ಹೊಸದಿಗಂತ ಡಿಜಿಟಲ್ ಡೆಸ್ಕ್:
ಪೂರ್ವ ಇರಾನ್‌ನ ಕಲ್ಲಿದ್ದಲು ಗಣಿಯೊಂದರಲ್ಲಿ ಸ್ಫೋಟ ಸಂಭವಿಸಿ ಕನಿಷ್ಠ 50ಕ್ಕೂ ಹೆಚ್ಚು ಜನರು ಮೃತಪಟ್ಟು, 20 ಮಂದಿ ಗಾಯಗೊಂಡಿದ್ದಾರೆ.
ತೆಹ್ರಾನ್ ರಾಜಧಾನಿಯ ಆಗ್ನೇಯ ಭಾಗಕ್ಕೆ 540 ಕಿ.ಮೀ. ದೂರದಲ್ಲಿರುವ ತಬಾಸ್ ಎಂಬಲ್ಲಿನ ಕಲ್ಲಿದ್ದಲು ಗಣಿಯಲ್ಲಿ ಮಿಥೇನ್ ಅನಿಲ ಸೋರಿಕೆಯಾಗಿದೆ.
ಶನಿವಾರ ಸ್ಫೋಟ ಸಂಭವಿಸಿದ ಬಳಿಕ ಅಧಿಕಾರಿಗಳು ತುರ್ತು ರಕ್ಷಣಾ ಸಿಬ್ಬಂದಿಯನ್ನು ಸ್ಥಳಕ್ಕೆ ಕಳುಹಿಸಿದ್ದು, ಸ್ಫೋಟದ ವೇಳೆ ಸುಮಾರು 80 ಮಂದಿ ಅಲ್ಲಿ ಕೆಲಸ ಮಾಡುತ್ತಿದ್ದರು. 700 ಮೀಟರ್ ಆಳದಲ್ಲಿರುವ ಸುರಂಗದಲ್ಲಿ 18 ಮಂದಿ ಸಿಲುಕಿದ್ದಾರೆ ಎಂದು ಮಾಧ್ಯಮದ ವರದಿ ತಿಳಿಸಿದೆ.
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪಾಲ್ಗೊಳ್ಳಲು ನ್ಯೂಯಾರ್ಕ್‌ಗೆ ತೆರಳಲು ಸಿದ್ಧವಾಗುತ್ತಿದ್ದ ಇರಾನಿನ ಹೊಸ ಸುಧಾರಣಾವಾದಿ ಅಧ್ಯಕ್ಷ ಮಸೌದ್ ಪೆಜೆಶ್ಕಿಯನ್ ಅವರು, ಗಣಿಯಲ್ಲಿ ಸಿಲುಕಿರುವವರನ್ನು ರಕ್ಷಿಸಿ ಹೊರತರಲು ಹಾಗೂ ಅವರ ಕುಟುಂಬಗಳಿಗೆ ನೆರವಾಗಲು ಕ್ರಮ ಕೈಗೊಳ್ಳುವಂತೆ ಆದೇಶಿಸಿದ್ದೇನೆ. ಸ್ಫೋಟದ ಕುರಿತು ತನಿಖೆ ಶುರುವಾಗಿದೆ ಎಂದು ತಿಳಿಸಿದ್ದಾರೆ.