Saturday, August 13, 2022

Latest Posts

ಅನಂತ ಚತುರ್ದಶಿ ವ್ರತಾಚರಣೆ: ಹಬ್ಬದ ಬಗ್ಗೆ ತಿಳಿಯಲೇ ಬೇಕಾದ ಸಂಗತಿಗಳಿವು

  • ಡಾ. ವಾರಿಜಾ ನಿರ್ಬೈಲ್
    ಹಿರಿಯ ಸಂಶೋಧಕಿ,
    ದ್ರಾವಿಡ ಭಾಷೆಗಳ ಅಂತರರಾಷ್ಟ್ರೀಯ ಸಂಸ್ಥೆ ತಿರುವನಂತಪುರಂ.

ಭಾರತವು ವಿವಿಧ ಭಾಷೆ, ಸಂಸ್ಕೃತಿ, ಪ್ರಾದೇಶಿಕ ವೈವಿಧ್ಯ ಗಳಿಂದ ಕೂಡಿದ ವಿಶಿಷ್ಟವಾದ ದೇಶ. ಇಲ್ಲಿ ಹಲವು ಮತ ಧರ್ಮಗಳ ಜನರು ತಂತಮ್ಮ ಧಾರ್ಮಿಕ ನಂಬಿಕೆ, ರೂಢಿ ಸಂಪ್ರದಾಯಕ್ಕನುಗುಣವಾಗಿ ವಿವಿಧ ಹಬ್ಬ ಹರಿದಿನಗಳನ್ನು ಆಚರಿಸುತ್ತಾರೆ. ಭಾರತದಲ್ಲಿ ಆಚರಿಸುವ ಹಬ್ಬಗಳನ್ನು ರಾಷ್ಟ್ರೀಯಹಬ್ಬಗಳು, ಪ್ರಾದೇಶಿಕ ಹಬ್ಬಗಳು, ಧಾರ್ಮಿಕ ಹಬ್ಬಗಳು, ಎಂದೆಲ್ಲಾ ವಿಧಗಳಗಿ ವರ್ಗೀಕರಿಸಬಹುದು. ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯ ದಿನಾಚರಣೆ, ಸ್ವಾತಂತ್ರ್ಯಹೋರಾಟಗಾರರ ಹಾಗೂ ದೇಶದ ಅಭಿವೃದ್ಧಿಗಾಗಿ ವಿಶೇಷ ಸೇವೆ ಸಲ್ಲಿಸಿದವರ ಹುಟ್ಟು ಹಬ್ಬ ಅಥವಾ ಪುಣ್ಯ ತಿಥಿಗಳ ಆಚರಣೆ ರಾಷ್ಟ್ರೀಯಹಬ್ಬಗಳ ಗುಂಪಿಗೆ ಸೇರುತ್ತದೆ. ಶ್ರೀ ಕೃಷ್ಣಾಷ್ಠಮೀ, ಗಣೇಶ ಚೌತಿ, ಈದ್, ಈಸ್ಟರ್, ಇವೆಲ್ಲ ಧಾರ್ಮಿಕ ಹಬ್ಬಗಳು. ಕರ್ನಾಟಕದಲ್ಲಿ ದಸರಾ, ಕೇರಳದಲ್ಲಿ ಓಣಂ, ತಮಿಳು ನಾಡಿ ನಲ್ಲಿ ಪೊಂಗಲ್, ಭಾರತದ ಈಶಾನ್ಯ ರಾಜ್ಯಗಳಲ್ಲಿ ವೈಶಾಖಿ ಹಾಗೂ ಬೀಹೂ ಎಂಬ ಹೊಸವರ್ಷಾಚರಣೆ, ಉತ್ತರ ಭಾರತದ ಹೋಳಿ ಹಬ್ಬ ಅಲ್ಲದೆ ಕೃಷಿ ಸಂಬಂಧಿಯಾದ ಸುಗ್ಗಿ, ಹೊಸ ಬೆಳೆಯನ್ನು ಮನೆಗೆ ತುಂಬಿಸಿಕೊಳ್ಳುವಂತಹ ಇತರ ಹಬ್ಬಗಳು,ತಿರುವನಂತಪುರಂ ನಲ್ಲಿ ಲಕ್ಷ ಗಟ್ಟಳೆ ಭಕ್ತರು ಸೇರಿ ಆಚರಿಸುವ ಪೊಂಗಾಲ ಉತ್ಸವ, ಇವೆಲ್ಲ ಪ್ರಾದೇಶಿಕ ಹಬ್ಬಗಳು. ಇವುಗಳು ಹಿಂದೂ ಹಬ್ಬಗಳಂತೆ ತೋರಿದರೂ ಆಯಾ ಪ್ರದೇಶದ ಎಲ್ಲ ಮತಧರ್ಮದವರೂ ಈ ಹಬ್ಬಗಳನ್ನು ನಾಡ ಹಬ್ಬವಾಗಿ ಆಚರಿಸುತ್ತಾರೆ. ಏಕೆಂದರೆ ಇವು ಆಯಾ ನೆಲ, ಜಲ, ವಾಯುಗುಣಕ್ಕೆ ಸಂಬಂಧಿಸಿದ ಹಬ್ಬಗಳು. ಆಯಾ ಪ್ರದೇಶದ ನೃತ್ಯ, ಸಂಗೀತ, ಇತ್ಯಾದಿ ಸಾಂಸ್ಕೃತಿಕ ವಿಷಯಗಳ ಪ್ರದರ್ಶನಕ್ಕಾಗಿ ಕೆಲವು ಹಬ್ಬಗಳನ್ನು ಆಚರಿಸಲಾಗುತ್ತದೆ. ಹಂಪಿ ಉತ್ಸವ,ಕರಾವಳಿ ಉತ್ಸವ, ಪಟ್ಟದಕಲ್ಲು ಉತ್ಸವ,ನಾಟ್ಯಾಂಜಲಿ ನೃತ್ಯೋತ್ಸವ, ಚಿದಂಬರಂ ನಲ್ಲಿ ನಡೆಯುವ ೫ ದಿನಗಳ ಶಿವರಾತ್ರಿ ಉತ್ಸವ,ತ್ರಿಶೂರ ಪೂರಂ ಉತ್ಸವಗಳು ಈ ತೆರದವು.

