ವಿಜಯನಗರ ವೈಭವದ ಕಾಫಿಟೇಬಲ್‌ ಪುಸ್ತಕ ಲೋಕಾರ್ಪಣೆ

ಹೊಸದಿಗಂತ ವರದಿ ವಿಜಯನಗರ:
ವಿಕ್ರಮ ಬಳಗ ಹಾಗೂ ಹೊಸದಿಗಂತ ಡಿಜಿಟಲ್ ಆಶ್ರಯದಲ್ಲಿ ಹೊರ ತಂದಿರುವ ‘ವಿಜಯನಗರ ಸಾಮ್ರಾಜ್ಯದ’ ಸರ್ವತೋಮುಖ ಸಾಧನೆಗಳ ಪಕ್ಷಿನೋಟ ಬೀರುವ ಕಾಫಿ ಟೇಬಲ್ ಪುಸ್ತಕವನ್ನು ಪರಿಸರ, ಜೀವಶಾಸ್ತ್ರ, ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಅವರು ನಗರದ ಮಲ್ಲಿಗೆ ಹೋಟೆಲ್ ಸಭಾಂಗಣದಲ್ಲಿ ಭಾನುವಾರ ನಡೆದ ಸುಂದರ ಸಮಾರಂಭದಲ್ಲಿ ಲೋಕಾರ್ಪಣೆಗೊಳಿಸಿದರು.

ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ಸಹಯೋಗದಲ್ಲಿ ಈ ಅಪರೂಪದ ಪುಸ್ತಕ ಹೊರ ಬಂದಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಆನಂದ ಸಿಂಗ್ ಅವರು, ವಿಜಯ ನಗರ ಸಾಮ್ರಾಜ್ಯ ಕೇವಲ ಕರ್ನಾಟಕಕ್ಕೆ ಮಾತ್ರವಲ್ಲ, ವಿಶ್ವಕ್ಕೆ ಮಾದರಿ, ಮಾರ್ಗದರ್ಶನ ನೀಡುವ ಅತಿದೊಡ್ಡ ಹಿಂದೂ ಸಾಮ್ರಾಜ್ಯವಾಗಿದೆ. ಇಂದಿನ ತಂತ್ರಜ್ಞಾನಕ್ಕೆ ಸವಾಲು ಹಾಕಬಲ್ಲ ಇಲ್ಲಿಯ ಶಿಲ್ಪ, ಕೆತ್ತನೆಗಳು ನಮ್ಮನ್ನು ವಿಸ್ಮಯಗೊಳಿಸುತ್ತವೆ. ಇವುಗಳಿಗೆ ದೇವರು ಮಾತು ಕೊಟ್ಟರೆ ಅಮೋಘ ಇತಿಹಾಸ ನಮಗೆ ಸಿಗುತ್ತಿತ್ತೇನೋ. ಇಂತಹ ಸಾಮ್ರಾಜ್ಯವನ್ನು ಮೊಘಲರು ಯಾವ ಮಟ್ಟದಲ್ಲಿ ನಾಶಪಡಿಸಿದರು ಎಂದು ನೆನೆದರೆ ರಕ್ತ ಕುದಿಯುತ್ತದೆ ಎಂದರು.

ನಮಗೆ ಇತಿಹಾಸ ಸೃಷ್ಟಿಸಲು ಸಾಧ್ಯವಾಗುವುದೋ ಇಲ್ಲವೋ. ಆದರೆ ಹಂಪಿಯಂತಹ ಅದ್ಭುತ ಶಿಲ್ಪ ವೈಭವದ ಸೃಷ್ಟಿ ನಮ್ಮಿಂದ ಮಾತ್ರ ಸಾಧ್ಯವಿಲ್ಲ. ಹೀಗಾಗಿ ಈಗ ಉಳಿದಿರುವ ಹಂಪಿ ಮತ್ತಿತರ ದೇಶದ ಅಮೂಲ್ಯ ಇತಿಹಾಸ ಕುರುಹುಗಳನ್ನು ಮುಂದಿನ ಪೀಳಿಗೆಗಾಗಿ ಉಳಿಸುವ ಜವಾಬ್ದಾರಿ ನಮ್ಮ ಮೇಲಿದೆ . ಇಂತಹ ಕಾರ್ಯದಲ್ಲಿ ನಾನು ಸದಾ ಮುಂಚೂಣಿಯಲ್ಲಿರುವೆ ಎಂದರು.

