ಜೆಮಿನಿ ಸರ್ಕಸ್ ಸಂಸ್ಥಾಪಕ ಎಂ.ವಿ ಶಂಕರನ್ ವಿಧಿವಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಜೆಮಿನಿ ಸರ್ಕಸ್‌ನ ಸಂಸ್ಥಾಪಕ ಮತ್ತು ಭಾರತೀಯ ಸರ್ಕಸ್‌ನ ಪ್ರವರ್ತಕರಾಗಿದ್ದ ಜೆಮಿನಿ ಶಂಕರನ್ ಅಲಿಯಾಸ್‌ ಎಂವಿ ಶಂಕರನ್‌ (99) ಭಾನುವಾರದಂದು ಕಣ್ಣೂರಿನ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ.

ಎಂವಿ ಶಂಕರನ್‌ ಕಳೆದ ಕೆಲವು ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು, ಭಾನುವಾರ ರಾತ್ರಿ ಮೃತಪಟ್ಟಿದ್ದಾರೆ.

ಅವರ ನಿಧನಕ್ಕೆ ಸಂತಾಪ ಸೂಚಿಸಿರುವ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಭಾರತೀಯ ಸರ್ಕಸ್ ಅನ್ನು ವಿಶ್ವದಾದ್ಯಂತ ಜನಪ್ರಿಯಗೊಳಿಸುವಲ್ಲಿ ಶ್ರೀ ಶಂಕರನ್ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಶ್ಲಾಘಿಸಿದರು. “ಅವರು ಭಾರತೀಯ ಸರ್ಕಸ್ ಅನ್ನು ಆಧುನೀಕರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು ಮತ್ತು ವಿದೇಶಿ ಪ್ರದರ್ಶಕರು ಮತ್ತು ಅವರ ತಂತ್ರಗಳನ್ನು ಅಳವಡಿಸಿದರು”. ಪ್ರಗತಿಪರ ದೃಷ್ಟಿಕೋನ ಹೊಂದಿದ್ದ ಶ್ರೀ ಶಂಕರನ್ ಅವರೊಂದಿಗೆ ನಿಕಟ ಸಂಪರ್ಕ ಹೊಂದಿದ್ದಾಗಿ ಮುಖ್ಯಮಂತ್ರಿ ಹೇಳಿದರು.

ಶಂಕರನ್ ಅವರು ವಿವಿಧ ಪ್ರಧಾನ ಮಂತ್ರಿಗಳು, ರಾಷ್ಟ್ರಪತಿಗಳು ಮತ್ತು ಇತರ ಪ್ರಮುಖ ವ್ಯಕ್ತಿಗಳೊಂದಿಗೆ ನಿಕಟ ಸಂಬಂಧವನ್ನು ಹೊಂದಿದ್ದರು. ಅವರ ನಿಧನದಿಂದ ದೇಶದ ಸರ್ಕಸ್ ಕಲೆಗೆ ಅಪಾರ ನಷ್ಟವಾಗಿದೆ ಎಂದರು.

1924 ರಲ್ಲಿ ಜನಿಸಿದ ಶಂಕರನ್, ಪ್ರಸಿದ್ಧ ಸರ್ಕಸ್ ಕಲಾವಿದ ಕೀಲೇರಿ ಕುಂಞಿಕಣ್ಣನ್ ಅವರ ಬಳಿ ಮೂರು ವರ್ಷಗಳ ಕಾಲ ತರಬೇತಿ ಪಡೆದರು. ಬಳಿಕ ಮಿಲಿಟರಿಗೆ ಸೇರಿ ಎರಡನೇ ಮಹಾಯುದ್ಧದ ನಂತರ ನಿವೃತ್ತರಾದರು.

ದೇಶಾದ್ಯಂತ ವಿವಿಧ ಸರ್ಕಸ್ ಗುಂಪುಗಳೊಂದಿಗೆ ಕೆಲಸ ಮಾಡಿದ ಅವರು ಸ್ನೇಹಿತನೊಂದಿಗೆ ಸೇರಿ 1951 ರಲ್ಲಿ ವಿಜಯ ಸರ್ಕಸ್‌ ಕಂಪೆನಿಯನ್ನು ಖರೀದಿಸಿದ್ದರು. ಬಳಿಕ ಅದನ್ನೇ ಜೆಮಿನಿ ಸರ್ಕಸ್‌ ಎಂದು ನಾಮಕರಣ ಮಾಡಿದ್ದರು. ಇದಾದ ನಂತರ ಜಂಬೋ ಸರ್ಕಸ್ ಕಂಪೆನಿಯನ್ನೂ ಪ್ರಾರಂಭಿಸಿದರು.

ಭಾರತದಲ್ಲಿ ಸರ್ಕಸ್‌ ಗೆ ಹೊಸ ರೂಪ ಕೊಟ್ಟಿದ್ದ ಶಂಕರನ್ ಅವರ ಸಾಧನೆಯನ್ನು ಗುರುತಿಸಿ ಅಂದಿನ ಕೇಂದ್ರ ಸರ್ಕಾರ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

ದೇಶದ ಅತ್ಯಂತ ಹಿರಿಯ ಸರ್ಕಸ್ ಕಲಾವಿದರಾಗಿರುವ ಶಂಕರನ್ ಅವರು ಇಂಡಿಯಾ ಸರ್ಕಸ್ ಫೆಡರೇಶನ್ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.

ಅವರ ಅಂತ್ಯಕ್ರಿಯೆ ಮಂಗಳವಾರ ಕಣ್ಣೂರಿನ ಪಯ್ಯಂಬಳಂನಲ್ಲಿ ನಡೆಯಲಿದೆ. ಪತ್ನಿ, ಒರ್ವ ಪುತ್ರಿ ಮತ್ತು ಇಬ್ಬರು ಪುತ್ರರನ್ನು ಅಗಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!