ಭಾರತೀಯ ಸನಾತನ ಧಾರ್ಮಿಕ ಸಂಪ್ರದಾಯವನ್ನು ಗಮನಿಸಿದರೆ ಪ್ರತಿಯೊಂದು ತಿಂಗಳ ಪ್ರತಿಯೊಂದು ತಿಥಿಯೂ ವಿಶಿಷ್ಟ ವಾದುದು. ಅದರಲ್ಲೂ ಶ್ರಾವಣ, ಭಾದ್ರಪದ ಮಾಸಗಳಲ್ಲಿ ಹಬ್ಬಗಳ ಸರಮಾಲೆಯೇ ಬರುತ್ತದೆ. ಚಾಂದ್ರಮಾನ ಪದ್ಧತಿಯಲ್ಲಿ ಚೈತ್ರ ಮಾಸದ ಪಾಡ್ಯವು, ಸೌರಮಾನ ಪದ್ಧತಿಯಲ್ಲಿ ಮೇಷ ಮಾಸದ ವಿಷು ಸಂಕ್ರಾಂತಿಯುಹೊಸ ವರ್ಷದ ಪ್ರಾರಂಭದ ಹಬ್ಬ.ಆ ಬಳಿಕ ರಾಮನವಮಿ ಮತ್ತು ವಟಸಾವಿತ್ರೀ ವೃತಗಳನ್ನು ಬಿಟ್ಟರೆ ಮುಂದೆ ಶ್ರಾವಣ ಮಾಸದಲ್ಲಿ ನಾಗಚೌತಿ, ನಾಗರ ಪಂಚಮಿ ಯಿಂದ ತೊಡಗಿ, ಹೋಳಿ ಹುಣ್ಣಿಮೆಯ ವರೆಗೆ ಮನೆಯ ಮಹಿಳೆಯರಿಗೆ ಬಿಡುವೇ ಇಲ್ಲದಷ್ಟು ಹಬ್ಬಗಳ ತಯಾರಿಯ ಸಡಗರ. ನೂಲ ಹುಣ್ಣಿಮೆ,ಮಂಗಳ ಗೌರೀ ವೃತ, ವರ ಮಹಾಲಕ್ಷ್ಮೀ ವೃತ, ಶ್ರೀ ಕೃಷ್ಣ ಜನ್ಮಾಷ್ಟಮಿ, ಸ್ವರ್ಣ ಗೌರೀ ವೃತ, ಗಣೇಶಚತುರ್ಥಿ, ಅನಂತ ಚತುರ್ದಶಿ ವೃತ, ಮಹಾಲಯ,ನವರಾತ್ರಿ, ದಸರಾ, ದೀಪಾವಳಿ, ಉತ್ಥಾನ ದ್ವಾದಶಿ ಯಂದು ತುಲಸೀ ಜಲಂಧರ ವಿವಾಹ, ಸ್ಕಂದ ಷಷ್ಟೀವೃತ, ಶಿವ ರಾತ್ರಿ, ಕಾರ್ತಿಕ/ ಮಾಘಮಾಸದಲ್ಲಿ ವಿವಿಧ ದೇವಾಲಯಗಳಲ್ಲಿನ ವಿಶಿಷ್ಟ ವಾದ ತೀರ್ಥ ಸ್ನಾನ ಹಾಗೂ ದೀಪೋತ್ಸವಗಳು ಹೀಗೆ ವರ್ಷವಿಡೀ ಹಬ್ಬಗಳ ಸಂಭ್ರಮವಿರುತ್ತದೆ. ಒಂದೊಂದು ಹಬ್ಬದಲ್ಲಿ ಒಬ್ಬೊಬ್ಬ ದೇವರ ಆರಾಧನೆ. ದೇವನೊಬ್ಬ ನಾಮ ಹಲವು ಎಂಬುವುದು ಎಲ್ಲರೂ ಒಪ್ಪಿಕೊಂಡ ವಿಷಯ ವಾದರೂ ಈ ವಿವಿಧತೆಯಲ್ಲೇ ಜನರಿಗೆ ಖುಷಿ. ಅಲಂಕಾರ, ನೈವೇದ್ಯ ಹೀಗೆ ಎಲ್ಲದರಲ್ಲೂ ವೈವಿಧ್ಯ. ಶಿವನು ಅಭಿಷೇಕ ಪ್ರಿಯನೆಂದು ಶಿವರಾತ್ರಿಯಲ್ಲಿ ಅಭಿಷೇಕಕ್ಕೆ ಪ್ರಾಧಾನ್ಯ. ವಿಷ್ಣು ಅಲಂಕಾರ ಪ್ರಿಯನೆಂದು ಗೋಕುಲಾಷ್ಟಮಿ ಸಮಯದಲ್ಲಿ ಅವನಿಗೆ ವಿಧ ವಿಧದ ಅಲಂಕಾರ. ಗಣಪತಿ ಭಕ್ಷ್ಯ ಪ್ರಿಯನೆಂದು ಗಣೇಶ ಚೌತಿಗೆ ಅವನಿಗೆ ಮೋದಕ, ಕಡುಬು,ಉಂಡೆ, ಪಂಚಕಜ್ಜಾಯಾದಿಗಳ ನೈವೇದ್ಯ. ಅರ್ಪಿಸುವ ಪುಷ್ಪ ಪತ್ರೆಗಳಲ್ಲೂ ವೈವಿಧ್ಯ. ಶಿವನಿಗೆ ಬಿಲ್ವಪತ್ರೆ,ವಿಷ್ಣುವಿಗೆ ತುಳಸಿ, ಗಣಪತಿಗೆ ದೂರ್ವೆ, ಹೀಗೆ ಪೂಜೆಗೆ ಸಾಹಿತ್ಯಗಳನ್ನು ಸಿದ್ಧಪಡಿಸುವಲ್ಲಿ ಮಹಿಳೆಯರು ಉತ್ಸಾಹದಿಂದ ಭಾಗವಹಿಸುತ್ತಾರೆ. ಕೆಲವು ಹಬ್ಬಗಳು ವೃತ ಪ್ರಧಾನವಾದರೆ ಇನ್ನೂ ಕೆಲವು ವೃತ ಗೌಣವಾಗಿ ಆಚರಣೆ ಪ್ರಧಾನವಾಗಿರುತ್ತವೆ.

ಇಂತಹ ವೃತ ಪ್ರಧಾನವಾದ ವಿಶಿಷ್ಠ ಹಬ್ಬಗಳಲ್ಲಿ ಅನಂತ ಚತುರ್ದಶಿಯೂ ಒಂದು.

ಅನಂತ ಚತುರ್ದಶಿ ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ದಶಿಯಂದು ಆಚರಿಸಲ್ಪಡುತ್ತದೆ.  ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ಥಿಯಂದು ಪೂಜೆಗಾಗಿ ಪ್ರತಿಷ್ಠಾಪಿಸಲ್ಪಟ್ಟ ಗಣಪ 3,5,7,9, 11 ಹೀಗೆ ಅವರವರ ರೂಢಿ, ಸಂಪ್ರದಾಯಗಳಂತೆ ಪೂಜೆಗೊಂಡು ಕೊನೆಯ ದಿನ ವಿಸರ್ಜಿಸಲ್ಪಡುತ್ತಾನೆ. ಆದರೆ ಗರಿಷ್ಠ 10 ದಿನಗಳವರೆಗೆ ಪೂಜಿಸಲ್ಪಟ್ಟು ೧೧ ನೇ ದಿನ ಅಂದರೆ ಅನಂತ ಚತುರ್ದಶಿಯಂದು ವಿಸರ್ಜಿಸಲ್ಪಡುತ್ತಾನೆ. ನಾಗದೇವತಾ ರಾಧನೆಗೆ ಸಂಬಂಧಿಸಿದ ಅನಂತ ಚತುರ್ದಶಿ ಹಬ್ಬವನ್ನು ನೋಂಪಿ ಎಂಬ ಹೆಸರಿನಿಂದಲೂ ಆಚರಿಸುತ್ತಾರೆ. ನೋಂಪಿ ಎಂದರೆ ‘ವೃತ’ ಎಂದೂ ಅರ್ಥವಿದೆ ಈ ಹಬ್ಬದಲ್ಲಿ ವೃತ, ಉಪವಾಸಗಳು ಪ್ರಧಾನವಾದುದರಿಂದ ‘ನೋಂಪಿ’ ಪದವು ಇಲ್ಲಿಗೆ ಸಲ್ಲತ್ತದೆ.

ಅನಂತ ಚತುರ್ದಶಿ ಹಬ್ಬದ ವೈಶಿಷ್ಠ್ಯ:

‘ಅನಂತ’ ಎಂಬ ಶಬ್ದಕ್ಕೆ ಅಂತ್ಯವಿಲ್ಲದ್ದು ಎಂಬ ಅರ್ಥವಿದೆ. ಶ್ರೀಮನ್ನಾರಾಯಣನ ಸಹಸ್ರ ನಾಮಗಳಲ್ಲಿ ‘ಅನಂತ’, ‘ಅನಂತ ಪದ್ಮನಾಭ’ ಎಂಬದೂ ಸೇರುತ್ತದೆ.  ನವ ನಾಗ ಸ್ತೋತ್ರದಲ್ಲಿ ‘ಅನಂತ’ ಎಂಬುದು ಮೊದಲನೆಯ ನಾಮವಾಗಿದೆ. ಶ್ರೀ ಮಹಾ ವಿಷ್ಣುವು ಭಕ್ತರ ಇಷ್ಟಾರ್ಥಗಳನ್ನು ನೆರವೇರಿಸುವ ಸಲುವಾಗಿ ಅನಂತ ಪದ್ಮನಾಭನಾಗಿ ಈ ಭೂಮಿಯಲ್ಲಿ ಅವತರಿಸಿದನೆಂದು ಪುರಾಣಗಳು ಹೇಳುತ್ತವೆ.

