ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಾಸನ ಜಿಲ್ಲೆಯ ಸಕಲೇಶಪುರ-ಬಾಳ್ಳುಪೇಟೆಯ ನಡುವೆ ರೈಲು ಹಳಿಯ ಮೇಲೆ ಗುಡ್ಡವು ಕುಸಿತಗೊಂಡು ಬೃಹತ್ ಪ್ರಮಾಣದ ಮಣ್ಣು ಹಳಿಯ ಮೇಲೆ ಬಿದ್ದ ಮಣ್ಣನ್ನು ಸಂಪೂರ್ಣವಾಗಿ ಮಂಗಳವಾರ ತೆರವುಗೊಳಿಸಲಾಯಿತು. ಬಳಿಕ ಹಳಿಯನ್ನು ಪರಿಶೀಲನೆ ನಡೆಸಿ ಟ್ರಾಕ್ಸ್ ಫಿಟ್ ಎಂದು ಅಧಿಕಾರಿಗಳು ಸೂಚಿಸಿದ ಬಳಿಕ ರೈಲು ಸಂಚಾರಕ್ಕೆ ಗ್ರೀನ್ ಸಿಗ್ನಲ್ ದೊರಕಿತು.
ಬುಧವಾರದಿಂದ ನಿಗದಿತ ಸಮಯದ ವೇಳಾಪಟ್ಟಿಯಂತೆ ಎಲ್ಲಾ ರೈಲುಗಳ ಸಂಚಾರ ಆರಂಭವಾಗಲಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಶುಕ್ರವಾರದಿಂದ ಮಂಗಳವಾರದ ತನಕ ನಿರಂತರ ಸಮರೋಪಾದಿಯ ಕಾರ್ಯಾರಣೆಯನ್ನು ರೈಲ್ವೆ ಇಲಾಖೆ ನಡೆಸಿತ್ತು. ಹಳಿಯ ಮೇಲೆ ಬಿದ್ದಿದ್ದ ಬೃಹತ್ ಮಣ್ಣನ್ನು ಸಂಪೂರ್ಣವಾಗಿ ಸೋಮವಾರ ತೆರವುಗೊಳಿಸಲಾಯಿತು. ಗುಡ್ಡ ಜರಿತವಾದ ಸ್ಥಳದಲ್ಲಿ ಬಂಡೆ ಮತ್ತು ಬೋಲ್‌ಡ್ರಾಸ್ ಕಲ್ಲಿನಿಂದ ಕಟ್ಟೆ ಕಟ್ಟಿ ಅದಕ್ಕೆ ಬಲೆ ಕಟ್ಟಿ ಬಲಿಷ್ಠಗೊಳಿಸಲಾಗಿದೆ.ಬಳಿಕ ಗುಣ ಮಟ್ಟ ಪರೀಕ್ಷೆ ನಡೆಸಲಾಯಿತು.ಸುಮಾರು ೪೩೦ ಕಾರ್ಮಿಕರು, ಜೆಸಿಬಿ ಯಂತ್ರಗಳು, ಹಿತಾಚಿಗಳು ನಿರಂತರವಾಗಿ ೦೫ ದಿನ ಸಮರೋಪಾದಿಯಲ್ಲಿ ಅಹರ್ನಿಶಿ ಕಾರ್ಯಾಚರಣೆ ಮಾಡಿ ಹಳಿಯ ಮೇಲೆ ಬಿದ್ದಿದ್ದ ಬೃಹತ್ ಮಣ್ಣನ್ನು ಸಂಪೂರ್ಣವಾಗಿ ಮಂಗಳವಾರ ತೆರವುಗೊಳಿಸಿದರು. ಬಳಿಕ ಪ್ರಯಾಣಿಕರ ಸುರಕ್ಷತಾ ದೃಷ್ಠಿಯಿಂದ ರೈಲ್ವೆ ಇಲಾಖಾಧಿಕಾರಿಗಳು ಗುಣ ಮಟ್ಟ ಪರೀಕ್ಷೆ ನಡೆಸಿ ರೈಲು ಸಂಚಾರಕ್ಕೆ ಗ್ರೀನ್ ಸಿಗ್ನಲ್ ನೀಡಿತು. ರೈಲ್ವೆ ಅಧಿಕಾರಿಗಳು ಮತ್ತು ಇಂಜೀನಿಯರ್‌ಗಳು ಪ್ರಾಯೋಗಿಕ ಸಂಚಾರ ನಡೆಸಿ ರೈಲು ಪ್ರಯಾಣಕ್ಕೆ ಅನುಮತಿ ನೀಡಿದರು.
ಎಲ್ಲಾ ರೈಲುಗಳ ಸಂಚಾರ ಆರಂಭ
ಹಳಿಗಳು ಸಂಚಾರ ಯೋಗ್ಯವಾದ ಕಾರಣ ಎಲ್ಲಾ ರೈಲುಗಳು ತಮ್ಮ ಸಂಚಾರವನ್ನು ನಿಗದಿತ ಸಮಯಕ್ಕನುಗುಣವಾಗಿ ಇಂದಿನಿಂದ(ಬುಧವಾರ) ಆರಂಭಿಸಲಿದೆ. ಈ ಹಿಂದೆ ಇಲಾಖೆ ತಿಳಿಸಿದಂತೆ ಬುಧವಾರ ರದ್ದುಗೊಂಡ ರೈಲುಗಳು ಕೂಡಾ ಸಂಚಾರ ಆರಂಭಿಸಲಿದೆ. ಮೈಸೂರು ವಿಭಾಗದ ಸಕಲೇಶಪುರ-ಬಾಳ್ಳುಪೇಟೆ ನಿಲ್ದಾಣಗಳ ನಡುವಿನ ಭೂಕುಸಿತಕ್ಕೆ ಸಂಬಂಧಿಸಿದಂತೆ ಹಳಿಯನ್ನು ಪುನಃಸ್ಥಾಪಿಸಲಾಗಿದೆ ಮತ್ತು ರೈಲು ಕಾರ್ಯಾಚರಣೆಗೆ ಯೋಗ್ಯವಾಗಿದೆ ಎಂದು ಪ್ರಮಾಣೀಕರಿಸಲಾಗಿದೆ. ಎಲ್ಲಾ ರೈಲು ಸೇವೆಗಳನ್ನು ಅವುಗಳ ನಿಗದಿತ ದಿನಾಂಕಗಳು ಮತ್ತು ಸಮಯದ ಪ್ರಕಾರ ಬುಧವಾರದಿಂದ ಪುನರಾರಂಭಿಸಲಾಗುತ್ತದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.