ಚೀನಾ ಅಧ್ಯಕ್ಷ ಷಿ ಜಿನ್ ಪಿಂಗ್‌ ಗೃಹಬಂಧನದಲ್ಲಿ? ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆ ಎಬ್ಬಿಸುತ್ತಿರುವ ವದಂತಿಗಳು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಚೀನಾ ಗೌಪ್ಯತೆಯನ್ನು ಕಾಯ್ದುಕೊಳ್ಳುವಲ್ಲಿ ಹೆಸರಾದ ರಾಷ್ಟ್ರ. ಚೀನಾದಲ್ಲಿ ನಡೆಯುವ ಯಾವ ವಿದ್ಯಮಾನವೂ ಅಲ್ಲಿನ ಕಮ್ಯೂನಿಷ್ಟ್‌ ಉಕ್ಕಿನ ಪರದೆಗಳ ಹಿಂದೆ ಮುಚ್ಚಿರುವ ಬಾಗಿಲನ್ನು ದಾಟಿ ಹೊರಗೆ ಬರದು. ಹಾಗಿದ್ದರೂ ಕಳೆದ ಕೆಲ ದಿನಗಳಿಂದ ಯೂಟ್ಯೂಬ್‌ ಟ್ವಿಟರ್‌ ಸೇರಿದಂತೆ ಸಾಮಾಜಿಕ ತಾಣಗಳಲ್ಲಿ ಚೀನಾ ಬಗೆಗಿನ ಪ್ರಮುಖ ವಿಚಾರವೊಂದು ದೊಡ್ಡ ಸದ್ದು ಮಾಡುತ್ತಿದೆ. ಚೀನಾ ಅಧ್ಯಕ್ಷ ಷೀ ಜಿನ್​ಪಿಂಗ್ ಅವರನ್ನು ಗೃಹಬಂಧನದಲ್ಲಿ ಇರಿಸಲಾಗಿದೆ ಎಂದು ಈ ಸುದ್ದಿಗಳು ಹೇಳುತ್ತಿವೆ. ಈ ಸುದ್ದಿಗಳು ಅಧಕೃತ ಮೂಲಗಳಿಂದ ದೃಢೀಕರಿಸಲ್ಪಟ್ಟಿಲ್ಲ. ಆದರೆ ಚೀನಾ ಅಧ್ಯಕ್ಷ 2 ವರ್ಷಗಳಿಂದ ಬೀಜಿಂಗ್‌ನಲ್ಲಿರುವ ತಮ್ಮ ಮನೆಯಿಂದ ಹೊರಬರದಿರುವುದು, ಯಾವುದೇ ಜಾಗತಿಕ ನಾಯಕರನ್ನು ಭೇಟಿಯಾಗದಿರುವುದು ಹಾಗೂ ಯಾವುದೇ ಪ್ರಮುಖ CCP ನಾಯಕರನ್ನು ಸಹ ಭೇಟಿಯಾಗಿಲ್ಲ ಎಂಬ ವರದಿಗಳು ಈ ಸುದ್ದಿಗೆ ಪುಷ್ಠಿ ನೀಡುತ್ತಿದೆ.
ಚೀನಾದ ಮಾಧ್ಯಮಗಳು ಈ ಸುದ್ದಿಗಳನ್ನು ದೃಢೀಕರಿಸದಿದ್ದರೂ, ಚೀನಾ ಮೂಲದ ಕೆಲ ಟ್ವೀಟ್‌ ಹ್ಯಾಂಡಲ್‌ ಗಳು ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರನ್ನು ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಗೃಹಬಂಧನದಲ್ಲಿ ಇರಿಸಿದೆ ಎಂಬುದನ್ನು ಸೂಚಿಸುತ್ತವೆ.