ಭಗವಂತ ಯಾವಾಗಲೂ ಭಕ್ತರ ಕರೆಗೆ ಓಗೊಟ್ಟು ಬಂದು ಅವರ ಕಷ್ಟಗಳನ್ನು ಪರಿಹಾರ ಮಾಡುವುದು ಎಲ್ಲರಿಗೂ ತಿಳಿದ ವಿಚಾರ. ಆದರೆ ವಿಶೇಷವಾಗಿ ಈ ದಿನದಂದು ಭಗವಂತನನ್ನು ಕರೆದರೆ ಆತ ಓಡೋಡಿ ಬಂದು ನಮ್ಮ ಕೈಯನ್ನು ಹಿಡಿದು ಉದ್ಧರಿಸುತ್ತಾನೆ, ಎಂಬ ನಂಬಿಕೆ ಭಾರತೀಯರಲ್ಲಿ ಬಲವಾಗಿ ಬೇರೂರಿದೆ.

ಎಲ್ಲ ವೃತಗಳಿಗೂ ಒಂದೊಂದು ವೃತ ಕಥೆ ಇರುತ್ತದೆ. ಈ ವೃತಕಥೆಗಳ ಬಗ್ಗೆ ಮಹಾ ಭಾರತದ  ಅರಣ್ಯಪರ್ವದಲ್ಲಿ ಉಲ್ಲೇಖ ಇರುತ್ತದೆ. ಪಾಂಡವರು 12 ವರ್ಷ ವನವಾಸದಲ್ಲಿದ್ದಾಗ ತಮಗೊದಗಿದ  ಗತಿಗೆ ಮರುಗುತ್ತ ಖಿನ್ನತೆಗೆ ಒಳಗಾಗಿದ್ದರು. ಆಗ ಶ್ರೀ ಕೃಷ್ಣನು ಅವರಲ್ಲಿನ ಖಿನ್ನತೆಯನ್ನು ಹೋಗಲಾಡಿಸಿ, ಜೀವನದಲ್ಲಿ ಉತ್ಸಾಹವನ್ನು ತುಂಬುವುದಕ್ಕಾಗಿಯೂ, ಸತ್ಸಂಗದಲ್ಲಿದ್ದುಕೊಂಡು ಕಾಲ ಕ್ಷೇಪವನ್ನು ಮಾಡುವುದಕ್ಕಾಗಿಯೂ ವಿವಿಧ ಕತೆಗಳನ್ನು ಹೇಳುತ್ತಿದ್ದನು. ಧರ್ಮವ್ಯಾಧನ ಕಥೆ, ನಳದಮಯಂತಿಯ ಕಥೆ, ಇತ್ಯಾದಿ ಕಥೋಪಖ್ಯಾನಗಳ ಪ್ರಸ್ತಾಪ ಇಲ್ಲಿದೆ. ಅನಂತ ಚತುರ್ದಶಿ ವೃತಕ್ಕೆ ಸಂಬಂಧಿಸಿದ ಕತೆಯೂ ಇಲ್ಲಿ ಪ್ರಸ್ಥಾಪಿಸಲ್ಪಟ್ಟಿದೆ.

ಕೌಂಡಿನ್ಯ ಮುನಿಯ ಕಥೆ : ಕೌಂಡಿನ್ಯ  ಮುನಿಗಳು ಬಹಳ ದೊಡ್ಡ ತಪಸ್ವಿಗಳು. ಬಹಳ ವರ್ಷಗಳ ತಪಸ್ಸಾಧನೆಯ ಬಳಿಕ ತಾವು ಗೃಹಾಸ್ಥಾಶ್ರಮಿಗಳಾಗಬೇಕೆಂದು ನಿರ್ಧರಿಸಿ ಕನ್ಯಾರ್ಥಿಯಾಗಿ ಊರೂರು ಅಲೆಯುತ್ತ ಬರುತ್ತಾರೆ. ವಶಿಷ್ಠ ಗೋತ್ರ ಸಂಜಾತ ಸುಮಂತ ನೆಂಬ ಬ್ರಾಹ್ಮಣ, ಭ್ರಗು ಮಹರ್ಷಿಗಳ ಮಗಳಾದ ದೀಕ್ಷಾಳನ್ನು ವಿವಾಹವಾಗಿ ಶೀಲೆ ಎಂಬ ಮಗಳನ್ನು ಪಡೆದ. ಆ ಕನ್ಯೆಯನ್ನು ಸುಶೀಲೆ ಎಂದೂ ಕರೆಯುತ್ತಿದ್ದರು. ಅವಳು ನಿಜವಾಗಿಯೂ ತಾಯಿಯಂತೆ ಶೀಲವಂತಳೂ ಸುಶೀಲೆಯೂ ಆಗಿದ್ದಳು. ದುರದೃಷ್ಟವಶಾತ್ ದೀಕ್ಷಾ ಅಕಾಲ ಮೃತ್ಯು ವಿಗೀಡಾಗುತ್ತಾಳೆ. ತಾನು ವಿಧುರ ನಾಗಿದ್ದು ತನ್ನ ನಿತ್ಯಾನುಷ್ಠಾನಗಳಿಗೆ ತೊಂದರೆ ಯಾಗಬಾರದೆಂದುಕೊಂಡು ಕರ್ಕಶಿ ಎಂಬವಳನ್ನು ಸುಮಂತ ಪುನರ್ವಿವಾಹವಾದ. ಅವಳೋ ಸದ್ಗುಣಿಯಲ್ಲ. ಆಚಾರ ಹೀನಳೂ, ಮಹಾ ಕೋಪಿಷ್ಠೆಯೂ ಆದ ಆಕೆ ಪತಿಗೆ ಪ್ರತಿಕೂಲೆಯಾಗಿ ಮನೆಯಲ್ಲಿ ತನ್ನದೇ ಸಾಮ್ರಾಜ್ಯವನ್ನು ನಡೆಸುವವಳಾಗಿದ್ದಳು. ಕೌಂಡಿನ್ಯ ಮುನಿಗಳು ಕನ್ಯಾರ್ಥಿಯಾಗಿ ಬಂದಿದ್ದೇ ತಡ, ವಿರಾಗಿಗಳಾದುದರಿಂದ ವರದಕ್ಷಿಣೆಯಾಗಲೀ ವರೋಪಚಾರವಾಗಲೀ ಬಯಸಲಾರರೆಂದುಕೊಂಡು ದುರಾಲೋಚನೆಯಿಂದ,ವಧೂವರರ ವಯಸ್ಸಿನ ಅಂತರವನ್ನೂ ಗಮನಿಸದೆ, ವರ ಸಾಮ್ಯವನ್ನೂ ನೋಡದೆ ಕರ್ಕಸೆ ತತ್ಕ್ಷಣ ವಿವಾಹದ ವ್ಯವಸ್ಥೆ ಮಾಡಿಸುತ್ತಾಳೆ. ಅಸಹಾಯನಾದ ಸುಮಂತನೂ ಕೌಂಡಿನ್ಯ ಮುನಿಗಳ ವಿದ್ವತ್ ಗೆ ಬೆಲೆ ಕೊಟ್ಟು,ಮಲತಾಯಿಯ ಕೈಯಲ್ಲಿ ಸಿಕ್ಕು ಪಡಬಾರದ ಪಾಡು ಪಡುತ್ತಾ ಇರುವ ಮಗಳ ಕಷ್ಟವಾದರೂ ಪರಿಹಾರ ವಾಗಲೆಂದು ಕೊಂಡು,ಕನ್ಯಾ ಸೆರೆಯಿಂದ ಮುಕ್ತರಾಗುವ ಅಭಿಲಾಷೆಯಿಂದ ಈ ವಿವಾಹಕ್ಕೆ ಸಮ್ಮತಿಸುತ್ತಾನೆ. ಅವನ ಮಾತುಗಳು ಯಾವುವೂ ಆ ಮನೆಯಲ್ಲಿ ನಡೆಯುತ್ತಿರಲಿಲ್ಲ. ಕನ್ಯೆಯನ್ನು ಪಾಣಿಗ್ರಹಣ ಮಾಡಿಕೊಂಡು ತನ್ನ ಊರಿಗೆ ಹೊರಡುವಾಗ ಕನ್ಯಾಪಿತೃ, ತನ್ನ ಮಗಳಿಗೆ ವರದಕ್ಷಿಣೆ ಕೊಡುವುದಿರಲಿ, ಕ್ಷೇಮ ತಂಡುಲವೆಂದುಕೊಂಡಾದರೂ ಏನನ್ನಾದರೂ ಕೊಡುವುದಕ್ಕೂ ನನಗೆ ಸಾಧ್ಯವಾಗುತ್ತಿಲ್ಲ ವೆಂದು ಕುಗ್ಗಿ, ಕೊರಗಿ, ಕೊನೆಗೆ ಅಡಿಗೆಯಲ್ಲಿ ಉಳಿದ ಒಂದಿಷ್ಟು ಹುರಿದ ಗೋಧಿಯ ಹಿಟ್ಟನ್ನು ದಾರಿಯಲ್ಲಿ ಊಟಕ್ಕಾದರೂ ಆಗಲೆಂದು ಬುತ್ತಿ ಕಟ್ಟಿ ಅವಳ ಕೈಯಲ್ಲಿಡುತ್ತಾನೆ.

