Thursday, August 11, 2022

Latest Posts

ಕೇರಳ ಚಿನ್ನ ಕಳ್ಳಸಾಗಣೆ ಕೇಸ್‌ನಲ್ಲಿ ಸಿಎಂ ಪಿಣರಾಯಿ, ಸ್ಪೀಕರ್ ಶ್ರೀರಾಮಕೃಷ್ಣನ್ ಶಾಮೀಲು!

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಕೇರಳದಲ್ಲಿ ನಡೆದ ಚಿನ್ನ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿ ತಿರುವನಂತಪುರಂನಲ್ಲಿನ ಯುಎಇ ಕಾನ್ಸುಲ್ ಜನರಲ್‌ನೊಂದಿಗೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಕೇರಳ ವಿಧಾನಸಭಾಧ್ಯಕ್ಷ ಶ್ರೀರಾಮಕೃಷ್ಣನ್‌ಗೂ ಸಂಪರ್ಕವಿರುವುದನ್ನು ಕಸ್ಟಮ್ಸ್ ಇಲಾಖೆ ಕೇರಳ ಹೈಕೋರ್ಟಿಗೆ ಸಲ್ಲಿಸಿದ ಅಫಿದವಿತ್‌ನಲ್ಲಿ ಬಹಿರಂಗಪಡಿಸಿದೆ. ಇದರೊಂದಿಗೆ ಇಡಿ ಪ್ರಕರಣವೀಗ ಕೇರಳ ಮುಖ್ಯಮಂತ್ರಿ ಮತ್ತು ಸ್ಪೀಕರ್‌ವರೆಗೆ ತಲುಪಿರುವುದು ವ್ಯಕ್ತವಾದಂತಾಗಿದೆ.
ಪ್ರಕರಣದ ಪ್ರಮುಖ ಆರೋಪಿಗಳಲ್ಲೊಬ್ಬಳಾದ ಸ್ವಪ್ನಾ ಸುರೇಶ್ ತನಿಖಾ ಸಂಸ್ಥೆಯ ವಿಚಾರಣೆಯ ವೇಳೆ ನೀಡಿದ ಗೌಪ್ಯ ಹೇಳಿಕೆಯಲ್ಲಿ ಈ ಇಡಿ ಪ್ರಕರಣದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕಾನ್ಸುಲ್ ಜನರಲ್ ಜೊತೆ ನೇರ ಸಂಪರ್ಕದಲ್ಲಿದ್ದು, ಹಣಕಾಸು ಡೀಲಿಂಗ್ ನಡೆಸಿರುವುದನ್ನು ಬಹಿರಂಗಪಡಿಸಿದ್ದು, ಈ ಕುರಿತ ವರದಿಯನ್ನು ಕಸ್ಟಮ್ಸ್ ಇಲಾಖೆ ಕೇರಳ ಉಚ್ಚ ನ್ಯಾಯಾಲಯಕ್ಕೆ ಸಲ್ಲಿಸಿದ ಅಫಿದವಿತ್‌ನಲ್ಲಿ ತಿಳಿಸಲಾಗಿದೆ.ಈ ಕುರಿತ ಅಫಿದವಿತ್ ಪ್ರತಿಯೊಂದನ್ನು ಪಡೆಯುವಲ್ಲಿ ಸಫಲವಾದ ಮಲೆಯಾಳದ ಪ್ರಮುಖ ಪತ್ರಿಕೆ ಇದನ್ನು ಹೊರಗೆಡವಿದೆ.
ಕೇರಳ ವಿಧಾನಸಭಾ ಚುನಾವಣೆಗೆ ಇನ್ನು ಒಂದು ತಿಂಗಳು ಬಾಕಿಯಿರುವಾಗಲೇ ಈ ಆಘಾತಕಾರಿ ಮಾಹಿತಿ ಬಹಿರಂಗಗೊಂಡಿರುವುದು ಆಳುವ ಸಿಪಿಎಂ ನೇತೃತ್ವದ ಎಡರಂಗಕ್ಕೆ ಭಾರೀ ಹೊಡೆತವನ್ನು ನೀಡುವ ಸಾಧ್ಯತೆ ಕಂಡುಬಂದಿದೆ.ಅಷ್ಟೇ ಅಲ್ಲದೆ, ಸ್ವಪ್ನಾ ಸುರೇಶ್ ಕೇರಳದ ಇತರ ಮೂವರು ಸಚಿವರು ಕೂಡಾ ಚಿನ್ನ ಕಳ್ಳಸಾಗಣೆಯಲ್ಲಿ ಹೇಗೆ ಭಾಗಿಯಾಗಿದ್ದಾರೆ ಎಂಬ ಮಾಹಿತಿಯನ್ನೂ ತಿಳಿಸಿದ್ದಾಳೆ. ಯುಎಇ ಕಾನ್ಸುಲೇಟ್ ಜನರಲ್‌ನ ರಾಜತಾಂತ್ರಿಕ ಬ್ಯಾಗೇಜಿನಲ್ಲಿ ಇದ್ದುದು ಕಳ್ಳ ಚಿನ್ನ ಎಂಬುದು ತನಿಖೆಯಲ್ಲಿ ಪತ್ತೆಯಾದ ಬಳಿಕ ಸ್ವಪ್ನಾ ಸುರೇಶ್ ಮತ್ತಿತರ ಪ್ರಮುಖ ಆರೋಪಿಗಳು, ಕೇರಳದ ಕುಖ್ಯಾತ ಕಳ್ಳಸಾಗಣೆದಾರರನ್ನು ಬಂಸಿದಾಗ ಈ ಸ್ಫೋಟಕ ಪ್ರಕರಣ ಬಹಿರಂಗಗೊಂಡಿತ್ತು. ಈ ಪ್ರಕರಣದಲ್ಲಿ ಸ್ವಪ್ನಾ ಸುರೇಶ್ ಜೊತೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಆಪ್ತ ಕಾರ್ಯದರ್ಶಿಯಾಗಿದ್ದ ಐಎಎಸ್ ಅಧಿಕಾರಿ ಎಂ.