ಅದಾಗ್ಯೂ,  ಕಳೆದ ಸೆ. 14 ರಂದು ಷಿ ಜಿನ್‌ ಪಿಂಗ್‌ 2 ವರ್ಷದ ಬಳಿಕ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಉಜ್ಬೇಕಿಸ್ತಾನ್‌ನ ಸಮರ್ಕಂಡ್‌ನಲ್ಲಿ ನಡೆದ ಶಾಂಘೈ ಸಹಕಾರ ಶೃಂಗಸಭೆ (ಎಸ್‌ಸಿಓ) ಗಾಗಿ ಅವರು ತಮ್ಮ ಮನೆಯಿಂದ ಹೊರಬಂದಿದ್ದಾರೆ. ಕ್ಸಿ ವಿಶೇಷ ವಿಮಾನದ ಮೂಲಕ ಮಧ್ಯ ಏಷ್ಯಾಕ್ಕೆ ತೆರಳಿ ಶೃಂಗಸಭೆಯಲ್ಲಿ ಭಾಗವಹಿಸಿದ್ದಾರೆ. ಇಲ್ಲೊಂದು ಮಹತ್ವದ ವಿಚಾರವನ್ನು ಗಮನಿಸಬೇಕು, ಎಸ್‌ಸಿಓ ಶೃಂಗಸಭೆಯ ಸ್ಥಾಪಕ ಸದಸ್ಯನಾಗಿದ್ದರೂ ಚೀನಾದ ನಾಯಕ ಶೃಂಗಸಭೆಯಲ್ಲಿ ಸಕ್ರಿಯವಾಗಿ ಭಾಗವಹಿಸಿಲ್ಲ. ಶೃಂಗಸಭೆಯ ಉದ್ಘಾಟನಾ ಸಮಾರಂಭದಲ್ಲಿ ಅವರು ಯಾವುದೇ ಸ್ಮರಣೀಯ ಭಾಷಣವನ್ನು ಮಾಡಲಿಲ್ಲ. ಜೊತೆಗೆ ವ್ಲಾಡಿಮಿರ್ ಪುಟಿನ್- ನರೇಂದ್ರ ಮೋದಿ ಅಥವಾ ಶೃಂಗಸಭೆಯ ಗುಂಪಿನ ಯಾವುದೇ ಪ್ರಮುಖ ನಾಯಕರನ್ನೂ ಭೇಟಿ ಮಾಡಲಿಲ್ಲ.
ಇದಲ್ಲದೆ, ಕೊರೋನಾ ಕಾರಣವೊಡ್ಡಿ ಮಿತ್ರರಾಷ್ಟ್ರ ರಷ್ಯಾದ ಅಧ್ಯಕ್ಷ ಪುಟಿನ್ ಅವರೊಂದಿಗೆ ಭೋಜನ ಕೂಟದಲ್ಲೂ ಭಾಗಿಯಾಗಲಿಲ್ಲ. ಶೃಂಗಸಭೆಯ ಅಧಿಕೃತವಾಗಿ ಮುಕ್ತಾಯ ಗೊಳ್ಳುವ ಮೊದಲೇ ಕ್ಸಿ ಬೀಜಿಂಗ್‌ಗೆ ತೆರಳಿದ್ದರು ಎಂಬ ವಿಚಾರವೂ ಬಯಲಾಗಿತ್ತು. ಅವರು ದೊಡ್ಡ ಚಿಂತೆಯಲ್ಲಿದ್ದರು ಮತ್ತು ಹೆದರುತ್ತಿದ್ದರು ಎಂದು ಮಾಧ್ಯಮಗಳು ವರದಿ ಮಾಡಿವೆ.
ನ್ಯೂಸ್ ಹೈಲ್ಯಾಂಡ್ ವಿಷನ್ ಪ್ರಕಾರ, ಚೀನಾದ ಮಾಜಿ ಅಧ್ಯಕ್ಷ, ಹು ಜಿಂಟಾವೊ ಮತ್ತು ಮಾಜಿ ಚೀನೀ ಪ್ರೀಮಿಯರ್ ಆದ ವೆನ್ ಜಿಯಾಬಾವೊ ಅವರು ಸ್ಥಾಯಿ ಸಮಿತಿಯ ಮಾಜಿ ಸದಸ್ಯ ಸಾಂಗ್ ಪಿಂಗ್ ಅವರ  ಮನವೊಲಿಸಿ ಸೆಂಟ್ರಲ್ ಗಾರ್ಡ್ ಬ್ಯೂರೋ (CGB) ನಿಯಂತ್ರಣವನ್ನು ಮರಳಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಸ್ತುತ ಕಮ್ಯೂನಿಷ್ಟ್‌ ಬಾಹುಗಳನ್ನು ಜಿಂಟಾವೊ ನಿಯಂತ್ರಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಒಂದು ವೇಳೆ ಈ ವರದಿಗಳು ನಿಜವಾದರೆ ಚೀನಾದಲ್ಲಿ ಸಂಭವಿಸಿದ ಅತಿದೊಡ್ಡ ರಾಜಕೀಯ ವಿಪ್ಲವಗಳಲ್ಲಿ ಇದು ಒಂದಾಗಲಿದೆ. ಇದರ ಜೊತೆಗೆ ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಜನರಲ್ ಲಿ ಕಿಯಾಮಿಂಗ್ ಅವರು ಕ್ಸಿ ಜಿನ್‌ಪಿಂಗ್ ವಿರುದ್ಧ ಬಂಡೆದಿದ್ದಾರೆ ಎಂಬ ವದಂತಿಗಳು ಕೇಳಿಬಂದಿವೆ. ಈಗ ಯುಎಸ್‌ನಲ್ಲಿ ನೆಲೆಸಿರುವ ಚೀನಾದ ಮಾನವ ಹಕ್ಕುಗಳ ಕಾರ್ಯಕರ್ತೆ ಜೆನ್ನಿಫರ್ ಝೆಂಗ್ ತನ್ನ ಟ್ವಿಟರ್ ಹ್ಯಾಂಡಲ್‌ನಲ್ಲಿ ಪಿಎಲ್‌ಎ ಆರ್ಮಿ ಬೀಜಿಂಗ್ ಕಡೆಗೆ ಚಲಿಸುತ್ತಿದೆ ಎಂದು ಹೇಳುವ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ.

