ಹಗರಣಗಳ ರೂಪವಾಗಿರುವ ಕಾಂಗ್ರೆಸ್‌ಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡಲು ನೈತಿಕತೆಯಿಲ್ಲ-ಸಿಎಂ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಯಾವುದೇ ಸರ್ಕಾರ ಜನಮನ್ನಣೆ ಮೂಲಕ ಅಧಿಕಾರಕ್ಕೆ ಬರಬೇಕು. ಜನಮನ್ನಣೆ, ಚುನಾವಣಾ ಫಲಿತಾಂಶ ಧಿಕ್ಕರಿಸಿ, ವಾಮಮಾರ್ಗದ ಮೂಲಕ ಸರಕಾರ ರಚಿಸಿದರೆ ಅದು ಪಾಪದ ನೆಲೆಗಟ್ಟಿನಿಂದ ಕುಸಿದು ಬೀಳುತ್ತದೆ ಎಂಬುದಕ್ಕೆ ಕಾಂಗ್ರೆಸ್ ಸರ್ಕಾರ ಸ್ಪಷ್ಟ ಉದಾಹರಣೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಬೆಂಗಳೂರಿನ ಅರಮನೆ ಮೈದಾನದಲ್ಲಿ ಇಂದು ಆರಂಭಗೊಂಡ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ದುರಾಡಳಿತವನ್ನು ಒಂದೊಂದಾಗಿ ಬಿಚ್ಚಿಟ್ಟರು.

ಈ ಹಿಂದೆ ಕಾಂಗ್ರೆಸ್‍ ನಡೆಸಿದ ಐದು ವರ್ಷದ ದುರಾಡಳಿತ, ಭ್ರಷ್ಟಾಚಾರ, ಹಗರಣಗಳನ್ನು ಜನರು ಮರೆತಿಲ್ಲ. ಸಣ್ಣ ನೀರಾವರಿ ಇಲಾಖೆಯಲ್ಲೂ ಶೇ 100 ರಷ್ಟು ಭ್ರಷ್ಟಾಚಾರ ನಡೆದಿತ್ತು. ಒಂದೇ ದಿನದಲ್ಲಿ 36 ಸಾವಿರ ಬೋರ್‌ವೆಲ್ ಕೊರೆಸಿದ ಹಗರಣ ನಡೆದಿದೆ. ಇನ್ನು ದಿಂಬು ಹಾಸಿಗೆ ಖರೀದಿ, ಪೊಲೀಸ್ ನೇಮಕಾತಿಯಲ್ಲೂ ಕಾಂಗ್ರೆಸ್ ಅವಧಿಯಲ್ಲಿ ಹಗರಣ ನಡೆದಿತ್ತು. ಕಾಂಗ್ರೆಸ್ ಗೆ ಭ್ರಷ್ಟಾಚಾರದ ವಿಚಾರ ಮಾತನಾಡುವ ಯಾವ ನೈತಿಕತೆ ಉಳಿದಿದೆ ಎಂದು ಅವರು ಪ್ರಶ್ನಿಸಿದರು. ಪಿಎಫ್‍ಐ ದೇಶದ್ರೋಹಿ ಸಂಘಟನೆ ಮೇಲಿದ್ದ ಕೇಸು ರದ್ದತಿ ಮಾಡಿದ್ದ ಕಾಂಗ್ರೆಸ್ ಸರ್ಕಾರ, ತಮ್ಮ ಶಾಸಕರ ಮನೆಗೆ ಬೆಂಕಿ ಹಾಕಿದರೂ ಕ್ರಮ ಕೈಗೊಂಡಿಲ್ಲ ಎಂದು ಬೊಮ್ಮಾಯಿ ವ್ಯಂಗ್ಯವಾಡಿದರು.

ವ್ಯಕ್ತಿ ಸ್ವಾತಂತ್ರ್ಯ, ಸಮಾನತೆ, ರಾಜ್ಯ ಒಕ್ಕೂಟ ವ್ಯವಸ್ಥೆ ಮತ್ತು ಪ್ರಜಾಪ್ರಭುತ್ವದ ಮೇಲೆ ನಾವು ಹೆಚ್ಚಿನ ನಂಬಿಕೆ ಇಟ್ಟಿದ್ದೇವೆ. ರಾಜ್ಯ ಕಾರ್ಯಕಾರಿಣಿಯನ್ನು ಪ್ರತಿ 3 ತಿಂಗಳಿಗೊಮ್ಮೆ ನಡೆಸುವ ಕಾರ್ಯಸೂಚಿಗಳನ್ನು ಕಾರ್ಯಾನುಷ್ಠಾನ ಮಾಡುವ ಜನರಿಗೆ ಹತ್ತಿರ ಇರುವ ಚಲನಶೀಲ ಪಕ್ಷ ನಮ್ಮದು. ಬೇರೆ ಪಕ್ಷಗಳಲ್ಲಿ ಪ್ರಜಾಪ್ರಭುತ್ವ ಇಲ್ಲ, ಚಲನಶೀಲತೆಯೂ ಇಲ್ಲ ಎಂದರು.

