ಹಗಲು ಕಾಲೇಜ್, ಸಂಜೆ ಸ್ಟಾಲ್: ಹುಡುಗನ ಕೈಯ ಮಸಾಲೆ, ತುಪ್ಪ ಬಾಯಲ್ಲಿ ನೀರೂರಿಸುತ್ತಪ್ಪ!

ಹೊಸದಿಗಂತ ಡಿಜಿಟಲ್ ಡೆಸ್ಕ್:
ನೀವು ಸಂಜೆಯ ಹೊತ್ತು ಮಂಗಳೂರು – ಮೂಡಬಿದ್ರಿ ರಾಷ್ಟ್ರೀಯ ಹೆದ್ದಾರಿಯ ಗುರುಪುರ ಕೈಕಂಬ ಮೂಲಕ ನೀವು ಸಂಚರಿಸುತ್ತಿದ್ದೀರಾದರೆ ಇಲ್ಲಿನ ಗಣೇಶಕಟ್ಟೆ ಬಳಿಯ ಸಾಯಿ ದೋಸೆ ಸೆಂಟರ್ ಕಣ್ಣಿಗೆ ಬಿದ್ದಿರಲೇ ಬೇಕು.
ಇದು ಬದುಕಿನ ಕಷ್ಟ ಎದುರಿಸಿ ಬದುಕುವೆ ಎಂಬ ಛಲವಿದ್ದರೆ ಗೆಲುವಿನ ದಾರಿ ಸಿಕ್ಕಿಯೇ ಸಿಗುತ್ತದೆ ಎಂಬುದಕ್ಕೆ ಉದಾಹರಣೆ. ಅಂದಹಾಗೆ ಈ ಸ್ಟಾಲ್ ನಡೆಸುತ್ತಿರುವುದು ಕಾಲೇಜು ವಿದ್ಯಾರ್ಥಿ ನಿತೇಶ್.
ಮಂಗಳೂರು ತಾಲೂಕಿನ ಮುತ್ತೂರು  ದೇವಿ ನಗರದ ಕುಟಿನ್ಹೋ ಕಂಪೌಂಡಿನಲ್ಲಿ ಬಾಡಿಗೆ ಮನೆಯಲ್ಲಿ ಕಡು ಬಡತನದಲ್ಲಿ ಬದುಕು ಸಾಗಿಸುತ್ತಿರುವ ಜಯ ಎಸ್. ಪೂಜಾರಿ, ಚೇತನಾ ದಂಪತಿಯ ಹಿರಿಯ ಪುತ್ರ ಈ ನಿತೇಶ್. ಮೂಡುಬಿದಿರೆಯ ಬನ್ನಡ್ಕ ವಿಶ್ವವಿದ್ಯಾಲಯ ಸರಕಾರಿ  ಕಾಲೇಜಿನಲ್ಲಿ ಬಿಕಾಂ ವ್ಯಾಸಂಗ ಮಾಡುತ್ತಿದ್ದಾರೆ. ಪುತ್ರಿ ವೆಯಿಟ್ ಲಿಫ್ಟರ್ ಆಗಿದ್ದು ಕ್ರೀಡಾ ಕೋಟಾದಡಿಯಲ್ಲಿ ಆಳ್ವಾಸ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ನಡೆಸುತ್ತಿದ್ದಾಳೆ. ಮಹಾರಾಷ್ಟ್ರದ  ಪುಣೆಯಲ್ಲಿದ್ದ ಪೂಜಾರಿ ಅವರ ಕುಟುಂಬ ಕೊರೋನಾ ಬಾಧಿಸಿದ ಬಳಿಕ ಕುಪ್ಪೆಪದವು ಸಮೀಪದ ಮುತ್ತೂರಿನ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದೆ.
ಕೊರೋನಾ ಬಾಧೆಯಿಂದ ಎರಡೂ ಕಾಲಿನ ಸ್ವಾಸ್ಥ್ಯ ಕಳೆದುಕೊಂಡ ಜಯ ಅವರು ದುಡಿಯಾಲಾಗದೆ  ಮನೆಯಲ್ಲಿದ್ದು, ನಿತೇಶ್ ಕುಟುಂಬಕ್ಕೆ ಆಸರೆಯಾಗಿದ್ದಾನೆ.
ಈತ ಕಳೆದ ಆರು ತಿಂಗಳ ಹಿಂದೆ ಗುರುಪುರ ಕೈಕಂಬದ ಗಣೇಶ ಕಟ್ಟೆಯ ಬಳಿ ದೋಸೆ ಮಾರಾಟದ ಪುಟ್ಟ ಸ್ಟಾಲೊಂದನ್ನು ಹಾಕಿಕೊಂಡಿದ್ದು, ಕಾಲೇಜು ಮುಗಿಸಿ  ಸಂಜೆ 5ರಿಂದ ರಾತ್ರಿ 9ರವರೆಗೆ ದೋಸೆ ಮಾರಾಟ ಮಾಡುತ್ತಿರುವ ಈತನಿಗೆ ಮನೆಯಲ್ಲಿ ತಂದೆ ಹಾಗೂ ಸ್ಟಾಲ್‌ನಲ್ಲಿ ತಾಯಿ ಚೇತನಾ ಜೊತೆಗಿದ್ದು ಸಹಕರಿಸುತ್ತಿದ್ದಾರೆ.
ಅಗ್ಗದಲ್ಲಿ ಸಿಗುತ್ತದೆ ರುಚಿಕರ ದೋಸೆ!
‘ಸಾಯಿ’ ಸ್ಟಾಲ್‌ನಲ್ಲಿ ಅಗ್ಗದ ಬೆಲೆಗೆ ಸ್ವಾದಿಷ್ಟಕರ ಮಸಾಲ ದೋಸಾ (೨೦ ರೂ.), ಈರುಳ್ಳಿ ಉತ್ತಪ್ಪ (೩೦ ರೂ.), ಸೆಟ್ ದೋಸೆ (೩೦ ರೂ.) ಮತ್ತು ಲೋನಿ ಸ್ಪಂಜ್ ದೋಸೆ (೩೦ ರೂ.) ಲಭ್ಯವಿದೆ. ಸಂಜೆಯಾಗುತ್ತಲೇ ದಿನಗೂಲಿ ಕಾರ್ಮಿಕರು, ಕಚೇರಿಗೆ ಹೋದವರು ಈತನ ದೋಸೆ ರುಚಿ ಸವಿಯಲು ಸಾಲಾಗಿ ನಿಲ್ಲುತ್ತಾರೆ; ಮನೆಗೆ ಪಾರ್ಸೆಲ್ ಕೂಡಾ ಕೊಂಡೊಯ್ಯುತ್ತಾರೆ.
ಬರುವ ಆದಾಯದಲ್ಲಿ ನಾಲ್ವರ ಬದುಕಿನ  ರಥ  ಎಳೆಯುತ್ತಿರುವ ನಿತೇಶ್ ಸ್ವ-ಉದ್ಯೋಗ ಮಾಡಬಯಸುವ ಮತ್ತು ಕೆಲಸ ಇಲ್ಲವೆಂದು ಅಡ್ಡಾಡುವ ಯುವಕರಿಗೆ ಪ್ರೇರಣೆಯಾಗಿದ್ದಾರೆ. ಈ ದಾರಿಯಲ್ಲಿ ಸಂಜೆ ವೇಳೆ ನೀವು  ಬಂದರೆ ಒಮ್ಮೆ ನಿತೇಶ್‌ನ ದೋಸೆ ರುಚಿ ನೋಡಲು ಮರೆಯಬೇಡಿ!

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!