ವಿವಾಹದ ವಿಧಿಗಳು ಮುಗಿದು ಕೌಂಡಿನ್ಯ ಮುನಿಗಳು ಪತ್ನಿಯನ್ನು ಕರೆದುಕೊಂಡು ತಮ್ಮ ಮನೆಗೆ ಬರುತ್ತಿದ್ದಾಗ ದಾರಿಯಲ್ಲಿ ಯಮುನಾ ನದಿ ಹತ್ತಿರ ತಮ್ಮ ನಿತ್ಯ ಕರ್ಮ, ಮಧ್ಯಾಹ್ನಿಕಗಳಿಗಾಗಿ ಪ್ರಯಾಣವನ್ನು ನಿಲ್ಲಿಸಿ, ತಾವು ಜಪಾನುಷ್ಠಾನ ಗಳಿಗಾಗಿ ಹೋಗುತ್ತಾರೆ. ಆಗ ನದೀತೀರದಲ್ಲಿ ಅನೇಕ ಸ್ತ್ರೀಯರು ತಂತಮ್ಮ ಪತಿಗಳೊಡಗೂಡಿ ಪೂಜಾದಿ ಕಾರ್ಯಗಳನ್ನು ಮಾಡುತ್ತಿರುವುದನ್ನು ಮುನಿ ಪತ್ನಿಯು ಕಾಣುತ್ತಾಳೆ. ಕುತೂಹಲ ಭರಿತಳಾಗಿ  ಅವರನ್ನು ಸಮೀಪಿಸಿ ಅವರು ಆಚರಿಸುತ್ತಿರುವ ಆಚರಣೆಯ ಕುರಿತಾಗಿ ಪ್ರಶ್ನಿಸುತ್ತಾಳೆ . ಅದಕ್ಕೆ ಆ ಮಹಿಳೆಯರು ತಾವು ಅನಂತ ಚತುರ್ದಶಿ ವೃತವನ್ನು ಆಚರಿಸುತ್ತಿರುವುದಾಗಿ ತಿಳಿಸುತ್ತಾರೆ. ಇದನ್ನು ಕೇಳಿದ ಮುನಿ ಪತ್ನಿಯು ತಾನೂ ಅವರೊಂದಿಗೆ ಸೇರಿ ಅನಂತ ಚತುರ್ದಶಿ ವೃತವನ್ನು ಆಚರಿಸುತ್ತಾಳೆ. ತನ್ನಲ್ಲಿ ದಾನ ರೂಪದಲ್ಲಾಗಲೀ ದಕ್ಷಿಣೆಯ ರೂಪದಲ್ಲಾಗಲೀ ಕೊಡಲು ಏನೂ ಇಲ್ಲದ್ದರಿಂದ ತಾನು ತಂದಿದ್ದ ಗೋಧಿಯ ಹಿಟ್ಟನ್ನೇ ಸ್ವಲ್ಪ ಸ್ವಲ್ಪವಾಗಿ ಅವರಿಗೆ ನೀಡಿ ತನ್ನ ಪತಿಗೂ ನೀಡುತ್ತಾಳೆ. ಇದರಿಂದ ಆ ಮುನಿಗಳ ಸಂಪತ್ತು ವೃದ್ಧಿಯಾಗಿ ಅವರ ಎಲ್ಲ ಕಾರ್ಯ ಕ್ಷೇತ್ರಗಳಲ್ಲೂ ಉತ್ತಮ ಫಲಿತಾಂಶವನ್ನೇ ಪಡೆಯುತ್ತಾರೆ. ಸಾಕಷ್ಟು ಧನ, ಧಾನ್ಯ, ಪಶು ಸಂಪತ್ತನ್ನೂ, ಕೀರ್ತಿ ಗೌರವಾದಿಗಳನ್ನು ಗಳಿಸುತ್ತಾರೆ.  ಹೀಗಿರುವಾಗ ಒಂದು ದಿನ ಮುನಿಗಳು ತನ್ನ ಪತ್ನಿಯ ಕೈಯಲ್ಲಿರುವ ಅನಂತನ ದಾರವನ್ನು ಕಂಡು ‘ಏನಿದುದಾರ? ಯಾರನ್ನು ವಶೀಕರಿಸಬೇಕೆಂದಿರುವೆ? ನನ್ನನ್ನೋ ಅಥವಾ ಇನ್ಯಾರನ್ನೋ? ಎಂದು ಪ್ರಶ್ನಿಸುತ್ತಾರೆ. ಪತ್ನಿಯು ತಾನು ಆಚರಿಸುತ್ತಿರುವ ಕಾಮ್ಯ ಪ್ರದವೂ ಮೋಕ್ಷಪ್ರದವೂ ಆದ ಈ ವೃತದ ಮಹಿಮೆಯ ಬಗೆಗೆ ತಿಳಿಸಿ, ಇದು ಆನಂತನ ವೃತ ಸಂಬಂಧಿ ದಾರ, ಈ ವೃತದ  ಆಚರಣೆಯಿಂದಾಗಿ ನಮ್ಮ ಮನೆಯಲ್ಲಿ ಇಷ್ಟೊಂದು ಸಂವೃದ್ಧಿ ಯಾಗಿದೆ  ಎಂದು ತಿಳಿಸ್ತಾಳೆ. ಆದರೆ  ಕೌಂಡಿನ್ಯ  ಮುನಿಗಳು ಇದನ್ನು ಒಪ್ಪದೆ, ತಾನು ಗಳಿಸಿದ ಧನ ಕನಕಾದಿ ಸಂಪತ್ತೂ, ಕೀರ್ತಿ ಗೌರವಾದಿಗಳೂ, ತನ್ನ ವಿದ್ವತ್ತು ಮತ್ತು ಪಾಂಡಿತ್ಯಗಳಿಂದಷ್ಟೇ ಪಡೆದುದು ಹೊರತು ವೃತದಿಂದ ಅಲ್ಲ ಎಂದು ಹೇಳುತ್ತಾರೆ. ಹಾಗೂ ಕೋಪೋದ್ರಿಕ್ತರಾಗಿ ಆ ದಾರವನ್ನು ಬಲವಂತವಾಗಿ ಕಿತ್ತೆಸೆದು ಅಗ್ನಿಗೆ ಹಾಕುತ್ತಾರೆ. ಸುಶೀಲೆಯು ಕೂಡಲೇ ದಾರವನ್ನು ಅಗ್ನಿಯಿಂದ ತೆಗೆದು ಹಾಲಿನಲ್ಲಿ ಹಾಕಿಡುತ್ತಾಳೆ.  ಆದರೆ ಪುಣ್ಯಪ್ರದವಾದ ಈ ವೃತವನ್ನು ಕೆಡಿಸಿದ ಫಲವಾಗಿಯೋ ಎಂಬಂತೆ ಮರುದಿನದಿಂದ ಅವರ ಧನ ಕನಕಾದಿ ಸಕಲ ಸಂಪತ್ತುಗಳೂ, ಕೀರ್ತಿ ಗೌರವಾದಿಗಳೂ ದಿನೇ ದಿನೇ ಕ್ಷೀಣಿಸ ತೊಡಗುತ್ತವೆ. ಆಗ ಮುನಿಗಳಿಗೆ ಈ ವೃತದ ಮಹಿಮೆ ತಿಳಿದು ತಾನು ಮಾಡಿದ ಅಪಚಾರಕ್ಕೆ ಮರುಗುತ್ತಾರೆ. ಪ್ರಾಯಶ್ಚಿತ್ತಾರ್ಥ ವಾಗಿ ಮಹಾವಿಷ್ಣುವಿನ ಕುರಿತಾಗಿ ಉಗ್ರ ತಪಸ್ಸನ್ನು ಕೈಗೊಂಡು ಅವನನ್ನು ಪ್ರಸನ್ನಗೊಳಿಸುತ್ತಾರೆ.  ಕೌಂಡಿನ್ಯಮುನಿಯ  ಕಠಿಣ ತಪಸ್ಸಿಗೆ ಮೆಚ್ಚಿದ ಮಹಾವಿಷ್ಣು ನೀನು ೧೪ ವರ್ಷಗಳ ಕಾಲ ನಿರಂತರವಾಗಿ, ಶ್ರದ್ಧಾ ಭಕ್ತಿಗಳಿಂದ ಈ ಅನಂತ ಚತುರ್ದಶೀ ವೃತವನ್ನು ಕೈಗೊಂಡರೆ ನೀನು ಕಳಕೊಂಡದ್ದನ್ನು ಮರಳಿ ಪಡೆಯುವೆ ಎಂದು ಹರಸಿ ಅಂತರ್ದಾನನಾಗುತ್ತಾನೆ.  ಕೌಂಡಿನ್ಯ  ಮುನಿಗಳು ತನ್ನ ಈ ಅಪಕೃತ್ಯಕ್ಕೆ ಮರುಗಿ ಮತ್ತೆ ಪತ್ನಿಯೊಡಗೂಡಿ ಪ್ರತೀ ವರ್ಷ ಅನಂತ ಚತುರ್ದಶಿಯಂದು  ಬಹಳ ಶೃದ್ಧಾ ಭಕ್ತಿಗಳಿಂದಅನಂತ ಚತುರ್ದಶೀ  ವೃತವನ್ನು ಕೈಗೊಳ್ಳುತ್ತಾರೆ. ಮತ್ತು ತಾನು ಕಳಕೊಂಡ ಧನ, ಧಾನ್ಯ, ಕನಕಾದಿ ಸಕಲ ಸುವಸ್ತುಗಳನ್ನೂ ಕೀರ್ತಿ ಪ್ರತಿಷ್ಟೆಗಳನ್ನೂ ಪುನಃ ಪಡೆಯುತ್ತಾರೆ.