ಮೀಸಲಾತಿ ಪ್ರಮಾಣ ಹೆಚ್ಚಳಕ್ಕೆ ಬಿಜೆಪಿ ಬದ್ಧ: ಸಿಎಂ

ಸಾಮಾಜಿಕ ನ್ಯಾಯಕ್ಕೆ ಬಿಜೆಪಿ ಬದ್ಧವಾಗಿದೆ. ನಾಗಮೋಹನ್ ದಾಸ್, ಸುಭಾಷ್ ಆಡಿ ವರದಿ ಜಾರಿ, ಮೀಸಲಾತಿ ಪ್ರಮಾಣ ಹೆಚ್ಚಳಕ್ಕೆ ಬಿಜೆಪಿ ಬದ್ಧವಿದೆ. ಈ ಸಂಬಂಧ ಸರ್ವಪಕ್ಷಗಳ ಸಭೆಯಲ್ಲೂ ಚರ್ಚಿಸಲಾಗುವುದು. ಎಲ್ಲ ಶೋಷಿತ- ವಂಚಿತ ವರ್ಗಗಳಿಗೆ ನ್ಯಾಯ ಕೊಡಲು ದಿಟ್ಟ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.

ಬಿಜೆಪಿ ಸರ್ಕಾರದ ಯೋಜನೆಗಳನ್ನು ವಿವರಿಸಿದ ಸಿಎಂ

  • 50 ಕೋಟಿಗಿಂತ ಹೆಚ್ಚಿನ ಕಾಮಗಾರಿಗೆ ಸಂಬಂಧಿಸಿ ನ್ಯಾಯಾಧೀಶರ ನೇತೃತ್ವದ ವಿಶೇಷ ಸಮಿತಿ ರಚನೆ
  • ನೇರ ಬೆನಿಫಿಟ್ ಸ್ಕೀಂ ಜಾರಿ,  31 ಲಕ್ಷ ರೈತರಿಗೆ ಸಾಲ, ರೈತರ ಮಕ್ಕಳಿಗೆ ವಿದ್ಯಾನಿಧಿ, ಸಾಮಾಜಿಕ ನ್ಯಾಯಕ್ಕಾಗಿ 100 ಎಸ್ಸಿ/ ಎಸ್‍ಟಿ ಹಾಸ್ಟೆಲ್ ಓಪೆನ್‌
  •  ಅರ್ಹರಿಗೆ ಉಚಿತ ಕರೆಂಟ್, ಮಹಿಳೆಯರು, ಯುವಕರಿಗೆ ವಿಶೇಷ ಕಾರ್ಯಕ್ರಮ ಆರಂಭಿಸಲಾಗಿದೆ. 5 ಲಕ್ಷ ಮಹಿಳೆಯರು, 5 ಲಕ್ಷ ಯುವಕರಿಗೆ ಉದ್ಯೋಗ ಲಭಿಸಲಿದೆ.
  • 8,101 ಶಾಲಾ ಕೊಠಡಿ ನಿರ್ಮಾಣ, 100 ಪಿಎಚ್‍ಸಿಗಳನ್ನು ಮೇಲ್ದರ್ಜೆಗೆ ಏರಿಸಲಾಗುತ್ತಿದೆ. ಶಿಕ್ಷಣ- ಆರೋಗ್ಯ ಸೇರಿ ಎಲ್ಲ ಮೂಲಸೌಕರ್ಯಗಳ ಕ್ಷೇತ್ರದಲ್ಲಿ ಗರಿಷ್ಠ ಅಭಿವೃದ್ಧಿ ಸಾಧನೆ.
  • ಕಲ್ಯಾಣ ಕರ್ನಾಟಕದ ಅನುದಾನವನ್ನು 1500 ಕೋಟಿಯಿಂದ 3 ಸಾವಿರ ಕೋಟಿಗೆ ಹೆಚ್ಚಿಸಲಾಗಿದೆ. ದಕ್ಷಿಣ ಕರ್ನಾಟಕ, ಕರಾವಳಿ ಸೇರಿ ರಾಜ್ಯದ ಸಮಗ್ರ ಅಭಿವೃದ್ಧಿಗೆ ಹತ್ತು ಹಲವು ಯೋಜನೆ ರೂಪಿಸಲಾಗಿದೆ.
  • ದಾವಣಗೆರೆ, ಹಾಸನ ಮತ್ತಿತರ ಕಡೆ ವಿಮಾನನಿಲ್ದಾಣ ಕಾಮಗಾರಿ, ಕೈಗಾರಿಕೀಕರಣ ಭರದಿಂದ ಸಾಗಿದೆ.

ಜನಪರ ಕಾರ್ಯಕ್ರಮಗಳಿಗೆ ನಾವು ಬದ್ಧರಾಗಿದ್ದೇವೆ. ಚುನಾವಣೆಗೆ ನಮ್ಮ ಕಾರ್ಯತಂತ್ರ ಕುರಿತಂತೆ‌‌ಸಮರ್ಪಕ ಚರ್ಚಿಸಿ ನಿರ್ಧಾರ ಕೈಗೊಳ್ಳಬೇಕಿದೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!