ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿ ಸಿಎಂ ಸ್ಥಾನಕ್ಕೆ ಅರವಿಂದ್ ಕೇಜ್ರಿವಾಲ್ ರಾಜೀನಾಮೆ ನೀಡಿದ್ದು, ಇದಾದ ಬಳಿಕ ಮುಖ್ಯಮಂತ್ರಿ ಕುರ್ಚಿಯನ್ನು ಆಪ್ ನಾಯಕಿ ಅತಿಶಿಗೆ ಬಿಟ್ಟುಕೊಟ್ಟಿದ್ದಾರೆ.
ಇಂದು ಮುಂಜಾನೆ ಅರವಿಂದ್ ಕೇಜ್ರಿವಾಲ್ ಅವರ ದೆಹಲಿ ನಿವಾಸದಲ್ಲಿ ಶಾಸಕಾಂಗ ಪಕ್ಷದ ಸಭೆ ನಡೆದ ನಂತರ ಈ ನಿರ್ಧಾರ ಕೈಗೊಂಡಿದ್ದಾರೆ.ಇದೀಗ ನೂತನ ಸಿಎಂ ಆಗಿ ಆಯ್ಕೆಯಾಗಿರುವ ಅತಿಶಿ ಬಗ್ಗೆ ಪಕ್ಷದ ನಾಯಕಿ, ರಾಜ್ಯಸಭಾ ಸದಸ್ಯೆ ಸ್ವಾತಿ ಮಲಿವಾಲ್ ಆರೋಪ ಮಾಡಿದ್ದಾರೆ.
ಕಲ್ಕಾಜಿ ಆಪ್ ಶಾಸಕಿ ಅತಿಶಿ ಮರ್ಲೆನಾ ಸಿಂಗ್ ದೆಹಲಿ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಬೆನ್ನಲ್ಲೇ ಸ್ವಾತಿ ಮಲಿವಾಲ್ ಪ್ರತಿಕ್ರಿಯೆ ನೀಡಿದ್ದು,’ಇಂದು ದೆಹಲಿಗೆ ಬಹಳ ದುಃಖಕರ ದಿನ. ಯಾವ ಮಹಿಳೆಯ ಕುಟುಂಬದವರು ಉಗ್ರ ಅಫ್ಜಲ್ ಗುರು ಮರಣದಂಡನೆಗೆ ಒಳಗಾಗದಂತೆ ದೀರ್ಘಾವಧಿ ಹೋರಾಟ ಮಾಡಿದರೋ ಅವರನ್ನು ಮುಖ್ಯಮಂತ್ರಿಯಾಗಿ ಮಾಡಲಾಗಿದೆ. ಅಫ್ವಲ್ ಗುರುಗೆ ಕ್ಷಮಾದಾನ ನೀಡುವಂತೆ ಆಕೆಯ ಪೋಷಕರು ರಾಷ್ಟ್ರಪತಿಗಳಿಗೆ ಪತ್ರವನ್ನು ಬರೆದಿದ್ದರು ಎಂದು ಹೇಳಿದ್ದರು. ಅವರ ಪ್ರಕಾರ, ಅಫ್ಜಲ್ ಗುರು ನಿರಪರಾಧಿ ಮತ್ತು ಅವರು ರಾಜಕೀಯ ಪಿತೂರಿಯ ಕಾರಣದಿಂದ ಸಿಕ್ಕಿಬಿದ್ದಿದ್ದಾರೆ ಎಂದವರು. ಅತಿಶಿ ಮರ್ಲೆನಾ ‘ಡಮ್ಮಿ ಸಿಎಂ’ ಎಂದು ಟೀಕೆ ಮಾಡಿದ್ದು, ಈ ವಿಚಾರ ದೇಶದ ಭದ್ರತೆಗೆ ಸಂಬಂಧಿಸಿದೆ. ದೇವರು ದೆಹಲಿಯನ್ನು ಕಾಪಾಡಲಿ’ಎಂದು ಟ್ವೀಟ್ ಮಾಡಿ ಕಿಡಿ ಕಾರಿದ್ದಾರೆ.
ತಮ್ಮ ಪೋಸ್ಟ್‌ನಲ್ಲಿ, ಸ್ವಾತಿ ಮಲಿವಾಲ್ ಅವರು ಅಫ್ಜಲ್ ಗುರುವನ್ನು ಗಲ್ಲಿಗೇರಿಸುವುದನ್ನು ನಿಲ್ಲಿಸುವಂತೆ ಒತ್ತಾಯಿಸಿ ಅತಿಶಿ ತಂದೆ ವಿಜಯ್ ಸಿಂಗ್ ಮತ್ತು ತಾಯಿ ತ್ರಿಪ್ತಾ ವಾಹಿ ಸಹಿ ಮಾಡಿದ ಕ್ಷಮಾದಾನ ಅರ್ಜಿಯನ್ನು ಸಹ ಹಂಚಿಕೊಂಡಿದ್ದಾರೆ.