Tuesday, June 28, 2022

Latest Posts

ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ಸಿಎಂ ಅವರ ಕೈ ಬಲಪಡಿಸಬೇಕು: ಸಚಿವ ಪ್ರಭು ಚವ್ಹಾಣ್

ಹೊಸದಿಗಂತ ವರದಿ, ಬೀದರ್:

ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಶರಣು ಸಲಗರ್ ಅವರನ್ನು ಗೆಲ್ಲಿಸುವ ಮೂಲಕ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಕೈ ಬಲಪಡಿಸಬೇಕು ಎಂದು ಪಶುಸಂಗೋಪನೆ ಹಾಗೂ ಬೀದರ್ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಚವ್ಹಾಣ್ ಅವರು ಮನವಿ ಮಾಡಿದರು.
ಬಸವಕಲ್ಯಾಣ ವಿಧಾನಸಭಾ ಉಪ ಚುನಾವಣೆ ನಿಮಿತ್ತ ಸಚಿವರು ಏ.11ರಂದು ಬಸವಕಲ್ಯಾಣ ತಾಲೂಕಿನ ಕಲಕೋರಾ ದೇವಿ ತಾಂಡಾ, ಗದಲೇಗಾಂವ್ ತಾಂಡಾ, ಶೇಕು ತಾಂಡಾ, ಗಂಗಾರಾಮ ತಾಂಡಾ, ಹಾಮುನಗರ ತಾಂಡಾ, ಕರಿಗುಂಡಾ ತಾಂಡಾ ಸೇರಿದಂತೆ ಸುಮಾರು 17 ತಾಂಡಾಗಳಿಗೆ ಭೇಟಿ ನೀಡಿ ಮತಯಾಚನೆ ನಡೆಸಿದರು.
ಬಿ.ಎಸ್ ಯಡಿಯೂರಪ್ಪನವರು ಬಂಜಾರ ಸಮುದಾಯದವರ ಪಾಲಿಗೆ ಎರಡನೇ ಸೇವಾಲಾಲ್ ತರಹ ಕೆಲಸ ಮಾಡುತ್ತಿದ್ದಾರೆ. ಸಮುದಾಯದ ಅಭಿವೃದ್ಧಿಗೆ ಮುಖ್ಯಮಂತ್ರಿಗಳು ಬಹಳಷ್ಟು ಸಹಾಯ ಮಾಡಿದ್ದಾರೆ. ಈ ಸಮುದಾಯದವರು ಶಾಸಕರಾಗಿ, ಸಚಿವರಾಗಿ, ಕುಲಪತಿಗಳಾಗಿ ಅನೇಕ ಉನ್ನತ ಹುದ್ದೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಇದರಲ್ಲಿ ಮುಖ್ಯಮಂತ್ರಿಯವರ ಪಾತ್ರ ಮಹತ್ವದ್ದಾಗಿದೆ ಎಂದರು.
ಬಂಜಾರ ಸಮುದಾಯದ ಪ್ರತಿಯೊಬ್ಬರನ್ನೂ ಸುಶಿಕ್ಷಿತರನ್ನಾಗಿ ಮಾಡಬೇಕು. ಎಲ್ಲಾ ತಾಂಡಾಗಳನ್ನು ಗುಡಿಸಲು ಮುಕ್ತ ಮಾಡಬೇಕು ಎನ್ನುವ ಸಂಕಲ್ಪ ಹೊಂದಲಾಗಿದೆ. ಈ ಸಮುದಾಯದ ಸರ್ವತೋಮುಖ ಅಭಿವೃದ್ಧಿಗೆ ಬಿಜೆಪಿ ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.
ಶರಣು ಸಲಗರ್ ಅವರು ಕೋವಿಡ್ ಸಂಕಷ್ಟದ ಸಮಯದಲ್ಲಿ ಬಸವಕಲ್ಯಾಣ ತಾಲೂಕಿನಾದ್ಯಂತ ಓಡಾಡಿ ಜನರ ಸಂಕಷ್ಟಗಳಿಗೆ ಮಿಡಿದಿದ್ದಾರೆ. ಶಕ್ತಿ ಮೀರಿ ಜನತೆಗೆ ಸಹಾಯ ಮಾಡಿ ಮಾನವೀಯತೆ ಮೆರೆದಿದ್ದಾರೆ. ಇಂತಹ ಪರೋಪಕಾರಿ ಮನೋಭಾವದ ವ್ಯಕ್ತಿಯನ್ನು ಗೆಲ್ಲಿಸಿ ತನ್ನಿ ಎಂದು ಮತದಾರರಲ್ಲಿ ಕೋರಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಸೋಮನಾಥ್ ಪಾಟೀಲ್, ಅಣ್ಣಾರಾವ್ ರಾಠೋಡ್, ಸುನಿಲ್ ರಾಠೋಡ್, ರಾಮಶೆಟ್ಟಿ ಪನ್ನಾಳೆ, ರಮೇಶ ದೇವಕತೆ, ವೀರೇಶ ಸಜ್ಜನ್, ಅಮರ್ ಬಡದಾಳೆ, ಜಗನ್ನಾಥ ಆಡೆ, ಕೇರಬಾ ಪವಾರ್, ಶರಣಪ್ಪ ಪಂಚಾಕ್ಷರಿ ಸೇರಿದಂತೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು. ತಾಂಡಾಗಳಿಗೆ ಭೇಟಿ ನೀಡಿದ ಸಚಿವರನ್ನು ಗ್ರಾಮಸ್ಥರು ಸಾಂಪ್ರದಾಯಿಕ ವೇಷಭೂಷಣಗಳನ್ನು ಧರಿಸಿ ಆತ್ಮೀಯವಾಗಿ ಸ್ವಾಗತ ಕೋರಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss