ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………
ಹೊಸದಿಗಂತ ಆನ್ ಲೈನ್ ಡೆಸ್ಕ್:
ಕೊರೋನಾ ಸೋಂಕು ಹರಡುವುದಕ್ಕೆ ಮೂಲ ಕಾರಣವಾದ ಚೀನಾ 10 ಟ್ರಿಲಿಯನ್ ಡಾಲರ್ ಪರಿಹಾರ ನೀಡಬೇಕೆಂಬ ಡೊನಾಲ್ಡ್ ಟ್ರಂಪ್ ಅವರ ಬೇಡಿಕೆಗೆ ಚೀನಾ ಪ್ರತಿಕ್ರಿಯೆ ನೀಡಿದ್ದು, ಜನರ ಜೀವ ಹಾಗೂ ಆರೋಗ್ಯವನ್ನು ನಿರ್ಲಕ್ಷ್ಯಿಸಿರುವ ರಾಜಕಾರಣಿಗಳು ಹೊಣೆಗಾರರು ಎಂದು ಹೇಳಿದೆ..
ಭಾನುವಾರದಂದು ರಿಪಬ್ಲಿಕನ್ ಪಾರ್ಟಿ ಕನ್ವೆನ್ಷನ್ ನಲ್ಲಿ ಮಾತನಾಡಿದ್ದ ಡೊನಾಲ್ಡ್ ಟ್ರಂಪ್ ಕೋವಿಡ್-19 ನ್ನು ಚೀನಾ ವೈರಸ್, ವುಹಾನ್ ವೈರಸ್ ಎಂದು ಹೇಳಿ, ಜಗತ್ತಿಗೆ ಚೀನಾ ಪರಿಹಾರವನ್ನು ನೀಡಬೇಕು, ಅಮೆರಿಕಾಗೆ 10 ಟ್ರಿಲಿಯನ್ ಡಾಲರ್ ನ್ನು ನೀಡಬೇಕೆಂದು ಆಗ್ರಹಿಸಿದ್ದರು.
ಈ ಬಗ್ಗೆ ಚೀನಾದ ವಿದೇಶಾಂಗ ವಕ್ತಾರ ವಾಂಗ್ ವೆನ್ಬಿನ್ ಪ್ರತಿಕ್ರಿಯೆ ನೀಡಿದ್ದು, ಟ್ರಂಪ್ ಆಡಳಿತಾವಧಿಯಲ್ಲಿ 2.4 ಕೋಟಿ ಕೋವಿಡ್-19 ಪ್ರಕರಣಗಳು ವರದಿಯಾಗಿತ್ತು. 410 ,000 ಮಂದಿ ಸಾವನ್ನಪ್ಪಿದ್ದರು. ವಾಸ್ತವವನ್ನು ನಿರಂತರವಾಗಿ ನಿರಾಕರಿಸುತ್ತಿದ್ದ ಟ್ರಂಪ್, ಕರ್ತವ್ಯಗಳನ್ನು ನಿರ್ಲಕ್ಷ್ಯಿಸಿದರು. ಸಾಂಕ್ರಮಿಕ ನಿಯಂತ್ರಣಕ್ಕೆ ಪ್ರಯತ್ನಿಸುವ ಬದಲು ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಯತ್ನಿಸಿದ್ದರು ಎಂದು ಚೀನಾ ಆರೋಪಿಸಿದೆ.
ಅಮೆರಿಕಾದ ಜನತೆ ಯಾರನ್ನು ಹೊಣೆಗಾರರನ್ನಾಗಿಸಬೇಕು ಎಂಬ ಬಗ್ಗೆ ಉತ್ತಮ ತೀರ್ಪು ತೆಗೆದುಕೊಂಡಿದ್ದಾರೆ ಎಂದು ನಾವು ನಂಬಿದ್ದೇವೆ. ಅವರು ಬೂಟಾಟಿಕೆಯ, ಜನರ ಆರೋಗ್ಯವನ್ನು ನಿರ್ಲಕ್ಷ್ಯಿಸಿದ್ದ ರಾಜಕಾರಣಿಗಳನ್ನು ಹೊಣೆಗಾರರನ್ನಾಗಿ ಮಾಡಬೇಕು ಎಂದು ಚೀನಾ ಹೇಳಿದೆ.