ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………….
ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಪೂರ್ವ ಆಫ್ರಿಕಾ ಸನಿಹಕ್ಕೆ ಇಂಡಿಯನ್ ಓಶನ್ ಪ್ರದೇಶದಲ್ಲಿರುವ ಚಿಕ್ಕ ದ್ವೀಪರಾಷ್ಟ್ರ ಸಿಶೆಲ್ಸ್. ಒಂದು ಲಕ್ಷದ ಸನಿಹವಷ್ಟೇ ಜನಸಂಖ್ಯೆ ಹೊಂದಿರುವ ಈ ದೇಶ, ಅತಿ ಕ್ಷಿಪ್ರ ಲಸಿಕೆಯುಕ್ತವಾಗಿರುವ ದೇಶಗಳ ಸಾಲಿನಲ್ಲಿ ಅಗ್ರಸ್ಥಾನದಲ್ಲಿದೆ.
ಆದರೆ, ಇದೀಗ ಸಿಶೆಲ್ಸ್ ಮತ್ತೆ ಅತಿವೇಗದ ಸೋಂಕಿಗೆ ತುತ್ತಾಗುತ್ತಿದೆ. ಎರಡೇ ವಾರಗಳಲ್ಲಿ ಇಲ್ಲಿನ ಸೋಂಕಿತರ ಪ್ರಮಾಣ ದುಪ್ಪಟ್ಟಾಗಿದೆ. ಕೇವಲ 98 ಲಕ್ಷ ಜನಸಂಖ್ಯೆಯ ದೇಶದಲ್ಲಿ, ಲಸಿಕೆ ಅಭಿಯಾನದ ಬಳಿಕವೂ 2,486 ಮಂದಿಗೆ ಸೋಂಕು ತಗುಲಿರುವುದು ಆತಂಕದ ವಿಷಯ. ಈ ಪೈಕಿ ಶೇ. 36 ಮಂದಿ ಎರಡನೇ ಡೋಸು ಲಸಿಕೆಯನ್ನೂ ಮುಗಿಸಿದವರಾಗಿದ್ದಾರೆ.
ಗಮನಿಸಬೇಕಾದ ವಿಷಯವೆಂದರೆ, ಸಿಶೆಲ್ಸ್ ನಲ್ಲಿ ಲಸಿಕೆ ಪಡೆದುಕೊಂಡವರಲ್ಲಿ ಶೇ. 57ರಷ್ಟು ಮಂದಿ ಚೀನಾದ ಸಿನೊಫಾರ್ಮ್ ಲಸಿಕೆ ಪಡೆದವರಾಗಿದ್ದಾರೆ. ಉಳಿದ ಕೆಲವು ಭಾಗ ಮಾತ್ರ ಭಾರತದ ಕೋವಿಶೀಲ್ಡ್ ಪಡೆದಿದ್ದಾರೆ.
ಆಳವಾದ ಅಧ್ಯಯನ ಮಾಡದೇ ಇದನ್ನು ಲಸಿಕೆ ವೈಫಲ್ಯ ಎನ್ನಲಾಗದು ಎಂದಿರುವ ವಿಶ್ವ ಆರೋಗ್ಯ ಸಂಸ್ಥೆ ಈಗ ಆ ಬಗ್ಗೆ ಅಧ್ಯಯನ ನಡೆಸುತ್ತಿದೆ. ಸಿಶೆಲ್ಸ್ ನಲ್ಲಿ ಶಾಲೆಗಳು ಮತ್ತು ವಿಹಾರ ಚಟುವಟಿಕೆಗಳೆಲ್ಲ ಹೊಸ ಕೋವಿಡ್ ಅಲೆಯ ಕಾರಣದಿಂದ ಮುಚ್ಚಿವೆ.