ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
……………………………………………………………………….
ಹೊಸ ದಿಗಂತ ವರದಿ, ಚಿತ್ರದುರ್ಗ:
ಜಿಲ್ಲೆಯಲ್ಲಿ ಜೂ.14 ರ ಸೋಮವಾರ ಬೆಳಗ್ಗೆ 6 ರಿಂದ ಲಾಕ್ಡೌನ್ ಸಡಿಲಗೊಳಿಸಲಾಗುತ್ತಿದೆ. ಆದರೂ ಸಾರ್ವಜನಿಕರು ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ ಎಚ್ಚರಿಸಿದರು.
ಇಲ್ಲಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಲಾಕ್ಡೌನ್ ಭಾಗಶಃ ತೆರವುಗೊಳಿಸುವ ಸಂಬಂಧ ಪರಿಷ್ಕೃತ ಮಾರ್ಗಸೂಚಿ ಹೊರಡಿಸಿದೆ. ಈ ಹೊಸ ಮಾರ್ಗಸೂಚಿಯು ಜೂನ್ 14 ರಿಂದ ಜಾರಿಗೆ ಬರಲಿದೆ ಎಂದರು.
ಜೂ.14 ರ ಮುಂಜಾನೆ 5 ರಿಂದ ಜೂನ್ 21ರ ಮುಂಜಾನೆ 6 ರವರೆಗೆ ಈ ಹೊಸ ಆದೇಶ ಜಾರಿಯಲ್ಲಿರುತ್ತದೆ. ಮುಂದುವರೆದು ವಾರಾಂತ್ಯಕ್ಕೆ ಶುಕ್ರವಾರ ಸಂಜೆ 7 ರಿಂದ ಸೋಮವಾರ ಮುಂಜಾನೆ 5 ರವರೆಗೆ ವಾರಾಂತ್ಯ ಕಫ್ರ್ಯೂ ಹಾಗೂ ಪ್ರತಿ ದಿನ ಸಂಜೆ 7 ರಿಂದ ಮರು ದಿನ ಮುಂಜಾನೆ 5 ರವರೆಗೆ ರಾತ್ರಿ ಕಫ್ಯೂ ಜಾರಿಗೊಳಿಸಿ ಆದೇಶಿಸಲಾಗಿರುತ್ತದೆ ಎಂದು ತಿಳಿಸಿದರು.
ವೈಯಕ್ತಿಕ ಒಡಾಟಗಳು, ಅನಿವಾರ್ಯವಲ್ಲದ ಚಟುವಟಿಕೆಗಳ ಕಾರ್ಯನಿರ್ವಹಣೆಯು ಕಡ್ಡಾಯವಾಗಿ ನಿಷೇಧಿಸಿ ಆದೇಶಿಸಲಾಗಿದೆ. ಇದನ್ನು ಉಲ್ಲಂಘಿಸುವವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ-2005 ಮತ್ತು ಭಾರತೀಯ ದಂಡ ಸಂಹಿತೆಯನ್ವಯ ಸೂಕ್ತ ಕಾನೂನು ಕ್ರಮಕ್ಕೆ ಒಳಪಡಿಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಈ ಆದೇಶದ ಪರಿಣಾಮಕಾರಿ ಜಾರಿಗೆ ಕ್ರಮಕೈಗೊಳ್ಳಲಾಗಿದೆ. ಸರ್ಕಾರದ ಮಾರ್ಗಸೂಚಿಯಲ್ಲಿ ಪ್ರಸ್ತಾಪಿಸಿರುವ ವಿವಿಧ ವಲಯವಾರು ಚಟುವಟಿಕೆಗಳ ನಿರ್ಬಂಧಗಳ ಬಗ್ಗೆ ಆದೇಶವನ್ನು ಪರಿಣಾಮಕಾರಿ ಜಾರಿಗೊಳಿಸಿ, ನಿಯಮಿತವಾಗಿ ಪರಿಸ್ಥಿತಿಯನ್ನು ಅವಲೋಕಿಸಿ ಕ್ರಮಕೈಗೊಳ್ಳಲು ಸಂಬಂಧಪಟ್ಟ ಇಲಾಖೆಯ ಜಿಲ್ಲಾ ಮುಖ್ಯಸ್ಥರಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಹೊಸ ಮಾರ್ಗಸೂಚಿಯನ್ವಯ ಆಹಾರ, ದಿನಸಿ, ಹಣ್ಣು ತರಕಾರಿ, ಮಾಂಸ, ಮೀನು, ಡೇರಿ ಉತ್ಪನ್ನಗಳು, ಹಾಲಿನ ಬೂತ್, ಪ್ರಾಣಿ ಆಹಾರ, ಬೀದಿ ಬದಿ ವ್ಯಾಪಾರ, ಪಡಿತರ ಅಂಗಡಿಗಳನ್ನು ಬೆಳಗ್ಗೆ 6 ರಿಂದ ಮಧ್ಯಾಹ್ನ 2 ರವರೆಗೆ ತೆರೆಯಬಹುದು. ಕನ್ನಡಕದ ಅಂಗಡಿಗಳಿಗೂ ಬೆಳಿಗ್ಗೆ 6 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ತೆರೆಯಲು ಅವಕಾಶ ನೀಡಲಾಗಿದೆ ಎಂದು ಹೇಳಿದರು.