ಇನ್ನೊಂದು ಕಥೆಯ ಪ್ರಕಾರ ಆನಂತನ ದಾರ ವನ್ನು ಕಿತ್ತೆಸೆದುದರಿಂದ ಸಕಲ ಸಂಪತ್ತನ್ನು ಕಳಕೊಂಡು ದಿಗ್ಭ್ರಾಂತನಾದ  ಕೌಂಡಿನ್ಯಮುನಿಗಳಿಗೆ ಆತನ ಪತ್ನಿ ಸುಶೀಲೆ ಆನಂತನ ವೃತಾಚರಣೆಯ ಹಾಗೂ ಆ ಅನಂತನ ದಾರದ ಮಹಿಮೆಯನ್ನು ತಿಳಿಸುತ್ತಾಳೆ. ಇದನ್ನು ಅರ್ಥಮಾಡಿಕೊಂಡ  ಕೌಂಡಿನ್ಯಮುನಿಗಳು ಆ ಅನಂತನನ್ನು ಹುಡುಕುತ್ತಾ, ಅನ್ನ ಆಹಾರಗಳನ್ನು ತ್ಯಜಿಸಿ ಹುಚ್ಚನಂತೆ ಬೆಟ್ಟ, ಗುಡ್ಡ, ಕಾಡು ತೊರೆಗಳೆನ್ನದೆ ಊರಿಡೀ ಅಲೆಯುತ್ತಾರೆ. ಆಗ ದಾರಿಯಲ್ಲಿ ಅವರಿಗೆ ಹಸಿರು ಹುಲ್ಲುಗಾವಲಿನ ಮಧ್ಯೆ ಹುಲ್ಲು ಮೇಯದೇ ಕರುವಿನೊಂದಿಗೆ ಆಟವಾಡುತ್ತಿರುವ ಇರುವ ಹಸುವನ್ನು ಕಾಣುತ್ತಾರೆ. ‘ನೀನು ಆನಂತನನ್ನು ಕಂಡೆಯಾ’ ಎಂದು  ಕೌಂಡಿನ್ಯಮುನಿಗಳು ಆ ಹಸುವಿನಲ್ಲಿ ಕೇಳುತ್ತಾರೆ. ಅದು ‘ಇಲ್ಲ’ ಎನ್ನುತ್ತದೆ. ಮುಂದೆ ಸುತ್ತು ಮುತ್ತಲೂ  ಒಳ್ಳೆಯ ಎಳೆಯದಾದ ಚಿಗುರು ಹುಲ್ಲು ಇದ್ದರೂ ಅದನ್ನು ಮೇಯದೆ ಸುಮ್ಮನೆ ನಿಂತ ಒಂದು ಎತ್ತು ಕಾಣ ಸಿಗುತ್ತದೆ. ಅದನ್ನು ಕಂಡು ‘ನೀನು ಆನಂತನನ್ನು ಕಂಡೆಯಾ’ ಎಂದು  ಕೌಂಡಿನ್ಯಮುನಿಗಳು ಕೇಳುತ್ತಾರೆ. ಅದೂ ‘ಇಲ್ಲ’ ಎನ್ನುತ್ತದೆ. ಮುಂದೆ ಹಾಗೇ ಆನಂತನನ್ನು ಹುಡುಕುತ್ತಾ  ಹೋಗುವಾಗ ಒಂದು ಮಾವಿನ ಮರ ಎದುರಾಗುತ್ತದೆ. ಅದರಲ್ಲಿ ತುಂಬಾ ಹಣ್ಣುಗಳಿದ್ದರೂ ಅವೆಲ್ಲ ಹುಳಗಳಿಂದ ತುಂಬಿದ್ದು ಯಾರೂ ಅವುಗಳನ್ನು ತಿನ್ನುತ್ತಿರಲಿಲ್ಲ. ಯಾವ ಹಕ್ಕಿಗಳೂ ಆ ಮರದಲ್ಲಿ ವಾಸವಿರಲಿಲ್ಲ. ಕೌಂಡಿನ್ಯ ಮುನಿಗಳು ಆ ಮರದೊಡನೆ ‘ನೀನು ಆನಂತನನ್ನು ಕಂಡೆಯಾ’ ಎಂದು ಕೇಳುತ್ತಾರೆ. ಅದೂ ‘ಇಲ್ಲ’ ಎನ್ನುತ್ತದೆ. ಮುಂದೆ ಹೋಗುವಾಗ ಒಂದು ಮದಗಜವೂ ಎದುರಾಗುತ್ತದೆ. ಅದರ ನೆತ್ತಿಯಿಂದ ಮದದ ರಸವು ಒಸರುತ್ತಿತ್ತು. ಆದರೂ ಅದು ಉನ್ಮತ್ತನಾಗದೆ ಬಹಳ ಸೌಮ್ಯವಾಗಿತ್ತು. ಆ ಆನೆಯಲ್ಲಿಯೂ ‘ನೀನು ಆನಂತನನ್ನು ಕಂಡೆಯಾ’ ಎಂದು  ಕೌಂಡಿನ್ಯ  ಕೇಳುತ್ತಾನೆ. ಅದೂ ‘ಇಲ್ಲ’ ಎನ್ನುತ್ತದೆ. ಹಾಗೆಯೇ ಮುಂದೆ ಬಂದಾಗ ಎರಡು ಕೊಳಗಳನ್ನು ಕಂಡರು. ಆ ಕೊಳದಿಂದ ಈ ಕೊಳಕ್ಕೆ, ಈ ಕೊಳದಿಂದ ಆ ಕೊಳಕ್ಕೆ ನೀರು ಹರಿಯುತ್ತಿತ್ತು ಹೊರತು ನೀರು ಕೊಳಗಳನ್ನು ಬಿಟ್ಟು ಹೊರ ಬರುತ್ತಿರಲಿಲ್ಲ. ಕೌಂಡಿನ್ಯ ಮುನಿಗಳು  ಆ ಕೊಳಗಳಲ್ಲಿಯೂ ‘ನೀವು ಆನಂತನನ್ನು ಕಂಡಿರೇ? ಎಂದು ಕೇಳಿದರು. ಕೊಳಗಳು ‘ಇಲ್ಲ’ ಎಂದವು. ಅಷ್ಟು ಹೊತ್ತಿಗೆ ಅಲೆದಲೆದು ಬಸವಳಿದು ಇನ್ನೇನು ಕುಸಿದು ಬೀಳುವುದರಲ್ಲಿದ್ದಾಗ ಒಬ್ಬ ಬ್ರಾಹ್ಮಣ ಅವರನ್ನು ಹಿಡಿದೆತ್ತುತ್ತಾನೆ. ಆ ಬ್ರಾಹ್ಮಣ ‘ಯಾರಪ್ಪಾ ನೀನು, ಏನಾಗಬೇಕು ನಿನಗೆ? ಎಂದು ಕೇಳುತ್ತಾನೆ. ‘ನಾನು ಆನಂತನನ್ನು ನೋಡಬೇಕು. ನೀನು ಅನಂತನನ್ನು ಕಂಡಿದ್ದೀಯಾ’ ಎಂದು  ಕೌಂಡಿನ್ಯಮುನಿಗಳು ಕೇಳುತ್ತಾರೆ. ಬ್ರಾಹ್ಮಣನು ‘ಹೌದು, ಕಂಡಿ ದ್ದೇನೆ, ನೋಡುವ ಇಚ್ಛೆ ಇದ್ದರೆ ನಿನಗೂ ತೋರಿಸುತ್ತೇನೆ, ಬಾ’ ಎಂದು ಹೇಳಿ ಆ ಬ್ರಾಹ್ಮಣ ಕೌಂಡಿನ್ಯಮುನಿಗಳನ್ನು ಒಂದು ಗುಹೆಯೊಳಗೆ ಕರೆದುಕೊಂಡು ಹೋಗುತ್ತಾನೆ. ಅಲ್ಲಿ ಸಾಕ್ಷಾತ್ ವೈಕುಂಠ ಲೋಕವನ್ನೇ ಕಂಡಂತಾಯಿತು ಕೌಂಡಿನ್ಯ ಮುನಿಗಳಿಗೆ. ವಜ್ರ ಖಚಿತವಾದ ರತ್ನ ಸಿಂಹಾಸನದ ಮೇಲೆ ಮಹಾ ತೇಜಸ್ಸಿನಿಂದ ಪ್ರಕಾಶಿಸುತ್ತಿರುವ ಶ್ರೀಮನ್ನಾರಾಯಣನು ಶಂಖ, ಚಕ್ರ, ಗದಾ, ಪದ್ಮ ಹಸ್ತನಾಗಿ ಆಸೀನನಾಗಿದ್ದಾನೆ. ಸೂರ್ಯ, ಚಂದ್ರ,ತಾರೆಗಳು, ಸಪ್ತರ್ಷಿಗಳು,ಅಷ್ಟಾ ವಸುಗಳು, ನವಗ್ರಹಗಳೂ, ಏಕಾದಶ ರುದ್ರರೂ, ದ್ವಾದಶಾದಿತ್ಯರೂ ಮೂವತ್ತ್ಮೂರು ಕೋಟಿ ದೇವತೆಗಳೂ ಅಲ್ಲಿ ಸೇರಿದ್ದರು. ವೈಭವ ದಿಂದ ಓಲಗಗೊಂಡಿರುವ  ಶ್ರೀ ಮಹಾ ವಿಷ್ಣುವಿಗೆ ಗಾಯನ, ನರ್ತನಾದಿ ಅಷ್ಟಾವಧಾನ ಸೇವೆಯೂ, ಸರ್ವ ರಾಜೋಪಚಾರವೂ ನಡೆಯುತ್ತಿದೆ. ಇದನ್ನು ಕಂಡು ಕೌಂಡಿನ್ಯ ಮುನಿಗಳು ಬಹಳ ಆನಂದಗೊಂಡು ಧನ್ಯತೆಯಿಂದ ಆ ಶ್ರೀಮನ್ನಾರಾಯಣನನ್ನು ಮನ ತುಂಬಿ ಹಾಡಿ ಹೊಗಳುತ್ತಾ ಜೈಕಾರವನ್ನು ಹಾಕುತ್ತಾರೆ. ಮರುಕ್ಷಣ ದಲ್ಲೇ ಎಲ್ಲ ಮಾಯವಾಗುತ್ತದೆ. ಮುನಿಗಳಿಗೆ ಎಲ್ಲವೂ ಅರ್ಥವಾಗುತ್ತದೆ. ತಾನು ಮಾಡಿದ ತಪ್ಪೂ ತಿಳಿಯುತ್ತದೆ.

