ಕೋಮು ಗಲಭೆ ಹತ್ತಿಕ್ಕಲು ಅಗತ್ಯವಿದ್ದರೆ ಯೋಗಿ ಮಾಡೆಲ್‌ ಸರ್ಕಾರ: ಸಿಎಂ ಬೊಮ್ಮಾಯಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸರ್ಕಾರ ಮೂರು ವರ್ಷ ಪೂರೈಸಿದ ಹಿನ್ನೆಲೆ, ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಬಸವರಾಜ್ ಬೊಮ್ಮಾಯಿ ರಾಜ್ಯದಲ್ಲಿ ನಡೆದ ಆಘಾತಕಾರಿ ಘಟನೆಯಿಂದಾಗಿ ನಮ್ಮ ಎಲ್ಲಾ ಕಾರ್ಯಕ್ರಮಗಳನ್ನು ಸ್ಥಗಿತಗೊಳಿಸಿದ್ದೇವೆ. ಪ್ರವೀಣ್‌ ನೆಟ್ಟಾರ್‌ ಹತ್ಯೆಯನ್ನು ನನಗೆ ಅರಗಿಸಿಕೊಳ್ಳಲಾಗುತ್ತಿಲ್ಲ. ಶಾಂತಿ ಸುವ್ಯವಸ್ಥೆ ಕದಡುವ ಕೆಲಸಗಳನ್ನು ಯಾರೇ ಮಾಡಿದರೂ ಅವರನ್ನು ಸುಮ್ಮನೆ ಬಿಡುವುದಿಲ್ಲ. ಕೋಮು ಭಾವನೆ ಕೆರಳಿಸುವ ಶಕ್ತಿಗಳನ್ನು ತಡೆಯಲು ಅಗತ್ಯ ಇದ್ದರೆ ಉತ್ತರ ಪ್ರದೇಶದ ಯೋಗಿ ಆದಿತ್ಯಾನಾಥ್‌ ಸರ್ಕಾರದ ಮಾಡೆಲ್‌ ಜಾರಿ ಮಾಡುವುದಾಗಿ ಸಿಎಂ ಹೇಳಿದ್ರು.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷಗಳಾಗಿವೆ. ನಮ್ಮ ಸಚಿವ ಸಂಪುಟದಲ್ಲಿ ದಕ್ಷ ಆಡಳಿತಗಾರರು, ಸೇವಾ ಮನೋಭಾವನೆಯಿರುವ ಯುವಕರು ನಮ್ಮ ಪಕ್ಷದಲ್ಲಿದ್ದಾರೆ. ಇದುವರೆಗೂ ರಾಜ್ಯ ಬಿಜೆಪಿ ಸರ್ಕಾರ ಏನೆಲ್ಲಾ ಕೊಡುಗೆಗಳನ್ನು ಕೊಟ್ಟಿದ್ದೇವೆ ಎಂದು ತಿಳಿಸುವುದು ನನ್ನ ಕರ್ತವ್ಯವಾಗಿದೆ ಎಂದರು. ಬಿ.ಎಸ್.ಯಡಿಯೂರಪ್ಪನವರು 2ವರ್ಷಗಳ ಕಾಲ ಸರ್ಕಾರವನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಮಹಾಮಾರಿ ಕೊರೊನಾ ಪರಿಸ್ಥಿತಿ ಸೇರಿದಂತೆ ಸಮಾಜದ ಎಲ್ಲಾ ವರ್ಗಗಳ ಕಲ್ಯಾಣಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ.

ನಾನು ಅಧಿಕಾರಕ್ಕೆ ಬಂದ ಬಳಿಕ ಸಂಧ್ಯಾ ಸುರಕ್ಷಾ, ಅಂಗವಿಕಲರ ಮಾಸಾಶನ, ವೃದ್ಧಾಪ್ಯ ವೇತನ,ವಿಧವಾ ವೇತನಗಳನ್ನು ಹೆಚ್ಚಿಸಿ, ಕೆಳಸ್ತರದಲ್ಲಿರುವ ಬಡವರಿಗೆ ಆರ್ಥಿಕ ಶಕ್ತಿ ತುಂಬುವ ಕೆಲಸವನ್ನು ಮಾಡಿದ್ದೇವೆ. ಅಧಿಕಾರಕ್ಕೆ ಬಂದ ಮೊದಲ ದಿನವೇ ರೈತ ವಿದ್ಯಾನಿಧಿ ಯೋಜನೆ ಘೋಷಿಸಿ, ಈವರೆಗೆ ಒಟ್ಟು 10 ಲಕ್ಷ ವಿದ್ಯಾರ್ಥಿಗಳಿಗೆ DBT ಮೂಲಕ ವಿದ್ಯಾರ್ಥಿ ವೇತನ ತಲುಪಿಸಲಾಗಿದೆ. ಈ ಮೂಲಕ ರೈತರಲ್ಲಿ ಅವರ ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಹೊಸ ಭರವಸೆ ಮೂಡಿಸಿದ್ದೇವೆ.

ರಾಜ್ಯದ 6 ಇಂಜಿನಿಯರಿಂಗ್ ಕಾಲೇಜುಗಳನ್ನು ಐಐಟಿ ಮಟ್ಟಕ್ಕೆ ಉನ್ನತೀಕರಿಸಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇವುಗಳ ಜೊತೆಗೆ ಕಾನೂನು ಸುವ್ಯವಸ್ಥೆ ಕಾಪಾಡಲು ಸಮಾಜದ ಸ್ವಾಸ್ಥ್ಯ ಕೆಡಿಸುವ ಸಮಾಜಘಾತುಕ ಶಕ್ತಿಗಳ ವಿರುದ್ಧ ನಾವು ದೊಡ್ಡ ಸಮರವನ್ನೇ ಸಾರಿದ್ದೇವೆ. ಅದರ ಫಲಿತಾಂಶ ಕೆಲವೇ ದಿನಗಳಲ್ಲಿ ಜನತೆಗೆ ತಿಳಿಯಲಿದೆ ಎಂದರು.

ದುಡಿಯುವ, ಬಡವರ, ಶ್ರಮಿಕರ ವರ್ಗಕ್ಕೆ ನಮ್ಮ ಸರ್ಕಾರ ವಿಶೇಷ ಆದ್ಯತೆ ನೀಡಿದ್ದು, ಅವರ ಸಮಗ್ರ ಕಲ್ಯಾಣವೇ ನಮ್ಮ ಸರ್ಕಾರದ ಗುರಿ ಎಂದು ಈ ಸಂದರ್ಭದಲ್ಲಿ ಸಿಎಂ ಬೊಮ್ಮಾಯಿ ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!