ಅಬ್ದುಲ್‌ ರೆಹಮಾನ್‌ ಮಕ್ಕಿಯನ್ನು ಜಾಗತಿಕ ಭಯೋತ್ಪಾದಕನನ್ನಾಗಿಸುವ ಭಾರತದ ಪ್ರಯತ್ನಕ್ಕೆ ತಣ್ಣೀರೆರೆಚಿದ ಚೀನಾ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:
ಲಷ್ಕರ್-ಎ-ತೊಯ್ಬಾದ (ಎಲ್‌ಇಟಿ) ಉಪ ಮುಖ್ಯಸ್ಥ ಅಬ್ದುಲ್ ರೆಹಮಾನ್ ಮಕ್ಕಿಯನ್ನು ಜಾಗತಿಕ ಭಯೋತ್ಪಾದಕ ಎಂದು ಪಟ್ಟಿ ಮಾಡುವ ಭಾರತದ ಪ್ರಸ್ತಾಪಕ್ಕೆ ಚೀನಾ ತಾಂತ್ರಿಕ ತಡೆ ಹಿಡಿದಿದೆ. ಮಕ್ಕಿಯನ್ನು ಜಾಗತಿಕ ಭಯೋತ್ಪಾದಕ ಪಟ್ಟಿಗೆ ಸೇರಿಸಬೇಕು ಎಂದು ಅಮೆರಿಕ ಮತ್ತು ಭಾರತ ಜಂಟಿಯಾಗಿ ವಿಶ್ವ ಸಂಸ್ಥೆಯಲ್ಲಿ ಪ್ರಸ್ತಾವನೆ ಸಲ್ಲಿಸಿದ್ದವು.

ಈಗಾಗಲೇ ಈತನನ್ನು ತಮ್ಮ ದೇಶೀಯ ಕಾನೂನಿನ ಅಡಿಯಲ್ಲಿ ಭಯೋತ್ಪಾದಕನೆಂದು ಘೋಷಿಸಿರುವ ಭಾರತ ಮತ್ತು ಅಮೆರಿಕ ಎರಡೂ ದೇಶಗಳು ಜಂಟಿಯಾಗಿ ಅಬ್ದುಲ್‌ ರೆಹಮಾನ್‌ ಮಕ್ಕಿಯನ್ನು ಜಾಗತಿಕ ಉಗ್ರನನ್ನಾಗಿಸಲು ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯ ಅಲ್‌ ಖೈದಾ ಸಮಿತಿ ಅಥವಾ ಯುಎನ್‌ಎಸ್‌ಸಿ 1267 ಸಮಿತಿ ಎಂದೂ ಕರೆಯಲ್ಪಡುವ ಐಎಸ್‌ಐಎಲ್ ನಿರ್ಬಂಧಗಳ ಸಮಿತಿಯ ಅಡಿಯಲ್ಲಿ ಪಟ್ಟಿ ಮಾಡಲು ಪ್ರಸ್ತಾಪಿಸಿದ್ದವು. ಆದರೆ ಖಾಯಂ ಸದಸ್ಯನಾಗಿ ವೆಟೋ ಪವರ್‌ ಹೊಂದಿರುವ ಚೀನಾ ಈ ಪ್ರಸ್ತಾವನೆಗೆ ತಾಂತ್ರಿಕ ತಡೆಯೊಡ್ಡಿದೆ.

ಅಬ್ದುಲ್‌ ರಹಮಾನ್‌ ಮಕ್ಕಿ ಎಂದು ಕರೆಯಲ್ಪಡುವ ಈ ಉಗ್ರ ಲಷ್ಕರ್-ಎ-ತೊಯ್ಬಾ (ಎಲ್‌ಇಟಿ)ಯ ಉಪ ಮುಖ್ಯಸ್ಥ ಹಾಗೂ ಜಮಾತ್-ಉದ್-ದವಾ (ಜೆಯುಡಿ) ನ ರಾಜಕೀಯ ವ್ಯವಹಾರಗಳ ಮುಖ್ಯಸ್ಥನಾಗಿದ್ದಾನೆ. UN ನಿಷೇಧಿತ ಭಯೋತ್ಪಾದಕನಾಗಿರುವ ಹಫೀಜ್‌ ಸಯೀದ್‌ ನ ಸೋದರ ಮಾವನೀತ. ಮೂಲಗಳ ಪ್ರಕಾರ ಭಯೋತ್ಪಾದಕ ಸಂಘಟನೆಗಳಿಗೆ ನಿಧಿ ಸಂಗ್ರಹಿಸುವುದು, ಯುವಕರನ್ನು ನೇಮಿಸಿಕೊಳ್ಳುವುದು, ಬಾರತದಲ್ಲಿ ಅದರಲ್ಲೂ ವಿಶೇಷವಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ ದಾಳಿ ನಡೆಸಲು ಸಂಚು ರೂಪಿಸುತ್ತಿದ್ದಾನೆ ಎನ್ನಲಾಗಿದೆ.

ಪ್ರಸ್ತುತ ಇದೇ ಭಯೋತ್ಪಾದಕನ ವಿರುದ್ಧ ಜಾಗತಿಕ ನಿಷೇಧ ಹೇರಲು ಮುಂದಾಗಿರುವ ಭಾರತದ ಪ್ರಯತ್ನಕ್ಕೆ ಎಂದಿನಂತೆ ಡ್ರ್ಯಾಗನ್ ಚೀನಾ ಅಡ್ಡಗಾಲು ಹಾಕಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!