ಯುಎಸ್ ನಲ್ಲಿ ನೆಲೆಸಿರುವ ಮತ್ತೊಬ್ಬ ಚೀನಾ ಮೂಲದ ಗಾರ್ಡನ್ ಚಾಂಗ್ ಅವರು ವೀಡಿಯೊವನ್ನು ಟ್ವೀಟ್ ಮಾಡಿ ಹೀಗೆ ಬರೆದಿದ್ದಾರೆ: ಮಿಲಿಟರಿ ವಾಹನಗಳು ಬೀಜಿಂಗ್‌ ಕಡೆಗೆ ಚಲಿಸುತ್ತಿರುವ ಸಮಯದಲ್ಲೇ ದೇಶದ 59% ವಿಮಾನಗಳ ಹಾರಾಟವನ್ನು ರದ್ದು ಪಡಿಸಲಾಗಿದೆ. CCP ಒಳಗೆ ಎಲ್ಲೋ ಬೆಂಕಿ ಹೊತ್ತಿಕೊಂಡಿದೆ. ಚೀನಾ ರಾಜಕೀಯವಾಗಿ ಅಸ್ಥಿರವಾಗುತ್ತಿರುವ ಕುರುಹುಗಳು ಕಾಣುತ್ತಿವೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಜಿಂಟಾವೊ ಮತ್ತೆ ಪ್ರಾಬಲ್ಯ ವೃದ್ಧಿಸಿಕೊಳ್ಳುತ್ತಿರುವ ಬೆನ್ನಲ್ಲೇ ಚೀನಾದ ಕಮ್ಯೂನಿಷ್ಟ್‌ ಪರದೆಗಳ ಮುಚ್ಚಿದ ಬಾಗಿಲುಗಳ ಹಿಂದೆ ಕಳೆದ ಹತ್ತು ದಿನಗಳಿಂದ ಸಂಪೂರ್ಣ ಗೌಪ್ಯವಾಗಿ ರಾಜಕೀಯ ಸಭೆಗಳು ನಡೆಯುತ್ತಿವೆ ಎನ್ನಲಾಗಿದೆ.

ಈ ಕುರಿತಾಗಿ ಹಲವಾರು ಸುದ್ದಿಗಳು ಹರಿದಾಡುತ್ತಿವೆಯಾದರೂ ಈ ವರೆಗೆ ಅಧಿಕೃತ ಮೂಲಗಳಿಂದ ದೃಢೀಕರಣ ಸಿಕ್ಕಿಲ್ಲ. ಭಾರತದ ರಕ್ಷಣಾ ವಿಚಾರಗಳ ತಜ್ಞ ಲೇಖಕ ನಿತಿನ್‌ ಗೋಖಲೆ ಸಹ ಈ ಬಗ್ಗೆ ಟ್ವಿಟ್‌ ಮಾಡಿದ್ದು, ಈ ಸುದ್ದಿ ಕೇವಲ ವದಂತಿ ಮಾತ್ರ ಎಂದು ಅಭಿಪ್ರಾಯಪಟ್ಟಿದ್ದಾರೆ.

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!