ವಿಕ್ರಮ ಮತ್ತು ಹೊಸದಿಗಂತ ಡಿಜಿಟಲ್ ವಿಜಯನಗರ ಸಾಮ್ರಾಜ್ಯದ ಬಗ್ಗೆ ಸಂಗ್ರಹಯೋಗ್ಯ ಪುಸ್ತಕ ಹೊರತಂದಿರುವುದು ಶ್ಲಾಘನೀಯ ಎಂದು ಅಭಿಪ್ರಾಯಪಟ್ಟರು.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕ್ಷೇತ್ರ ಸಂಘಚಾಲಕರಾದ ವಿ.ನಾಗರಾಜ್ ಮುಖ್ಯ ಅತಿಥಿಗಳಾಗಿ ಮಾತನಾಡಿ, ಸ್ವಾತಂತ್ರ್ಯಪೂರ್ವ ಮತ್ತು ನಂತರ ನಾವು ಓದಿದ್ದು ನಮ್ಮನ್ನು ಆಳಿದವರ ಮತ್ತು ತುಳಿದವರ ಇತಿಹಾಸ ಮಾತ್ರ ಎನ್ನುವುದು ದುರಂತ. ಆದರೆ ವಿಶ್ವ ನಮ್ಮನ್ನು ಗುರುತಿಸಿದ್ದು ಇಲ್ಲಿಯ ಭವ್ಯ ಸಾಂಸ್ಕೃತಿಕ ವೈಭವದಿಂದ. ಇಡೀ ವಿಶ್ವದಲ್ಲಿ ಸಾಂಸ್ಕೃತಿಕ ನಿರಂತರತೆ ಇರುವ ಏಕೈಕ ಸಂಸ್ಕೃತಿ ಅಂದರೆ ಅದು ಭಾರತೀಯ, ಹಿಂದೂ ಸಂಸ್ಕೃತಿಯಾಗಿದೆ. ಅನೇಕ ಆಘಾತ, ಆಕ್ರಮಣಗಳ ಮಧ್ಯೆಯೂ ಈ ಸಂಸ್ಕೃತಿ ಐದು ಸಾವಿರಕ್ಕೂ ಅಧಿಕ ಕಾಲದಿಂದ ಅವಿಚ್ಛಿನ್ನವಾಗಿ ಸಾಗಿ ಬಂದಿದೆ. ಇದಕ್ಕೆ ಕಾರಣ ಜನರಿಗೆ ತಮ್ಮ ಧರ್ಮ, ಸಂಸ್ಕೃತಿ ಬಗ್ಗೆ ಇರುವ ಅಪಾರ ಪ್ರೀತಿ, ಗೌರವ. ಈ ಜನಕ್ಕೆ ನೇತೃತ್ವ ನೀಡಿ ಪರಂಪರೆ ಉಳಿಸಿದ ಕೀರ್ತಿ ವಿಜಯನಗರದಂತಹ ಸಾಮ್ರಾಜ್ಯಕ್ಕೆ ಸಲ್ಲಬೇಕು ಎಂದರು.

ಇದೇ ಸಂದರ್ಭದಲ್ಲಿ ಹೊಸದಿಗಂತ ಡಿಜಿಟಲ್ ನ ವಿಜಯನಗರದ ವೈಭವನ್ನು ಬಿಂಬಿಸುವ ಟ್ರೈಲರ್ ಅನ್ನು ವಿಜಯನಗರ ರಾಜವಂಶಸ್ಥರಾದ ಶ್ರೀಕೃಷ್ಣದೇವರಾಯರು ಬಿಡುಗಡೆ ಮಾಡಿ ಮಾತನಾಡಿ, ವಿಜಯ ನಗರ ಸಾಮ್ರಾಜ್ಯದ ಏಕೈಕ ಗುರಿ ಇದ್ದುದು ಹಿಂದೂ ಧರ್ಮ, ಸಂಸ್ಕೃತಿ ಉಳಿಸುವುದು. ಇದನ್ನು ನಿರಂತರ ಮಾಡಿಕೊಂಡು ಬಂದಿತ್ತು. ಇಂತಹ ಪರಿವಾರದಲ್ಲಿ ಜನ್ಮ ತಳೆದಿರುವುದಕ್ಕೆ ನನಗೆ ಹೆಮ್ಮೆ ಇದೆ. ವಿಜಯ ನಗರದ ಸಾಮ್ರಾಜ್ಯದ ಪ್ರೇರಣೆಯಿಂದ ನಮ್ಮ ಯುವ ಪೀಳಿಗೆ ಧರ್ಮ ರಕ್ಷಣೆಗೆ ಕಂಕಣಬದ್ದರಾಗಲಿ ಎಂದು ಆಶಿಸಿದರು.

ಹೊಸದಿಗಂತ ಡಿಜಿಟಲ್ ನ ಸಂಪಾದಕ ಚೈತನ್ಯ ಹೆಗಡೆ ಕಾರ್ಯಕ್ರಮ ನಿರ್ವಹಿಸಿದರು. ರೀನಾ ನಂದನ್ ಪ್ರಾರ್ಥಿಸಿದರು. ಪ್ರತಿಮಾ ಕುಲಕರ್ಣಿ ಹಾಡು ಹಾಡಿದರು.
ವಿಕ್ರಮ ಬಳಗದ ಸು. ನಾಗರಾಜ ವಂದಿಸಿದರು.

ಸಂಘದ ಪ್ರಮುಖರಾದ ಪ.ರಾ.ಕೃಷ್ಣಮೂರ್ತಿ, ವಿಕ್ರಮ ಬಳಗದ ನಾ. ನಾಗರಾಜ , ವ್ಯವಸ್ಥಾಪಕ ಸತೀಶ ಮತ್ತಿತರರು ಇದ್ದರು.
ಕುಮಾರಿ ಮಹಿತಿ ಅವರಿಂದ ವಂದೇ ಮಾತರಂ ಮೂಲಕ ಕಾರ್ಯಕ್ರಮ ಸಂಪನ್ನಗೊಂಡಿತು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!