ಚಾಕೊಲೇಟ್​ ಗಂಟಲಲ್ಲಿ ಸಿಲುಕಿ ಶಾಲಾ ಬಾಲಕಿ ದಾರುಣ ಸಾವು

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಶಾಲೆಗೆ ಹೊರಟಿದ್ದ ಬಾಲಕಿ ಮನೆಯವರು ನೀಡಿದ ಚಾಕೊಲೇಟ್​ ಅನ್ನು ಬಾಯಿಗೆ ಹಾಕಿಕೊಂಡು ಶಾಲಾ ಬಸ್ ಬಂತೆಂದು ಬಸ್ ಬಳಿಗೆ ಓಡುವಾಗ ಚಾಕೊಲೇಟ್​ ನುಂಗಿದ ಪರಿಣಾಮ ಬಾಲಕಿ ಉಸಿರುಗಟ್ಟಿ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ. ಬೈಂದೂರು ತಾಲೂಕಿನ ಬಿಜೂರು ಗ್ರಾಮದ ಕಬ್ಸೆಯ ನಿವಾಸಿ ಸುಪ್ರೀತಾ ಪೂಜಾರಿ ಎಂಬುವರ ಮಗಳು ಸಮನ್ವಿ (6) ಎಂಬ ಮೃತಪಟ್ಟ ಬಾಲಕಿ.
ಸಮನ್ವಿ ಬುಧವಾರ ಬೆಳಗ್ಗೆ ಎಂದಿನಂತೆಯೇ ಶಾಲೆಗೆ ಹೊರಡಲು ಸಮವಸ್ತ್ರ ಧರಿಸಿ ಸಿದ್ಧವಾಗಿದ್ದರು. ಆದರೆ, ಅದೇಕೋ ಆಕೆಯ ಮನಸ್ಸು ಶಾಲೆಗೆ ಹೋಗಲು ಒಪ್ಪಿರಲಿಲ್ಲ. ಇದರಿಂದ ಮನೆಯವರು ಆಕೆಗೆ ಕೈಯಲ್ಲೊಂದು ಚಾಕೊಲೇಟ್​​ ನೀಡಿ ಪುಸಲಾಯಿಸಿ ಶಾಲೆಗೆ ಹೊರಡಿಸಿದ್ದರು. ಅಷ್ಟೊತ್ತಿಗಾಗಲೇ ಶಾಲಾ ವಾಹನ ಬಂದಿದೆ. ಇದರಿಂದ ಗಾಬರಿಗೊಂಡ ಬಾಲಕಿ ಸಮನ್ವಿ ಕೈಯಲ್ಲಿದ್ದ ಚಾಕೊಲೇಟ್​ ಪ್ಲಾಸ್ಟಿಕ್ ಕವರ್ ಸಮೇತ ಬಾಯಿಗೆ ಹಾಕಿಕೊಂಡು ವಾಹನದತ್ತ ಓಡಿದ್ದಾಳೆ. ಹೀಗೆ ಓಡುವಾಗ ಚಾಕೊಲೇಟ್​ ಗಂಟಲಲ್ಲಿ ಸಿಕ್ಕಿಕೊಂಡಿದೆ. ಗಂಟಲಲ್ಲಿ ಚಾಕೊಲೇಟ್​ ಕವರ್ ಸಮೇತ ಸಿಕ್ಕಿಹಾಕಿಕೊಂಡ ಪರಿಣಾಮ ಉಸಿರುಗಟ್ಟಿ ಶಾಲಾ ವಾಹನದ ಮೆಟ್ಟಿಲ ಬಳಿಯೇ ಕುಸಿದು ಬಿದ್ದಿದ್ದಾರೆ. ಮನೆಯವರು ಶಾಲಾ ವಿದ್ಯಾರ್ಥಿಗಳು, ಸ್ಕೂಲ್ ವ್ಯಾನ್ ಡ್ರೈವರ್ ಎಲ್ಲರೂ ಮಗುವಿಗೆ ಕೃತಕ ಉಸಿರಾಟ ನೀಡಲು ಪ್ರಯತ್ನಿಸಿದರೂ ಫಲಕಾರಿಯಾಗಲಿಲ್ಲ. ಕೂಡಲೇ ಬಾಲಕಿಯನ್ನು ಬೈಂದೂರು ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅದಾಗಲೇ ಮಗು ಮೃತಪಟ್ಟಿದೆ ಎಂದು ತಿಳಿದು ಬಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!