Tuesday, August 9, 2022

Latest Posts

ಕಾಫಿ ಬೆಳೆಗಾರರಿಗೆ ಉಚಿತ ವಿದ್ಯುತ್ ಬೇಡಿಕೆ ತಳ್ಳಿ ಹಾಕಿದ ಸಿಎಂ

ಹೊಸ ದಿಗಂತ ವರದಿ ಮಡಿಕೇರಿ:

ಕಾಫಿ ಬೆಳೆಗಾರರ 10 ಹೆಚ್.ಪಿ.ವರೆಗಿನ ಪಂಪ್ ಸೆಟ್ ಗಳಿಗೆ ಉಚಿತ ವಿದ್ಯುತ್ ನೀಡಬೇಕೆನ್ನುವ ಕಾಫಿ ಬೆಳೆಗಾರರ ಬೇಡಿಕೆಯನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತಾತ್ಕಾಲಿಕವಾಗಿ ತಳ್ಳಿ ಹಾಕಿದ್ದಾರೆ.

ವಿಧಾನ ಮಂಡಲದ ಅಧಿವೇಶನದಲ್ಲಿ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅವರು ಕೇಳಿರುವ ಪ್ರಶ್ನೆಗೆ ಉತ್ತರಿಸಿರುವ ಮುಖ್ಯಮಂತ್ರಿಗಳು, ಸಣ್ಣ, ಮಧ್ಯಮ ಕಾಫಿ ಮತ್ತು ಟೀ ಬೆಳೆಗಾರರ 10 ಎಚ್.ಪಿ.ವರೆಗಿನ ಪಂಪ್‌ಸೆಟ್‌ಗಳ ವಿದ್ಯುತ್ ಶುಲ್ಕವನ್ನು ಮರು ಪಾವತಿಸಲು ಕಳೆದ ಸಾಲಿನ ಆಯ ವ್ಯಯದಲ್ಲಿ ಒಂದು ಯೋಜನೆ ರೂಪಿಸಿ ಘೋಷಿಸಲಾಗಿದೆ.ಆದರೆ, ರಾಜ್ಯದಲ್ಲಿ ಕೋವಿಡ್ ನಿಂದ ಉಂಟಾಗಿರುವ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುವ ನಿಟ್ಟಿನಲ್ಲಿ ಸಂಪನ್ಮೂಲವನ್ನು ಕ್ರೋಢೀರಿಸಲು ವೆಚ್ಚದ ಬಾಬ್ತಿನಲ್ಲಿ ಮಿತ ವ್ಯಯವನ್ನು ಪಾಲಿಸುವುದು ಅನಿವಾರ್ಯವಾಗಿದೆ ಮತ್ತು ಈಗಾಗಲೇ ರೈತರಿಗೆ ಪಿ.ಎಂ.ಕೆ.ಎಸ್.ವೈ ನಂತಹ ಹಲವು ಯೋಜನೆಗಳನ್ನು ಘೋಷಿಸಲಾಗಿರುವುದರಿಂದ ಈ ಘೋಷಣೆಯನ್ನು ಕೈ ಬಿಡಲಾಗಿದೆ ಎಂದು ಸ್ಪಷ್ಟಪಡಿಸಿದರು.

ಕೊಡಗು ಜಿಲ್ಲೆಯಲ್ಲಿ ಕಾಫಿ ಬೆಳೆಗಾರರು ಕಾಫಿ ಬೆಳೆಗೆ ಸ್ಪಿಂಕ್ಲರ್ ಮಾಡಲು ವರ್ಷದಲ್ಲಿ ಮೂರು ತಿಂಗಳು ಮಾತ್ರ ಉಪಯೋಗಿಸುವ ಪಂಪ್‌ಸೆಟ್‌ಗಳಿಗೆ ವರ್ಷಕ್ಕೆ ಅನ್ವಯಿಸುವಂತೆ ಕನಿಷ್ಟ ವಿದ್ಯುತ್ ದರ ನಿಗದಿ ಮಾಡಿ ಹಣ ವಸೂಲಿ ಮಾಡಲಾಗುತ್ತಿದೆ.ಇದು ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿರುವ ಕಾಫಿ ಬೆಳೆಗಾರರು ಇನ್ನಷ್ಟು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ ಎಂದು ವೀಣಾ ಅಚ್ಚಯ್ಯ ಸರಕಾರದ ಗಮನಸೆಳೆದರು.
ಕಳೆದ ಮೂರು ವರ್ಷಗಳಿಂದ ಸಂಭವಿಸಿದ ಪ್ರಕೃತಿ ವಿಕೋಪದಿಂದ ಕಾಫಿ ಬೆಳೆ ಹಾಳಾಗಿರುವುದು ಮತ್ತು ಸತತ ಬೆಲೆ ಕುಸಿತದಿಂದ ಕೊಡಗು ಕಾಫಿ ಬೆಳೆಗಾರರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವುದನ್ನು ಪರಿಗಣಿಸಿ ಕೊಡಗು ಜಿಲ್ಲೆಯ ಕಾಫಿ ಬೆಳೆಗಾರರು ಬಳಸುವ 10 ಅಶ್ವಶಕ್ತಿ ವರೆಗಿನ ಪಂಪ್ ಸೆಟ್‌ಗಳಿಗೆ ಉಚಿತ ವಿದ್ಯುತ್ ಪೂರೈಕೆ ಮಾಡಬೇಕು ಎಂದು ಅವರು ಮನವಿ ಮಾಡಿದರು.

ಆದರೆ ಈಗಿನ ಪರಿಸ್ಥಿತಿಯಲ್ಲಿ ಇದು ಅಸಾಧ್ಯ ಎಂದು ನುಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು,ರಾಜ್ಯದ ಎಲ್ಲಾ ವಿದ್ಯುತ್ ಗ್ರಾಹಕರು ಬಳಸುವ ವಿವಿಧ ರೀತಿಯ ವಿದ್ಯುತ್ ಬಳಕೆಗೆ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ ದರ ನಿಗದಿಪಡಿಸುತ್ತದೆ. ಆಯೋಗವು ಕಾಲ ಕಾಲಕ್ಕೆ ಅನುಮೋದಿಸಿ ನಿಗದಿಪಡಿಸಿರುವ ದರಗಳಂತೆ ರಾಜ್ಯದಲ್ಲಿನ ಖಾಸಗಿ ತೋಟಗಾರಿಕೆ ನರ್ಸರಿಗಳು, ಕಾಫಿ, ಟೀ ಮತ್ತು ರಬ್ಬರ್ ಪ್ಲಾಂಟೇಷನ್‌ಗಳನ್ನು ಹೊಂದಿರುವ 10 ಎಚ್‌ಪಿ ವರೆಗಿನ ಹಾಗೂ 10 ಎಚ್‌ಪಿಗೂ ಮೇಲ್ಪಟ್ಟ ವಿದ್ಯುತ್ ಸ್ಥಾವರಗಳ ಗ್ರಾಹಕರು ವಿದ್ಯುತ್ ಬಳಕೆಗೆ ತಕ್ಕಂತೆ ವಿದ್ಯುತ್ ಶುಲ್ಕ ಪಾವತಿಸಬೇಕಿದೆ ಎಂದು ತಿಳಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss