ಸ್ವಾರ್ಥ, ಸ್ವಜನಪಕ್ಷಪಾತ, ಭ್ರಷ್ಟಾಚಾರದ ಮೂಲಕ ಕಾಂಗ್ರೆಸ್‌ ಮತ ಪಡೆಯಲು ಮುಂದಾಗಿದೆ: ಸಿಎಂ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಬಿಜೆಪಿ ಅತ್ಯುತ್ಸಾಹದಿಂದ ಕೆಲಸ ಮಾಡುತ್ತಿದೆ. ಮಾರ್ಚ್ 1ರಿಂದ ಬಿಜೆಪಿ ರಥಯಾತ್ರೆ ಆರಂಭವಾಗಲಿದ್ದು, ಚುನಾವಣಾ ಸಮರದ ಸಮಯದಲ್ಲಿ ದಣಿವರಿಯದೆ ಕೆಲಸ ಮಾಡಬೇಕು ಎಂದು ಸಿಎಂ ಬೊಮ್ಮಾಯಿ ಉತ್ಸಾಹದ ಮಾತುಗಳನ್ನಾಡಿದರು.

ನಗರದ ದಿ ಕ್ಯಾಪಿಟಲ್ ಹೋಟೆಲ್‍ನಲ್ಲಿ ಇಂದು ಮಂಡಲ ಪ್ರಭಾರಿಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿ, ವಿಪಕ್ಷಗಳ ಕುಟಿಲ ಬುದ್ದಿಯನ್ನು ಒಂದೊಂದಾಗಿ ಬಿಚ್ಚಿಟ್ಟರು. ಪಡೆಯಲು ಕಾಂಗ್ರೆಸ್- ಜೆಡಿಎಸ್ ನಕಾರಾತ್ಮಕವಾಗಿ ಮತ ಪಡೆಯುವ ಪ್ರಯತ್ನ ಮಾಡುತ್ತಿವೆ.
ಸ್ವಾರ್ಥ, ಸ್ವಜನಪಕ್ಷಪಾತ, ಭ್ರಷ್ಟಾಚಾರ ಮಾಡಿದ ಕಾಂಗ್ರೆಸ್ ಪಕ್ಷವು ಇನ್ನೊಬ್ಬರ ಅವಹೇಳನ ಮಾಡಿ ಮತ ಪಡೆಯಲು ಮುಂದಾಗಿದೆ. ಕೇಂದ್ರದ ಅನುದಾನ ಬಳಸಿ ಪಡಿತರ ಅಕ್ಕಿ ಕೊಟ್ಟರೂ ಅನ್ನ ಭಾಗ್ಯ ತಾವೇ ಕೊಟ್ಟಿದ್ದಾಗಿ ಬಿಂಬಿಸಿದ್ದರು ಎಂದು ಟೀಕಿಸಿದರು.

ಜನರ ಕಣ್ಣಿಗೆ ಮಣ್ಣೆರಚುವ ಕಾರ್ಯವನ್ನು ಸದಾ ಕಾಲ ಕಾಂಗ್ರೆಸ್ ಮಾಡಿತ್ತು. ಅವರ ಕಾಲದಲ್ಲಿ ದಾಖಲೆ ಪ್ರಮಾಣದಲ್ಲಿ ಭ್ರಷ್ಟಾಚಾರ ಆಗಿತ್ತು. ಅಕ್ಕಿ, ಎಸ್‍ಸಿ, ಎಸ್‍ಟಿ ಹಾಸ್ಟೆಲ್‍ನ ಹಾಸಿಗೆ, ದಿಂಬಿನಲ್ಲಿ ಭ್ರಷ್ಟಾಚಾರ ಆಗಿತ್ತು. ನೀರಾವರಿ, ನೇಮಕಾತಿಯಲ್ಲೂ ಭ್ರಷ್ಟಾಚಾರ, ಬಿಡಿಎಲ್ಲಿ ರೀಡೂ ಭ್ರಷ್ಟಾಚಾರ, ಸೋಲಾರ್ ವಿದ್ಯುತ್ ವಿಚಾರದಲ್ಲೂ ಭ್ರಷ್ಟಾಚಾರ ಮಾಡಿದ್ದರು ಎಂದು ಆರೋಪಿಸಿದರು.