ಆ ಬ್ರಾಹ್ಮಣನು ಕೇಳುತ್ತಾನೆ, ‘ಏನಪ್ಪಾ, ಆನಂತನನ್ನು ನೋಡಿದೆಯಾ?  ಆಗ ಕೌಂಡಿನ್ಯಮುನಿಗಳು ‘ನೋಡಿ ಧನ್ಯನಾದೆನಯ್ಯಾ, ಆದರೆ ನೀನು ಯಾರು? ಇಲ್ಲಿ ಆನಂತನಿರುವ ವಿಚಾರ ನಿನಗೆ ಹೇಗೆ ಗೊತ್ತಾಯಿತು? ಎಂದು ಕೇಳುತ್ತಾರೆ. ‘ಹಾಗಾದರೆ ಕೇಳು. ನಾನೇ ಆ ಅನಂತ. ನೀನು ಮಾಡಿದ ಅಪರಾಧಕ್ಕೆ ನೊಂದು, ಬೆಂದು ಹೋದ ನಿನ್ನ ಮನಸ್ಸನ್ನು ಸಂತುಷ್ಟ ಪಡಿಸಲು ಬ್ರಾಹ್ಮಣ ರೂಪದಲ್ಲಿ ಬಂದೆ. ಇಂದಿಗೆ ನಿನ್ನ  ಕಷ್ಟ ಗಳೆಲ್ಲವೂ ಪರಿಹಾರ ವಾದವು. ನಿನ್ನ ಶೃದ್ಧಾ ಭಕ್ತಿಗೆ ಮೆಚ್ಚಿ ಮೂರು ವರಗಳನ್ನು ಕೊಟ್ಟಿದ್ದೇನೆ. ಒಂದನೇ ವರವಾಗಿ ನೀನು ಕಳಕೊಂಡ ಧನಕನಕಾದಿ ಸಕಲ ಸಂಪತ್ತನ್ನೂ ಮರಳಿಸಿದ್ದೇನೆ. ಎರಡನೇ ವರವಾಗಿ ನಿನಗೆ ಧರ್ಮ ಪಥದಲ್ಲಿ ಸಾಗುವ ಸಾಮರ್ಥ್ಯವನ್ನು ನೀಡಿದ್ದೇನೆ. ಮೂರನೇ ವರವಾಗಿ ನಿನಗೆ ಮುಕ್ತಿ ಸೌಭಾಗ್ಯವನ್ನು ಕರುಣಿಸಲಿದ್ದೇನೆ ’ ಎಂದು ಹೇಳುತ್ತಾರೆ. ಆಗ ಕೌಂಡಿನ್ಯಮುನಿಗಳು ‘ನನ್ನದೊಂದು ಸಂದೇಹ ಇದೆ. ಅದನ್ನು ದಯವಿಟ್ಟು ಪರಿಹರಿಸಬೇಕೆಂ’ದು ಕೇಳುತ್ತಾರೆ. ‘ಏನು ಸಂದೇಹ ಕೇಳು’ ಎಂದು ಬ್ರಾಹ್ಮಣನು ಹೇಳಲು ಕೌಂಡಿನ್ಯ ಮುನಿಗಳು ತಾನು ದಾರಿಯಲ್ಲಿ ಬರುವಾಗ ಕಂಡ ಎತ್ತು, ಮಾವಿನ ಮರ, ಮದ ಗಜ, ಮತ್ತು ಕೊಳಗಳ ವಿಷಯ ವನ್ನು ತಿಳಿಸಿ ಇದೇನು ವಿಚಿತ್ರ? ದಯವಿಟ್ಟು ತಿಳಿಸಬೇಕು’ ಎಂದು ವಿನಂತಿಸಿಕೊಂಡರು. ಆಗ ಆ ಬ್ರಾಹ್ಮಣನು ‘ಆ ಎತ್ತು ಹಿಂದಿನ ಜನ್ಮದಲ್ಲಿ ಶ್ರೀಮಂತನಾಗಿದ್ದರೂ ಏನನ್ನೂ ಬೆಳೆಯದ ಬಂಜರು ಭೂಮಿಯನ್ನು ಭೂದಾನವಾಗಿ ಕೊಟ್ಟಿದ್ದಾನೆ. ಅದಕ್ಕೆ ಈ ಜನ್ಮದಲ್ಲಿ ಹುಲ್ಲು ಇದ್ದರೂ ತಿನ್ನದಾಗಿದೆ. ಈ ಹಸುವು ಹಿಂದೆ ಧನಿಕನಾಗಿದ್ದರೂ ಧನದ ಅವಶ್ಯಕತೆ ಇರುವ ನಿರ್ಧನಿಕರಾದ ಸತ್ಪಾತ್ರರಿಗೆ ದಾನವನ್ನು ಕೊಡದೆ ಇದ್ದುದರಿಂದ ಗೋವಿನ ಜನ್ಮ ತಳೆದು ಹುಲ್ಲು ಗಾವಲಲ್ಲಿದ್ದರೂ ಹುಲ್ಲು ತಿನ್ನಲಾರದೆ ಹಸಿ ವನ್ನು ಅನುಭವಿಸುತ್ತಿದೆ. ಆ ಮಾವಿನ ಮರವು ಹಿಂದಿನ ಜನ್ಮದಲ್ಲಿ ಒಬ್ಬ ಬ್ರಾಹ್ಮಣ ವಿದ್ವಾಂಸನಾಗಿದ್ದ. ಷಟ್ಕರ್ಮಿಯಾಗಿ ಅಧ್ಯಯನದೊಂದಿಗೆ ಅಧ್ಯಾಪನವನ್ನೂ ಮಾಡಬೇಕಾದ ಆತ, ತಾನು ಕಲಿತ ವಿದ್ಯೆಯನ್ನು ಇನ್ನೊಬ್ಬರಿಗೆ ಹೇಳಿ ಕೊಡಲಿಲ್ಲ. ಅದರ ಫಲವಾಗಿ ಈ ಜನ್ಮದಲ್ಲಿ ಅಷ್ಟೊಂದು ಹಣ್ಣುಗಳನ್ನು ಬಿಟ್ಟಿದ್ದರೂ ಯಾರೂ ತಿನ್ನಲಾರದ ಹಣ್ಣುಗಳಾಗಿ ನಿರುಪಯುಕ್ತ ಜೀವಿಯಾಗಿದ್ದಾನೆ.ಇನ್ನು ಆನೆಯುಪೂರ್ವ ಜನ್ಮದಲ್ಲಿ ಬಹಳ ಅಹಂಕಾರಿಯಾಗಿದ್ದು ಅಪಚಾರವೆಸಗಿದ್ದರಿಂದ ಇಂದು ಜೈವಿಕ ಸಹಜ ಕ್ರಿಯೆಯಿಂದ ಮದೋನ್ಮತ್ತನಾಗಿದ್ದರೂ ಏನೂ ಮಾಡಲಾರದೆ ಸೌಮ್ಯವಾಗಿದೆ. ಇನ್ನೂ ಆ ಕೊಳಗಳು ಹಿಂದಿನ ಜನ್ಮದಲ್ಲಿ ಸ್ವಾರ್ಥಿ ಅಕ್ಕತಂಗಿಯರಾಗಿದ್ದರಂತೆ. ಸಾಕಷ್ಟು ಸಂಪತ್ತಿದ್ದರೂ ದಾನ ಮಾಡುವ ಅವಕಾಶ ಸಿಕ್ಕಿದಾಗಲೆಲ್ಲ ಅರಶಿನ ಕುಂಕುಮ ಕೊಡುವುದಕ್ಕಾಗಲೀ ಬಾಗಿನ ಕೊಡುವುದಕ್ಕಾಗಲೀ ಅಕ್ಕ ತಂಗಿಯನ್ನು , ತಂಗಿ ಅಕ್ಕನನ್ನು ಕರೆದು ತಂತಮ್ಮೊಳಗೇನೇ ದಾನ, ದಕ್ಷಿಣೆಯನ್ನು ಕೊಟ್ಟು ಕೊಳ್ಳುತ್ತಿದ್ದರೇ ವಿನಃ ಹೊರಗಿನವರಿಗ್ಯಾರಿಗೂ ಕೊಡುತ್ತಿರಲಿಲ್ಲ. ಆ ಫಲವಾಗಿ ಈ ಜನ್ಮದಲ್ಲಿಯೂ ಅದೇ ನಡವಳಿಕೆಯನ್ನು ತೋರಿಸುತ್ತಿದ್ದಾರೆ. ಎಂದು ಹೇಳಿ ಮುನಿಗಳ ಸಂಶಯವನ್ನು ಪರಿಹರಿಸಿದನು. ಈ ಜನ್ಮದಲ್ಲಿನ ನಮ್ಮ ಕರ್ಮಗಳಿಗೆ ಮುಂದಿನ ಜನ್ಮದಲ್ಲಿ ಫಲ ಪಡೆಯುತ್ತೇವೆ. ಆದುದರಿಂದ ನೀನು ಈ ಜನ್ಮದಲ್ಲಿ ಮಾಡಿದ ತಪ್ಪುಗಳಿಗೆ ಇದೇ ಜನ್ಮದಲ್ಲಿ ಪಶ್ಚಾತ್ತಾಪ ಪಟ್ಟು ಪ್ರಾಯಶ್ಚಿತ್ತ ಮಾಡಿಕೊಂಡರೆ ಅದರ ಸತ್ ಫಲವನ್ನು ಮುಂದಿನ ಜನ್ಮದಲ್ಲಿ ಉಣ್ಣಬಹುದು. ಇನ್ನು ಮುಂದೆ ನೀನು ಅಹಂಕಾರವನ್ನು ತ್ಯಜಿಸಿ ಪರಮಾತ್ಮ ನೆಡೆಗೆ ಸಾಗುವ ಸಾಧನಾ ಪಥದಲ್ಲಿ ಸಾಗಿದರೆ ನಿನಗೆ ಒಳ್ಳೇದಾದೀತು. ಪತ್ನೀ, ಪುತ್ರ, ಪೌತ್ರಾದಿಗಳೊಂದಿಗೆ  ದೀರ್ಘಕಾಲ ಬಾಳುವೆ’, ಎಂದು ಆಶೀರ್ವದಿಸಿ ಅಂತರ್ದಾನ ನಾಗುತ್ತಾನೆ. ಮುಂದೆ ಕೌಂಡಿನ್ಯಮುನಿಗಳು ತಮ್ಮ ಆಶ್ರಮಕ್ಕೆ ಮರಳಿ ಪತ್ನೀ ಪುತ್ರ ಪೌತ್ರಾದಿಗಳೊಂದಿಗೆ ದೀರ್ಘಕಾಲ ಬಾಳುತ್ತಾರೆ ಎಂಬುದು ಕಥೆ.

