ಹೊಸದಿಗಂತ ಡಿಜಿಟಲ್ ಡೆಸ್ಕ್:
ಟಾಲಿವುಡ್‌ನ ದಿಗ್ಗಜ ನಟ ನಂದಮೂರಿ ಬಾಲಕೃಷ್ಣ ಮತ್ತೆ ಅಘೋರಿ ರೂಪದಲ್ಲಿ ತಾಳಿದ್ದಾರೆ. ಅವರ 65ನೇ ಹುಟ್ಟುಹಬ್ಬದ ದಿನವೇ ‘ಅಖಂಡ-2’ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಟೀಸರ್‌ನಲ್ಲಿ ನಂದಮೂರಿ ಅವರ ಎಂಟ್ರಿ, ಗಂಭೀರ ಧ್ವನಿ, ಮತ್ತು ಭಯಾನಕ ಅಘೋರಿ ವೇಷ ಎಲ್ಲವೂ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.
ಈ ಚಿತ್ರವನ್ನು ನಿರ್ದೇಶಿಸುತ್ತಿರುವವರು ಬೊಯಪಾಟಿ ಶ್ರೀನು. ಈ ಹಿಂದೆ ಇವರ ಜೊತೆಗೆ ಬಾಲಕೃಷ್ಣ “ಸಿಂಹ”, “ಲಿಜೆಂಡ್”, ಮತ್ತು “ಅಖಂಡ” ಸಿನಿಮಾಗಳಲ್ಲಿ ಕೆಲಸ ಮಾಡಿದ್ದು, ಮೂರು ಚಿತ್ರಗಳೂ ಭರ್ಜರಿ ಯಶಸ್ಸು ಗಳಿಸಿದ್ದವು. ‘ಅಖಂಡ-2’ ಕೂಡ ಅದೇ ಯಶಸ್ಸನ್ನು ಮುಂದುವರಿಸಬಹುದೆಂಬ ನಿರೀಕ್ಷೆ ಇದೆ.
ಚಿತ್ರದ ಶೂಟಿಂಗ್ ಈಗಾಗಲೇ ಜಾರ್ಜಿಯಾದಲ್ಲಿ ನಡೆಯುತ್ತಿದ್ದು, ಸೆಪ್ಟೆಂಬರ್ 25ರಂದು ಸಿನಿಮಾ ರಿಲೀಸ್ ಆಗಲಿದೆ ಎಂಬ ಮಾಹಿತಿ ಚಿತ್ರತಂಡದಿಂದ ಬಂದಿದೆ. ಎಸ್.ಥಮನ್ ಸಂಗೀತ ನೀಡುತ್ತಿರುವ ಈ ಚಿತ್ರಕ್ಕೆ ಸಂತೋಷ್ ಡಿ ಡೆಟಕೆ ಕ್ಯಾಮರಾ ಕಾರ್ಯ ನಿರ್ವಹಿಸುತ್ತಿದ್ದಾರೆ.
ಅಭಿಮಾನಿಗಳ ನಿರೀಕ್ಷೆಗೆ ತಕ್ಕಂತೆ ‘ಅಖಂಡ-2’ ಟೀಸರ್ ಅದ್ಧೂರಿಯಾಗಿ ಮೂಡಿಬಂದಿದ್ದು, ಸಿನಿಮಾ ಇನ್ನೂ ಭರ್ಜರಿ ಮಟ್ಟದಲ್ಲಿ ಮೂಡಿಬರಲಿದೆ ಎಂಬ ಭರವಸೆ ನೀಡುತ್ತಿದೆ.