ಹೊಸದಿಗಂತ ಡಿಜಿಟಲ್ ಡೆಸ್ಕ್:
ದಿವಂಗತ ನಟ ಪುನೀತ್ ರಾಜ್ ಕುಮಾರ್ ಅವರ ನಿಧನದ ನಂತರ ಅಂತಿಮ ದರ್ಶನ ಹಾಗೂ ಅಂತ್ಯ ಸಂಸ್ಕಾರದ ಸಂದರ್ಭದಲ್ಲಿ ಶ್ರಮಿಸಿದ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೃತಜ್ಞತೆಗಳನ್ನು ಅರ್ಪಿಸಿದರು.
ಇಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸರ್ಕಾರದ ಪೊಲೀಸ್ ಇಲಾಖೆ, ಬಿಬಿಎಂಪಿ, ಕಂದಾಯ ಇಲಾಖೆಗಳು ಮೂರು ದಿನಗಳಿಂದ ಸಾರ್ವಜನಿಕರಿಗೆ ಪುನೀತ್ ಅವರ ದರ್ಶನದ ವ್ಯವಸ್ಥೆಯನ್ನು ಬಹಳಷ್ಟು ಶ್ರಮ ಮತ್ತು ಶ್ರದ್ಧೆಯಿಂದ ಮಾಡಿವೆ. ಸಣ್ಣ ಪ್ರಮಾದವೂ ಜರುಗದಂತೆ ಎಚ್ಚರ ವಹಿಸಿದಕ್ಕಾಗಿ ಈ ಇಲಾಖೆಗಳು ಅಭಿನಂದನೆಗೆ ಅರ್ಹ. ಈ ಇಲಾಖೆಗಳ ಅಧಿಕಾರಿಗಳ ಕಾರ್ಯ ಪ್ರಶಂಸಾರ್ಹ. ಹೀಗಾಗಿ ಅವರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಲಕ್ಷಾಂತರ ಅಭಿಮಾನಿಗಳು ಆಗಮಿಸಿದರೂ ಸಾರ್ವಜನಿಕರಿಗೆ ಅನಾನುಕೂಲವಾಗದಂತೆ ಸುವ್ಯವಸ್ಥಿತ ದರ್ಶನ ಮತ್ತು ಅಂತ್ಯಕ್ರಿಯೆಗೆ ಸಹಕರಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಡಾ. ರಾಜ್ ಕುಮಾರ್ ಅವರ ಕುಟುಂಬದ ಸದಸ್ಯರು ಬಹಳಷ್ಟು ಸಹಕಾರ ನೀಡಿದ್ದಾರೆ. ಶಿವರಾಜ್ ಕುಮಾರ್ ಹಾಗೂ ರಾಘವೇಂದ್ರ ರಾಜ್ ಕುಮಾರ್ ಅವರಿಗೂ ಹೃದಯಪೂರ್ವಕ ಧನ್ಯವಾದಗಳನ್ನು ಅರ್ಪಿಸಿದರು.
ನಟ ಶಿವರಾಜ್ ಕುಮಾರ್ ಸರ್ಕಾರಕ್ಕೆ ಮತ್ತು ತಮಗೆ ಕೃತಜ್ಞತೆಗಳನ್ನು ಅರ್ಪಿಸಿದ ಬಗ್ಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು, ಇಂಥ ಘಟನೆಗಳು ಜರುಗಿದಾಗ ಶಾಂತಿ ಸುವ್ಯವಸ್ಥೆ ಕಾಪಾಡುವುದು, ವ್ಯವಸ್ಥಿತವಾಗಿ ಜನರಿಗೆ ಅನುಕೂಲ ಕಲ್ಪಿಸುವುದು, ಸುಸೂತ್ರವಾಗಿ ಎಲ್ಲವನ್ನೂ ನಡೆಸಿಕೊಡುವುದು ಸರ್ಕಾರದ ಕರ್ತವ್ಯ . ಆ ಜವಾಬ್ದಾರಿಯನ್ನು ನಿರ್ವಹಿಸಿದ್ದೇವೆ ಎಂದರು. ಸರ್ಕಾರಕ್ಕೆ ಅವರ ಕೃತಜ್ಞಾಪೂರ್ವಕ ಮಾತುಗಳು ದೊಡ್ಡ ಮನೆಯ ದೊಡ್ಡ ಗುಣ ಎಂದರು.