ಶಿವಶಂಕರ್ ಸೇರಿದಂತೆ ಅಧಿಕಾರಿಗಳ ಶಾಮೀಲಾತಿಯೂ ಬಹಿರಂಗಗೊಂಡು ಅವರು ರಾಜೀನಾಮೆ ನೀಡಬೇಕಾಗಿ ಬಂದಿದ್ದನ್ನು ಇಲ್ಲಿ ಸ್ಮರಿಸಬಹುದು.
ಇದೀಗ ಈ ಭಾರೀ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಕೇರಳ ವಿಧಾನಸಭಾಧ್ಯಕ್ಷ, ಮೂವರು ಸಚಿವರು ಹಾಗೂ ಇತರ ಪ್ರಭಾವಿ ವ್ಯಕ್ತಿಗಳು ಶಾಮೀಲಾಗಿದ್ದಾರೆ ಎಂಬ ಅಂಶ ಕೇರಳ ರಾಜಕೀಯದಲ್ಲಿ ಭಾರೀ ಕೋಲಾಹಲವನ್ನೇ ಸೃಷ್ಟಿಸಿದೆ. ಅಂದು ಕಾನ್ಸುಲೇಟ್ ಜನರಲ್‌ಗೆ ಬಂದಿದ್ದ ಬ್ಯಾಗೇಜ್ ಮೂಲಕ ಬರೋಬ್ಬರಿ 30 ಕಿಲೋ ಚಿನ್ನ ಕಳ್ಳಸಾಗಣೆ ಮಾಡಿದ್ದುದನ್ನು ಕಸ್ಟಮ್ಸ್ ಸೇರಿದಂತೆ ವಿವಿಧ ತನಿಖಾ ಸಂಸ್ಥೆಗಳು ಬಯಲಿಗೆಳೆದಿದ್ದವು.
ಯುಎಇ ಕಾನ್ಸುಲೇಟ್ ಬ್ಯಾಗೇಜ್‌ನಲ್ಲಿ ಚಿನ್ನ ಕಳ್ಳಸಾಗಣೆ ನಡೆಯುತ್ತಿದ್ದುದು ಪತ್ತೆಯಾಗುತ್ತಲೇ, ಕಸ್ಟಮ್ಸ್ ಇಲಾಖೆ ವಿದೇಶಾಂಗ ಇಲಾಖೆ ಮತ್ತು ಕೇಂದ್ರ ಗೃಹ ಇಲಾಖೆಯ ಅನುಮತಿ ಪಡೆದು ಕಾರ್ಯಾಚರಣೆ ನಡೆಸಿದಾಗ ,ಇದು ದೇಶದ ಭದ್ರತೆಗೂ ಬೆದರಿಕೆಯಾಗಿರುವ ಪ್ರಕರಣವಾಗಿರುವುದನ್ನು ಕಂಡುಕೊಳ್ಳಲಾಗಿತ್ತು. ಬಳಿಕ ಇದರ ಹಿಂದೆ ಭಾರೀ ಖುಳಗಳೇ ಶಾಮೀಲಾಗಿರುವುದು ಬಹಿರಂಗಗೊಳ್ಳುವಂತಾಗಿ, ಸ್ವಪ್ನಾ ಸುರೇಶ್ ಸೇರಿದಂತೆ ಆರೋಪಿಗಳನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿತ್ತು.
ಹಾಗೆಯೇ ಯುಎಇ ಕಾನ್ಸುಲೇಟ್ ಜನರಲ್‌ನ ಮಾಜಿ ಹಣಕಾಸು ಮುಖ್ಯಸ್ಥ ಖಾಲಿದ್ ಆಲಿ ಶೌಕ್ರಿ ೧.೯ಲಕ್ಷ ಡಾ.ಕರೆನ್ಸಿ ಕಳ್ಳಸಾಗಣೆ ನಡೆಸಿದ ಕೃತ್ಯವೂ ಬೆಳಕಿಗೆ ಬಂದ ಬಳಿಕ ಈ ಪ್ರಕರಣದ ಬಗ್ಗೆ ರಾಷ್ಟ್ರೀಯ ತನಿಖಾ ದಳಕ್ಕೂ ತನಿಖೆ ನಡೆಸುವಂತೆ ಕೇಂದ್ರ ಗೃಹಸಚಿವಾಲಯ ಆದೇಶಿಸಿತ್ತು. ಪಿಣರಾಯಿ ವಿಜಯನ್ ಆಪ್ತ ಕಾರ್ಯದರ್ಶಿ ಶಿವಶಂಕರ್ ಅವರನ್ನು ಹೊರತುಪಡಿಸಿ ಇತರ ಆರೋಪಿಗಳ ವಿರುದ್ಧ ಕಾಫಿಪೋಸ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು.

 

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss