್ಯವಹಾರವನ್ನೂ ನಡೆಸುತ್ತಿದ್ದಾಳೆ ಎನ್ನಲಾಗುತ್ತಿದೆ. ಕಷ್ಟದಲ್ಲಿರುವ ಹಾಗೂ ಹಣದ ಅವಶ್ಯಕತೆಯಿರುವ ಮಹಿಳೆಯರಿಗೆ, ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳಿಂದ ಸಾಲ ತೆಗೆಸಿಕೊಡುವುದು, ಅದರಲ್ಲಿ ತನ್ನ ಪಾಲಿನ ಕಮೀಶನ್ ಪಡೆಯವುದು ಸೇರಿದಂತೆ ಕೆಲವೊಂದು ಗಂಭೀರ ಸ್ವರೂಪದ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದಳು ಎಂದು ಹೇಳಲಾಗುತ್ತಿದೆ.