ಮಧ್ಯಾಹ್ನ 2 ರ ಬಳಿಕ ಅನಗತ್ಯವಾಗಿ ಯಾರು ರಸ್ತೆಗಿಳಿಯುವಂತಿಲ್ಲ. ಅಂಗಡಿ ಮುಂಗಟ್ಟುಗಳನ್ನು 2 ಗಂಟೆಗೆ ಸರಿಯಾಗಿ ಮುಚ್ಚಬೇಕು. ಉದ್ಯಾನ ವನಗಳಲ್ಲಿ ಬೆಳಿಗ್ಗೆ 5 ರಿಂದ 10 ರವರೆಗೆ ವಾಕ್ ಮತ್ತು ಜಾಗಿಂಗ್ ಮಾಡಬಹುದು. ಅಲ್ಲಿ ಗುಂಪು ಸೇರುವಂತಿಲ್ಲ. ದಿನದ 24 ಗಂಟೆಯು ಎಲ್ಲ ಬಗೆಯ ವಸ್ತುಗಳನ್ನು ಮನೆಗಳಿಗೆ ಪೂರೈಕೆ ಮಾಡುವ ಹೋಂ ಡೆಲಿವರಿಗೆ ಅವಕಾಶ ನೀಡಲಾಗಿದೆ ಎಂದರು.
ಬಾರ್, ಹೋಟೆಲ್ಗಳಲ್ಲಿ ಪಾರ್ಸೆಲ್ಗೆ ಅವಕಾಶ, ಮದ್ಯ ಮಳಿಗೆಗಳು ಮಧ್ಯಾಹ್ನ 2 ಗಂಟೆವರೆಗೆ ತೆರೆಯಬಹುದು. ಬಸ್ ಸಂಚಾರಕ್ಕೆ ಸಂಪೂರ್ಣ ನಿರ್ಬಂಧ ವಿಧಿಸಲಾಗಿದೆ. ಆಟೋ ಮತ್ತು ಟ್ಯಾಕ್ಸಿಗಳಲ್ಲಿ ಇಬ್ಬರು ಮಾತ್ರ ಪ್ರಯಾಣಿಸಬಹುದು. ಕಟ್ಟಡ ನಿರ್ಮಾಣ ಚಟುವಟಿಕೆಗಳಿಗೆ ಅವಕಾಶ, ಕೃಷಿ ಸಂಬಂಧಿತ ಇಲಾಖೆ ಕಚೇರಿಗಳು, ಲೋಕೋಪಯೋಗಿ ಇಲಾಖೆ, ವಸತಿ, ಸಹಕಾರ, ಕಂದಾಯ, ನಬಾರ್ಡ್ ಮತ್ತು ಕೇಂದ್ರ ಸರ್ಕಾರದ ಕಚೇರಿಗಳು ಶೇ.೫೦ ರಷ್ಟು ಸಿಬ್ಬಂದಿ ಇಟ್ಟುಕೊಂಡು ಕಾರ್ಯ ನಿರ್ವಹಿಸಬಹುದು ಎಂದರು.