ಈ ವೃತವನ್ನು ಶ್ರೀ ಕೃಷ್ಣನು ವನವಾಸದಲ್ಲಿದ್ದ ಪಾಂಡವ ರಿಂದಲೂ ಮಾಡಿಸಿದ ಎಂದು ಪುರಾಣಗಳು ಹೇಳುತ್ತವೆ. ಪಾಂಡವರು ಅದೆಷ್ಟು ಬಲಶಾಲಿಗಳಾಗಿದ್ದು ಸತ್ಯಸಂಧರೂ ನೀತವಂತರೂ ಆಗಿದ್ದರೂ ಕೌರವರ ಮೋಸದಿಂದಾಗಿ ಅವರಿಗೆ ಸಿಗಬೇಕಾದ ದಾಯಭಾಗವು ಸಿಗದೇ ವನವಾಸವನ್ನು ಅನುಭವಿಸುವಂತಾಯಿತು. ಅವರ ಕೀರ್ತಿ ಪ್ರತಿಷ್ಟೆಗೆ ಕುಂದು ಬಂದು ಮಾನ ಹಾನಿಯೂ ಆಯಿತು. ಇದರಿಂದ ನೊಂದ ಪಾಂಡವರನ್ನು ಸಂತೈಸಿ ಶ್ರೀ ಕೃಷ್ಣನು ಅವರಿಂದ ಈ ಅನಂತ ಚತುರ್ದಶೀ  ವೃತವನ್ನು ಮಾಡಿಸಿ ಕಳಕೊಂಡ ರಾಜ್ಯ, ಕೋಶಾದಿಗಳನ್ನುಮರಳಿ  ಪಡೆಯುವಂತಾಯಿತು ಎಂದು ಪುರಾಣಗಳು ಹೇಳುತ್ತವೆ. ಅಲ್ಲದೆ ಈ ಹಿಂದೆ ಈ ವ್ರತವನ್ನು ಮೊತ್ತ ಮೊದಲಾಗಿ ಅಗಸ್ತ್ಯ ಮಹಾ ಮುನಿಗಳು ಆಚರಿಸಿದರು. ಬಳಿಕ ಸಗರ, ಭರತ, ದಿಲೀಪ, ಹರಿಶ್ಚಂದ್ರ, ಜನಕಾದಿ ಮಹಾರಾಜರು ಈ ವೃತವನ್ನು ಆಚರಿಸಿ ಇಹಲೋಕದಲ್ಲಿಯೂ ಪರಲೋಕದಲ್ಲಿಯೂ ಉತ್ತಮ ಪದವನ್ನು ಸಂಪಾದಿಸಿದರು.ಈ ಪ್ರಕಾರ ಈ ಅನಂತನವೃತವನ್ನು ಆಚರಿಸಿದವರಿಗೆ, ಅನಂತ ಚತುರ್ದಶೀ ವೃತಕಥೆಯನ್ನು ಹೇಳಿದವರಿಗೆ, ಕೇಳಿದವರಿಗೆ, ಹಾಗೂ ಅನಂತನ ಪೂಜೆಯಲ್ಲಿ ಪ್ರತ್ಯಕ್ಷವಾಗಿಯಾಗಲಿ ,ಪರೋಕ್ಷವಾಗಿ ಯಾಗಲಿ, ಭಾಗವಹಿಸಿದವರಿಗೆ ಅನಂತನಾದ ಪದ್ಮನಾಭನು ಅನಂತ ಫಲ ಪ್ರಾಪ್ತಿಯಾಗುವಂತೆ ಹರಸುತ್ತಾನೆ. ಪಾಪಿ ಗಳಾಗಿದ್ದರೂ ಪಾಪದಿಂದ ಮುಕ್ತಿಯನ್ನು ಹೊಂದಿ ಪರಿಶುದ್ಧರಾಗಿ ಮೋಕ್ಷವನ್ನು ಪಡೆಯುತ್ತಾರೆ. ಎಂಬಲ್ಲಿಗೆ ಭವಿಷ್ಯೋತ್ತರ ಪುರಾಣದಲ್ಲಿ ಪ್ರಸ್ತಾಪಿಸಿದ ಆನಂತನ ಕಥೆ ಮುಕ್ತಾಯವಾಗುತ್ತದೆ.

