ಚೀನಾ ವಿದೇಶ ಸಚಿವರ ಭಾರತ ಭೇಟಿ- ಶುಕ್ರವಾರ ಚರ್ಚೆಯಾದ ಪ್ರಮುಖಾಂಶಗಳಿವು

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಚೀನಾದ ವಿದೇಶ ಮಂತ್ರಿ ವಾಂಗ್ ಯಿ, ಭಾರತ ಭೇಟಿಯಲ್ಲಿದ್ದು, ಗಲ್ವಾನ್ ನಲ್ಲಿ ಭಾರತ ಮತ್ತು ಚೀನಾಗಳ ನಡುವೆ ಆದ ರಕ್ತಸಿಕ್ತ ಸಂಘರ್ಷದ ನಂತರ ಈ ಭೇಟಿಗೆ ಭಾರಿ ಪ್ರಾಮುಖ್ಯ ಬಂದಿದೆ.

ಶುಕ್ರವಾರ ವಾಂಗ್ ಯಿ ಅವರ ಭೇಟಿ ಮತ್ತು ಸಮಾಲೋಚನೆ ಮೊದಲಿಗೆ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೊವಲ್ ಅವರ ಜತೆ ಆಯಿತು. ನಂತರ ಭಾರತದ ವಿದೇಶ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರ ಜತೆ ಚರ್ಚಿಸಿದರು. ಈ ಸಮಾಲೋಚನೆ ಬಗ್ಗೆ ವಿದೇಶ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಪತ್ರಿಕಾಗೋಷ್ಟಿ ನಡೆಸಿ ವಿವರಗಳನ್ನೂ ನೀಡಿದ್ದಾರೆ.

ಒಟ್ಟಾರೆಯಾಗಿ ವಾಂಗ್ ಯಿ ಭೇಟಿ ಮತ್ತು ಸಮಾಲೋಚನೆಗಳಲ್ಲಿ ಈವರೆಗೆ ತಿಳಿದುಬಂದಿರುವ ಸಂಗತಿಗಳಿಷ್ಟು:

  • “ಸದ್ಯದ ಪರಿಸ್ಥಿತಿಯನ್ನು ಕಾರ್ಯ ಪ್ರಗತಿಯಲ್ಲಿದೆ ಎಂದು ವಿವರಿಸಬಹುದು. ಆದರೆ ಅದರ ವೇಗ ನಾವು ನಿರೀಕ್ಷಿಸಿದಷ್ಟಿಲ್ಲ. ಈ ಪ್ರಕ್ರಿಯೆಗೆ ವೇಗ ತರುವುದರ ನಿಟ್ಟಿನಲ್ಲಿಯೇ ಚೀನಾ ವಿದೇಶ ಸಚಿವ ವಾಂಗ್ ಯಿ ಅವರ ಜತೆ ನನ್ನ ಮಾತುಕತೆಗಳಾಗಿವೆ.”- ಇದು ವಿದೇಶ ಸಚಿವ ಎಸ್ ಜೈ ಶಂಕರ್ ಅವರು ಪತ್ರಿಕಾಗೋಷ್ಟಿಯಲ್ಲಿ ನೀಡಿರುವ ವಿವರ.
  • ಗಡಿಯಲ್ಲಾಗಿರುವ ವಿದ್ಯಮಾನ ನಮ್ಮ ದ್ವಿಪಕ್ಷೀಯ ಸಂಬಂಧಗಳ ಮೇಲೆ ಈ ಎರಡು ವರ್ಷಗಳಲ್ಲಿ ಪರಿಣಾಮ ಬೀರಿರುವುದು ನಿಚ್ಚಳ. ಇದನ್ನು ತಗ್ಗಿಸುವ ಹಾಗೂ ಪುನರಾವರ್ತಿಸದಂತೆ ನಡೆದುಕೊಳ್ಳುವ ಬಗ್ಗೆ ಮಾತುಕತೆಗಳು ನಡೆದವು ಎಂದು ಸಚಿವ ಜೈಶಂಕರ್ ಹೇಳಿದ್ದಾರೆ.
  • ಕೋವಿಡ್ ನಿಯಂತ್ರಣ ನಿಯಮಗಳ ಕಾರಣದಿಂದ ಚೀನಾದಲ್ಲಿ ವ್ಯಾಸಂಗಕ್ಕಾಗಿ ನೊಂದಾಯಿಸಲ್ಪಟ್ಟ ಭಾರತೀಯ ವಿದ್ಯಾರ್ಥಿಗಳಿಗೆ ಶಿಕ್ಷಣದಿಂದ ವಂಚಿತವಾಗುವ ಸ್ಥಿತಿ ಇರುವುದನ್ನು ಚೀನಾದ ಜತೆ ಚರ್ಚಿಸಿರುವುದಾಗಿ ವಿದೇಶ ಸಚಿವ ಜೈಶಂಕರ್ ಹೇಳಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡಿ ಭಾರತದ ವೈದ್ಯ ವಿದ್ಯಾರ್ಥಿಗಳಿಗೆ ಸಹಾಯ ಮಾಡುವ ಭರವಸೆ ಚೀನಾದ ವಿದೇಶ ಸಚಿವರಿಂದ ಸಿಕ್ಕಿದೆ.
  • ಉಕ್ರೇನ್, ಅಫಘಾನಿಸ್ತಾನಗಳ ಪರಿಸ್ಥಿತಿ ಬಗ್ಗೆಯೂ ಉಭಯ ದೇಶಗಳ ವಿದೇಶ ಮಂತ್ರಿಗಳ ನಿಯೋಗಮಟ್ಟದ ಮಾತುಕತೆಯಲ್ಲಿ ಪ್ರಸ್ತಾಪವಾಗಿದೆ.
  • ಇನ್ನು, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಚೀನಾ ಸಚಿವರ ಜತೆಗಿನ ತಮ್ಮ ನಿಯೋಗಮಟ್ಟದ ಮಾತುಕತೆಯಲ್ಲಿ, “ಗಲ್ವಾನ್ ಗಡಿ ಪ್ರದೇಶದಲ್ಲಿ ಚೀನಾ ಸಂಪೂರ್ಣ ಸೇನಾ ಹಿಂತೆಗೆತ ಪ್ರಕ್ರಿಯೆ ಪೂರ್ಣಗೊಳಿಸಿದರೆ ಮಾತ್ರ ಭಾರತವು ಚೀನಾದ ಜತೆ ವಿಶೇಷ ಪ್ರತಿನಿಧಿಗಳ ಮಟ್ಟದ ಮಾತುಕತೆ ಮಾಡುವುದಕ್ಕೆ ಸಾಧ್ಯವಾಗುತ್ತದೆ” ಎಂದು ಹೇಳಿರುವುದಾಗಿ ತಿಳಿದುಬಂದಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!