‌ʼಜೀಸಸ್‌ ಗ್ರೇಟ್ʼ ಎಂದದಕ್ಕೆ ಮೆಕ್ಯಾನಿಕ್‌ಗೆ ಪಾಕ್‌ ನಲ್ಲಿ ಗಲ್ಲು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಧರ್ಮನಿಂದೆ ಆರೋಪದಡಿ ಕಳೆದ ಐದು ವರ್ಷಗಳಿಂದ ವಿಚಾರಣೆ ಎದುರಿಸುತ್ತಿದ್ದ ಕ್ರಿಶ್ಚಿಯನ್ ಮೆಕ್ಯಾನಿಕ್‌ಗೆ ಲಾಹೋರ್ ನ್ಯಾಯಾಲಯವು ಮರಣದಂಡನೆ ವಿಧಿಸಿದೆ.
ಈ ಪ್ರಕರಣ ನಡೆದಿದ್ದು 2017 ರಲ್ಲಿ, ಲಾಹೋರ್‌ನಲ್ಲಿ ಮೆಕ್ಯಾನಿಕ್‌ ಶಾಪ್‌ ಇರಿಸಿಕೊಂಡಿದ್ದ  ಅಶ್ಫಾಕ್ ಮಸಿಹ್ ಅವರು ಮುಸ್ಲಿಂ ಗ್ರಾಹಕನೊಬ್ಬನ ಬೈಕ್‌ ರಿಪೇರಿ ಮಾಡಿದ ಬಳಿಕ ಹಣ ನೀಡುವಂತೆ ಕೋರಿದರು. ಆದರೆ ಆ ಗ್ರಾಹಕ ಪೂರ್ತಿ ಹಣವನ್ನು ನೀಡದೆ ಚೌಕಾಸಿ ಮಾಡಿದ್ದಾನೆ. ಅಲ್ಲದೆ ತಾನೊಬ್ಬ ಧಾರ್ಮಿಕ ವ್ಯಕ್ತಿಯಾಗಿರುವ ಕಾರಣದಿಂದ ಉಳಿದ ಹಣವನ್ನು ಮನ್ನಾ ಮಾಡುವಂತೆ ಆಗ್ರಹಿಸಿದ್ದಾನೆ. ಆದರೆ ಮಸಿಹ್ ಆತನ ಈ ವಿನಂತಿಯನ್ನು ನಿರಾಕರಿಸಿದ್ದಾರೆ. ಈ ವಿಚಾರವಾಗಿ ಮಾತಿಗೆ ಮಾತು ಬೆಳೆದು ವಾಗ್ವಾದ ನಡೆದಿದೆ. ಈ ವೇಳೆ ಮಸೀಹ್‌, ತಾನು ಕ್ರಿಸ್ತನನ್ನು ನಂಬುತ್ತೇನೆ. ಕ್ರಿಶ್ಚಿಯನ್ನರಿಗೆ ಕ್ರಿಸ್ತನೇ ಸರ್ವೋಚ್ಚ ದೇವರು ಎಂದಿದ್ದಾರೆ. ಈ ವೇಳೆ ಇವರ ಗಲಾಟೆ ನೋಡಿ ಜನಸಮೂಹವು ಜಮಾಯಿಸಿದೆ, ಪ್ರವಾದಿ ಮುಹಮ್ಮದ್ ಅವರನ್ನು ಮಸಿಹ್  ಅಗೌರವಿಸಿದ್ದಾನೆ  ಎಂದು ಆರೋಪಿಸಿದ್ದಾರೆ. ಕ್ರಿಶ್ಚಿಯನ್ನರಿಗೆ ಜೀಸಸ್ ಗ್ರೇಟ್ ಎಂದು ಮೆಕ್ಯಾನಿಕ್ ಹೇಳಿದ್ದು ಆತನ ಬಂಧನಕ್ಕೆ ಕಾರಣವಾಗಿದೆ.

ಮಸೀಹ್‌ ಗೆ ಪತ್ನಿ ಮತ್ತು ಮಗಳಿದ್ದಾರೆ. ಆತನನ್ನು ಬಂಧಿಸಿದ ನಂತರ, ಕುಟುಂಬವು ಭಯದಿಂದ ಲಾಹೋರ್‌ನಿಂದ ಓಡಿಹೋಗಿದೆ ಎಂದು ವರದಿಯಾಗಿದೆ. ಅವರು ಜೈಲಿನಲ್ಲಿದ್ದಾಗ ತಾಯಿಯನ್ನು ಸಹ ಕಳೆದುಕೊಂಡಿದ್ದಾರೆ.
ಪಾಕಿಸ್ತಾನದಲ್ಲಿ ಧರ್ಮನಿಂದೆಯ ಕಾನೂನಿನಡಿಯಲ್ಲಿ ಮರಣದಂಡನೆ ವಿಧಿಸಿರುವುದು ಇದೇ ಮೊದಲಲ್ಲ. ಸೆಪ್ಟೆಂಬರ್ 2021 ರಲ್ಲಿ, ಸ್ಥಳೀಯ ಲಾಹೋರ್ ನ್ಯಾಯಾಲಯವು ಶಾಲೆಯ ಪ್ರಾಂಶುಪಾಲರೊಬ್ಬರಿಗೆ ಮರಣದಂಡನೆ ವಿಧಿಸಿತು. ಪ್ರಾಂಶುಪಾಲರ ವಿರುದ್ಧದ ಆರೋಪವೆಂದರೆ ಅವರು ವಿತರಿಸಿದ ಕರಪತ್ರಗಳಲ್ಲಿ ಇಸ್ಲಾಂನ ಪ್ರವಾದಿ ಎಂಬ ವಿಚಾರವನ್ನು ಸ್ಪಷ್ಟವಾಗಿ ನಮೂದಿಸಿರಲಿಲ್ಲ.

ಈ ವರ್ಷದ ಜನವರಿಯಲ್ಲಿ ನಡೆದ ಮತ್ತೊಂದು ಘಟನೆಯಲ್ಲಿ, 26 ವರ್ಷದ ಮಹಿಳೆಯೊಬ್ಬಳು ತನ್ನ ವಾಟ್ಸಾಪ್ ಸ್ಟೇಟಸ್ ನಲ್ಲಿ ‘ದೈವನಿಂದೆಯ ವಿಚಾರವನ್ನು’ ಪೋಸ್ಟ್ ಮಾಡಿದ್ದಕ್ಕಾಗಿ ಮರಣದಂಡನೆ ವಿಧಿಸಲಾಯಿತು. ಆಕೆ ಪ್ರವಾದಿಯವರ ವ್ಯಂಗ್ಯಚಿತ್ರಗಳನ್ನು ಸ್ಟೇಟಸ್‌ ಹಾಕಿಕೊಂಡಿದ್ದರು.
ಪಾಕಿಸ್ತಾನದ ರಾಷ್ಟ್ರೀಯ ನ್ಯಾಯ ಮತ್ತು ಶಾಂತಿ ಆಯೋಗದ ಅಂಕಿಅಂಶಗಳ ಪ್ರಕಾರ, 1987 ರಿಂದ 2018 ರವರೆಗೆ ಧರ್ಮನಿಂದೆಯ ಕಾನೂನಿನಡಿಯಲ್ಲಿ 776 ಮುಸ್ಲಿಮರು, 505 ಅಹ್ಮದೀಯರು, 229 ಕ್ರಿಶ್ಚಿಯನ್ನರು ಮತ್ತು 30 ಹಿಂದೂಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!