ಈಗಂತೂ ಧಾವಂತದ  ಬದುಕಿನಲ್ಲಿ ಈ ರೀತಿಯಾದ ಆಧ್ಯಾತ್ಮಿಕ ವಿಷಯವುಳ್ಳ ಕಥೆಗಳನ್ನು ಕೇಳುವುದಕ್ಕೆ ಭಕ್ತರಿಗೆ ಬಿಡುವಿಲ್ಲ. ಆಸಕ್ತಿಯೂ ಇಲ್ಲ. ಆದ್ದರಿಂದ ಪುರೋಹಿತರೂ ಕಥಾ ಶ್ರವಣದ  ಬಗ್ಗೆ ಸ್ವಲ್ಪ ಹಿಂದೇಟು ಹಾಕುತ್ತಾರೆ. ಹಾಗಾಗಿ ಆಧ್ಯಾತ್ಮದ ಬಗ್ಗೆ ಒಲವು ಇದ್ದವರು ಈ ರೀತಿ ಪತ್ರಿಕೆಗಳಲ್ಲಿ ಬಂದ ಲೇಖನಗಳನ್ನು ಓದಿದರೂ ಪರಮಾತ್ಮನ ಅನುಗ್ರಹ ಆಗುತ್ತದೆ ಎಂದಿಟ್ಟುಕೊಳ್ಳೋಣ. ಭಾರತೀಯ ಹಬ್ಬಗಳನ್ನು ವಿವಿಧ ಆಯಾಮಗಳಿಂದ ಸರ್ವೇಕ್ಷಣೆ ಮಾಡಬಹುದು. ಈ ಹಬ್ಬಗಳು ಒಂದು ಕುಟುಂಬದ ಸದಸ್ಯರಲ್ಲಿ ಹಾಗೂ ಒಂದು ಸಮುದಾಯದ ಜನರಲ್ಲಿ ಐಕ್ಯವನ್ನು ತರುತ್ತವೆ. ವ್ಯಕ್ತಿಗಳಲ್ಲಿ ಅಥವಾ ಕುಟುಂಬಗಳೊಳಗೆ ಅಥವಾ ಕುಟುಂಬದ ಸದಸ್ಯರೊಳಗೆ ಯಾವುದೇ ಅಸಮಾಧಾನ, ವೈಮನಸ್ಸುಗಳಿದ್ದರೂ, ಹಬ್ಬದ ಸಂದರ್ಭದಲ್ಲಿ ಅವನ್ನೆಲ್ಲ ಮರೆತು ಒಂದುಗೂಡುವಂತೆ ಮಾಡುತ್ತವೆ ಈ ಹಬ್ಬಗಳು. ಹಬ್ಬದ ನೆಪದಲ್ಲಿ ಮನೆ  ಮಂದಿಯಲ್ಲ ಒಟ್ಟಾಗಿ ಸಡಗರದಿಂದ ಮಾಡುವ ಮನೆಯ ಒಳ ಹೊರಗಿನ ಸ್ವಚ್ಛತೆ, ಪೂಜಾ ಸಾಹಿತ್ಯಗಳ ಸಂಗ್ರಹಣೆ, ಮಡಿಯಲ್ಲಿ ಬಗೆ ಬಗೆಯ ಉತ್ಕೃಷ್ಟವಾದ ತಿಂಡಿ, ತೀರ್ಥ ಭಕ್ಷ್ಯ,ಭೋಜ್ಯಗಳ ತಯಾರಿ, ಮನೆಯೊಳಗೆ ಮತ್ತು ಹೊರಗಿನ ತಳಿರು ತೋರಣಗಳ ಅಲಂಕಾರ, ಪೂಜೆ, ಪ್ರಸಾದ ವಿತರಣೆ ಎಲ್ಲವೂ ಮನಸ್ಸಿಗೆ ಮುದ ನೀಡುವಂತದ್ದು. ದಿನ ನಿತ್ಯದ ಕೆಲಸ ಕಾರ್ಯಗಳ ಏಕತಾನತೆಯಿಂದ ಬಳಲಿದ ಮನಸ್ಸಿಗೆ ಉಲ್ಲಾಸವನ್ನು ಕೊಡುವಂತಾದ್ದು. ನಾವೂ ಈ ವೃತವನ್ನು ಮಾಡೋಣ. ಹಬ್ಬವನ್ನು ಆಚರಿಸೋಣ, ಕಥೆಯನ್ನು ಓದೋಣ, ಕೇಳೋಣ. ಆನಂತನ ಅನುಗ್ರಹಕ್ಕೆ ಪಾತ್ರರಾಗೋಣ.
ಎಲ್ಲರಿಗೂ ಒಳ್ಳೆಯದಾಗಲಿ
ಭದ್ರಂ ಶುಭಂ ಮಂಗಳಂ
ಓಂ ಶ್ರೀ ಅನಂತ ಪದ್ಮನಾಭಯ ನಮಃ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss