ವಿಧಾನಸೌಧದ ದ್ವಾರ, ಕಾಂಪೌಂಡ್‌ ಗೋಡೆ ಮೇಲೆ ಖಲಿಸ್ತಾನ್‌ ಧ್ವಜಗಳ ಹಾರಾಟ, ತನಿಖೆಗೆ ಆದೇಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿರುವ ವಿಧಾನಸೌಧದ ಮುಖ್ಯ ಗೇಟ್ ಮತ್ತು ಕಾಂಪೌಂಡ್‌ ಗೋಡೆಯ ಮೇಲೆ ದುಷ್ಕರ್ಮಿಗಳು ‘ಖಾಲಿಸ್ತಾನ್’ ಧ್ವಜಗಳನ್ನು ಕಟ್ಟಿದ್ದಾರೆ. ಘಟನೆಯನ್ನು ಖಂಡಿಸಿರುವ ಮುಖ್ಯಮಂತ್ರಿ ಜೈರಾಮ್ ಠಾಕೂರ್, ಈ ಬಗ್ಗೆ ತಕ್ಷಣ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ.

ತಡರಾತ್ರಿ ಧರ್ಮಶಾಲಾ ಅಸೆಂಬ್ಲಿ ಕಾಂಪ್ಲೆಕ್ಸ್‌ನ ಗೇಟ್‌ ಹಾಗೂ ಕಾಂಪೌಂಡ್‌ ಮೇಲೆ ಖಲಿಸ್ತಾನ್ ಧ್ವಜವನ್ನು ಹಾರಿಸಿರುವ ಹೇಡಿತನದ ಘಟನೆಯನ್ನು ನಾನು ಖಂಡಿಸುತ್ತೇನೆ. ಚಳಿಗಾಲದ ಅಧಿವೇಶನದಲ್ಲಿ ಮಾತ್ರ ಇಲ್ಲಿ ಹೆಚ್ಚಿನ ಭದ್ರತಾ ವ್ಯವಸ್ಥೆ ಇರುತ್ತದೆ. ಯಾರೂ ಇಲ್ಲದ ಸಮಯ ನೋಡಿಕೊಂಡು ಕಿಡಿಗೇಡಿಗಳು ದುಷ್ಕೃತ್ಯ ಎಸಗಿದ್ದಾರೆ. ಇದನ್ನು ನಾವು ಸಹಿಸುವುದಿಲ್ಲ, ಈ ಘಟನೆಯನ್ನು ಕೂಡಲೇ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು, ಧೈರ್ಯವಿದ್ದರೆ ಹಗಲಿನಲ್ಲಿ ಈ ಕೆಲಸ ಮಾಡಿ. ಕತ್ತಲೆಯಲ್ಲಿ ಈ ಕೆಲಸ ಮಾಡಿರುವವರು ರಣ ಹೇಡಿಗಳು ಎಂದು ಟ್ವೀಟ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಘಟನೆ ಬೆಳಕಿಗೆ ಬಂದ ಕೂಡಲೇ ದ್ವಾರಗಳು ಮತ್ತು ಗೋಡೆಗಳಿಂದ ಧ್ವಜಗಳನ್ನು ತೆಗೆದುಹಾಕಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಘಟನೆಯ ಹಿಂದೆ ಪಂಜಾಬ್‌ನ ಕೆಲವು ಪ್ರವಾಸಿಗರ ಕೈವಾಡವಿದೆ ಎಂದು ಕಾಂಗ್ರಾದ ಪೊಲೀಸ್ ವರಿಷ್ಠಾಧಿಕಾರಿ ಖುಶಾಲ್ ಶರ್ಮಾ ಶಂಕಿಸಿದ್ದಾರೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!