ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು: ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜುಗಳ ಅರ್ಹ ವಯೋಮಾನದ ಮಕ್ಕಳಿಗೆ ಕೋವಿಡ್-19 ಲಸಿಕೆ ನೀಡುವ ಜೊತೆಗೆ ವಿವಿಧ ಕಾರಣಗಳಿಂದ ತರಗತಿಗಳಿಂದ ಹೊರಗುಳಿದಿರುವ ಮಕ್ಕಳನ್ನು ಪತ್ತೆ ಮಾಡಿ ವಿಶೇಷ ಕ್ಯಾಂಪ್ ಆಯೋಜನೆ ಸೇರಿದಂತೆ ಇನ್ನಿತರ ಮಾರ್ಗಗಳ ಮೂಲಕ ಲಸಿಕೆ ನೀಡಲಾಗುತ್ತದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವ ಬಿ.ಸಿ. ನಾಗೇಶ್ ತಿಳಿಸಿದರು.
ಲಸಿಕಾಕರಣ ನಡೆಯುತ್ತಿರುವ ಬೆಂಗಳೂರಿನ ಬಸವನಗುಡಿಯಲ್ಲಿರುವ ಸರಕಾರಿ ಬಾಲಕಿಯರ ಪದವಿಪೂರ್ವ ಕಾಲೇಜು ಹಾಗೂ ಬಾಲಕಿಯರ ಪ್ರೌಢಶಾಲೆಗೆ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಚಿವರು ಬಳಿಕ ಸುದ್ದಿಗಾರರ ಜೊತೆ ಮಾತನಾಡಿದರು.
ಕರ್ನಾಟಕದಲ್ಲಿ 15ರಿಂದ 18 ವರ್ಷದೊಳಗಿನ 31.75 ಲಕ್ಷ ಮಕ್ಕಳಿಗೆ ಲಸಿಕೆ ನೀಡುವ ಗುರಿಯನ್ನು ಹೊಂದಲಾಗಿದೆ. ಈ ಪೈಕಿ ಜ. 13ರ ಬೆಳಗ್ಗೆ 9.30ರ ವರೆಗೆ 17.81 ಲಕ್ಷ ಮಕ್ಕಳಿಗೆ ಲಸಿಕೆಯನ್ನು ನೀಡಲಾಗಿದೆ. ಶಾಲಾ-ಕಾಲೇಜುಗಳಲ್ಲಿ ಲಸಿಕಾಕರಣ ಅಭಿಯಾನ ಉತ್ತಮವಾಗಿ ನಡೆಯುತ್ತಿದೆ. ಮಕ್ಕಳು, ಪಾಲಕರು ಉತ್ತಮ ಸಹಕಾರ ನೀಡುತ್ತಿದ್ದಾರೆ. ಕೋವಿಡ್ ಸಾಂಕ್ರಾಮಿಕ ವಿರುದ್ಧ ಎಲ್ಲರೂ ಒಗ್ಗಟಾಗಿ ಹೋರಾಟ ನಡೆಸಬೇಕಿದೆ. ಇದರಲ್ಲಿ ಜಯ ಸಾಧಿಸುವ ಸಂಪೂರ್ಣ ವಿಶ್ವಾಸವಿದೆ ಎಂದು ಸಚಿವರು ಹೇಳಿದರು.
ಮಕ್ಕಳ ಲಸಿಕಾಕರಣದಲ್ಲಿ ಹಿಂದುಳಿದಿರುವ ಜಿಲ್ಲೆಗಳಲ್ಲಿ ವೇಗ ಹೆಚ್ಚಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಪ್ರೌಢಶಾಲೆ ಮತ್ತು ಕಾಲೇಜುಗಳಲ್ಲಿ ನಡೆಯುತ್ತಿರುವ ಲಸಿಕಾಕರಣದ ಬಳಿಕ ವಿವಿಧ ಕಾರಣಗಳಿಂದ ತರಗತಿಯಿಂದ ಹೊರಗಿರುವ ಮಕ್ಕಳಿಗೂ ಲಸಿಕೆ ನೀಡಲಾಗುತ್ತದೆ. ಶಿಕ್ಷಣ ಇಲಾಖೆ ಜೊತೆಗೆ ಆರೋಗ್ಯ ಇಲಾಖೆ ಹಾಗೂ ಇನ್ನಿತರ ಇಲಾಖೆಗಳ ಜೊತೆ ಸಂಯೋಜನೆಯೊಂದಿಗೆ ಮಕ್ಕಳನ್ನು ಪತ್ತೆ ಮಾಡಿ ವಿಶೇಷ ಕ್ಯಾಂಪ್ ಅಥವಾ ಇನ್ನಿತರ ಮಾರ್ಗಗಳ ಮೂಲಕ ಲಸಿಕೆ ನೀಡಲಾಗುತ್ತದೆ. ಒಟ್ಟಿನಲ್ಲಿ 15ರಿಂದ 18 ವರ್ಷದೊಳಗಿನ ಎಲ್ಲ ಮಕ್ಕಳಿಗೂ ಲಸಿಕೆ ನೀಡಲಾಗುತ್ತದೆ ಎಂದು ಸಚಿವ ನಾಗೇಶ್ ಹೇಳಿದರು.
ಬಸವನಗುಡಿಯ ಸರಕಾರಿ ಬಾಲಕಿಯರ ಪಿಯು ಕಾಲೇಜಿನಲ್ಲಿ ಕೊಠಡಿಗಳು, ಮೂಲಸೌಕರ್ಯ ಉತ್ತಮವಾಗಿದೆ. ಅಭಿವೃದ್ಧಿಗೆ ಸಾಕಷ್ಟು ಅವಕಾಶ ಇದೆ. ಆದರೆ, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದೆ. ಇಂತಹುದೇ ಪರಿಸ್ಥಿತಿ ರಾಜ್ಯದ ವಿವಿಧೆಡೆ ಇದೆ. ಹೀಗಾಗಿ, ಉತ್ತಮ ಸ್ಥಳಾವಕಾಶ ಮತ್ತು ಮೂಲಸೌಕರ್ಯ ಇರುವ ರಾಜ್ಯದ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಸಿ, ಗೈರುಹಾಜರಿ ಕಡಿಮೆ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಚಿವರು ತಿಳಿಸಿದರು.