ಭ್ರಷ್ಟಾಚಾರ ಮುಚ್ಚಿ ಹಾಕಲು ಲೋಕಾಯುಕ್ತ ಸಂಸ್ಥೆಯನ್ನೇ ಮುಗಿಸಿಬಿಟ್ಟರು. ಎಸಿಬಿ ಮುಂದೆ ಸಿದ್ದರಾಮಯ್ಯರದ್ದೂ ಸೇರಿದಂತೆ ಸುಮಾರು 60 ಕೇಸುಗಳಿದ್ದು, ಎಲ್ಲದಕ್ಕೂ ಬಿ ರಿಪೋರ್ಟ್ ಕೊಟ್ಟಿದ್ದರು. ಕಾಂಗ್ರೆಸ್ ತಮ್ಮ ಮೇಲಿನ ಆರೋಪಗಳಿಗೆ ಮೊದಲು ಉತ್ತರಿಸಬೇಕು. ಆರೋಪಗಳ ಮೇಲೆ ಕೌದಿ ಹಾಕಿ ಮುಚ್ಚಿ ಹಾಕುವ ಪ್ರಯತ್ನ ಸಿದ್ದರಾಮಯ್ಯರದು ಎಂದು ವಿಮರ್ಶಿಸಿದರು. ನಮ್ಮ ಮೇಲಿನ ಆರೋಪದ ದಾಖಲೆ ಕೊಟ್ಟರೆ ಅದನ್ನು ತನಿಖೆ ಮಾಡಿಸಲು ಸಿದ್ಧ ಎಂದು ಸವಾಲು ಹಾಕಿದರು.

ಕಾಂಗ್ರೆಸ್ ವೈಫಲ್ಯ, ಬಿಜೆಪಿಯ ಮನೆಮನೆಗೆ ನಲ್ಲಿನೀರು ಯೋಜನೆ ಸೇರಿದಂತೆ ವಿವಿಧ ಜನಪರ ಯೋಜನೆಗಳ ವಿವರವನ್ನು ಜನರಿಗೆ ತಿಳಿಸಬೇಕು. ಮನೆ, ಕರೆಂಟ್, ಶೌಚಾಲಯ, ಉಚಿತ ಪಡಿತರ- ಹೀಗೆ ಕುಟುಂಬಗಳ ಸಶಕ್ತೀಕರಣ ನಡೆದಿದೆ. ಕಿಸಾನ್ ಸಮ್ಮಾನ್ ಯೋಜನೆ, ಸಂಧ್ಯಾ ಸುರಕ್ಷಾ, ವಿಧವಾ ವೇತನ, ಮಕ್ಕಳಿಗೆ ಸೈಕಲ್, ವಿದ್ಯಾನಿಧಿಯಂಥ ಯೋಜನೆಗಳನ್ನು ಜನರಿಗೆ ತಿಳಿಸಿ ಎಂದು ಮನವಿ ಮಾಡಿದರು.

ಕೇಂದ್ರದ ನರೇಂದ್ರ ಮೋದಿಜಿ ಸರಕಾರದ ಹತ್ತು ಹಲವು ಕಾರ್ಯಕ್ರಮ ಅನುಷ್ಠಾನಕ್ಕೆ ತಂದಿದೆ. ಕರ್ನಾಟಕದಲ್ಲಿ 2019ರಲ್ಲಿ ಯಡಿಯೂರಪ್ಪ ಅವರ ಸರಕಾರ ಹಲವಾರು ಕಾರ್ಯಕ್ರಮಗಳನ್ನು ಕೊಟ್ಟಿದ್ದಲ್ಲದೆ, ಕೋವಿಡ್ ಅತ್ಯಂತ ಸಮರ್ಥವಾಗಿ ನಿಭಾಯಿಸಿದೆ. ನಾನು ಪ್ರವಾಹವನ್ನು ಸಮರ್ಪಕವಾಗಿ ನಿಭಾಯಿಸಿದ್ದೇನೆ. ಅಲ್ಲದೆ ನಮ್ಮ ರಾಜ್ಯ ಸರಕಾರ ಅನೇಕ ಜನೋಪಯೋಗಿ ಕಾರ್ಯಕ್ರಮ ಜಾರಿಗೊಳಿಸಿದೆ. ಇವೆಲ್ಲವನ್ನೂ ಜನರಿಗೆ ತಿಳಿಸಬೇಕಿದೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!