ಸಿದ್ಧರಾಮಯ್ಯ ಬಹಿರಂಗ ಚರ್ಚೆಗೆ ಬರಲಿ, ನಾವು ದಾಖಲೆಗಳೊಂದಿಗೆ ಬರುತ್ತೇವೆ: ಬಿಜೆಪಿ ವಕ್ತಾರ ಮಹೇಶ್ ಸವಾಲು

ಹೊಸದಿಗಂತ ವರದಿ, ಮೈಸೂರು 
ಜನರಿಂದ ಈಗಾಗಲೇ ತಿರಸ್ಕೃತಗೊಂಡಿರುವ ವ್ಯಕ್ತಿಯೊಂದಿಗೆ ನಮ್ಮ ಸಂಸದರು ಬಹಿರಂಗ ಚರ್ಚೆ ನಡೆಸುವುದಿಲ್ಲ. ಚರ್ಚೆಗೆ ಮಾಜಿ ಮುಖ್ಯಮಂತ್ರಿಯಾದ ವಿಪಕ್ಷ ನಾಯಕ ಸಿದ್ದರಾಮಯ್ಯನವರೇ ಬರಲಿ, ನಾವು ಎಲ್ಲಾ ದಾಖಲೆಗಳೊಂದಿಗೆ ಬರುತ್ತೇವೆ. ಪುರಭವನದ ಮುಂದೆಯೇ ಬಹಿರಂಗ ಚರ್ಚೆ ನಡೆಯಲಿ ಎಂದು ಬಿಜೆಪಿ ರಾಜ್ಯ ಮುಖ್ಯ ವಕ್ತಾರ ಎಂ.ಜಿ.ಮಹೇಶ್ ಹೇಳಿದರು.
ಭಾನುವಾರ ನಗರದ ಚಾಮರಾಜಪುರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರಿನ ಅಭಿವೃದ್ಧಿ ಕುರಿತು ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರನ್ನು ಬಹಿರಂಗ ಚರ್ಚೆಗೆ ಕರೆಯುತ್ತಿರುವ ವ್ಯಕ್ತಿಯನ್ನು ಈಗಾಗಲೇ ಜನರು ಚುನಾವಣೆಗಳಲ್ಲಿ ತಿರಸ್ಕರಿಸಿದ್ದಾರೆ. ಅವರು ಕೆಪಿಸಿಸಿ ವಕ್ತಾರ ಆಗಿದ್ದಾರಷ್ಟೇ, ಆದರೆ ಸಂಸದ ಪ್ರತಾಪ್ ಸಿಂಹ ಅವರು ಜನರಿಂದ ಎರಡು ಬಾರಿ ಆಯ್ಕೆಯಾದ ಸಂಸದರು. ಅವರೊಂದಿಗೆ ಚರ್ಚೆ ನಡೆಸುವುದಕ್ಕೆ ಜನರಿಂದ ಆಯ್ಕೆಯಾದ ಜನಪ್ರತಿನಿಧಿಯೇ ಬರಬೇಕೆ ವಿನಹ, ಜನರಿಂದ ತಿರಸ್ಕೃತಗೊಂಡವರಲ್ಲ. ಹಾಗಾಗಿಯೇ ಸಂಸದ ಪ್ರತಾಪ್ ಸಿಂಹ ಅವರು, ಬಹಿರಂಗ ಚರ್ಚೆಗೆ ಬರುವಂತೆ ಜನರಿಂದ ಆಯ್ಕೆಯಾಗಿರುವ ಸಿದ್ದರಾಮಯ್ಯ ಹಾಗೂ ಜನರಿಂದ ಆಯ್ಕೆಯಾಗಿದ್ದಂತ ಮಾಜಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪರನ್ನು ಆಹ್ವಾನಿಸುತ್ತಿದ್ದಾರೆ. ಆದರೆ ಅವರು ಚರ್ಚೆಗೆ ಬಾರದೆ, ಜನರಿಂದ ತಿರಸ್ಕೃತಗೊಂಡಿರುವ ವ್ಯಕ್ತಿಯನ್ನು ಚರ್ಚೆಗೆ ಕಳುಹಿಸುತ್ತಿದ್ದಾರೆ. ಅಂತಹ ವ್ಯಕ್ತಿಯೊಂದಿಗೆ ಚರ್ಚೆ ಮಾಡಬೇಕೆ ಎಂದು ಪ್ರಶ್ನಿಸಿದರು.
ರಾಜ್ಯ ಹಾಗೂ ಕೇಂದ್ರದ ಬಿಜೆಪಿ ಸರ್ಕಾರ ಮೈಸೂರಿನಲ್ಲಿ ಏನೇನು ಅಭಿವೃದ್ಧಿ ಕೆಲಸಗಳನ್ನು ಮಾಡಿದೆ, ಮಾಡುತ್ತಿದೆ ಎಂದು ಜನರ ಕಣ್ಣಿಗೆ ಕಾಣುತ್ತಿದೆ. ಅಭಿವೃದ್ಧಿ ಕೆಲಸಗಳ ಕುರಿತು ದಾಖಲೆಗಳೂ ಇವೆ. ಅವುಗಳನ್ನು ನಾವು ತೆಗೆದುಕೊಂಡು ಚರ್ಚೆಗೆ ಬರುತ್ತೇವೆ. ಸಿದ್ದರಾಮಯ್ಯನವರು ಏನೇನು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ ಎಂದು ದಾಖಲೆಯೊಂದಿಗೆ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದರು.
ಚರ್ಚೆ, ಸಂವಾದದ ವಿಷಯಗಳನ್ನು ಬಿಜೆಪಿ ವಿರುದ್ಧ ಎತ್ತುವ ಮೂಲಕ ಕಾಂಗ್ರೆಸ್‌ನವರು ಜನರಲ್ಲಿ ನಕರಾತ್ಮಕ ಭಾವನೆಯನ್ನು ಮೂಡಿಸುವ ಪ್ರಯತ್ನವನ್ನು ನಡೆಸುತ್ತಿದ್ದಾರೆ. ಆ ಮೂಲಕ ಮೈಸೂರಿನ ಅಭಿವೃದ್ಧಿಯಲ್ಲಿ ತಮ್ಮ ಪಾತ್ರವಿದೆ ಎಂದು ತೋರಿಸಿಕೊಳ್ಳುವ ದೊಡ್ಡ ಹುನ್ನಾರವನ್ನು ನಡೆಸುತ್ತಿದ್ದಾರೆ ಎಂದು ಕಿಡಿಕಾರಿದರು.
ಈ ಹಿಂದೆ ಆಡಳಿತ ನಡೆಸಿದ ಯಾವ ಸರ್ಕಾರಗಳು ಮಾಡದಷ್ಟು ಸಾಲವನ್ನು ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ಮಾಡಿದ್ದಾರೆ. ಕೇವಲ 5 ವರ್ಷಗಳ ಅವಧಿಯಲ್ಲಿ 3 ಲಕ್ಷ ಕೋಟಿ ರೂ ಸಾಲ ಮಾಡಿ, ಅದರ ಭಾರವನ್ನು ರಾಜ್ಯದ ಜನರ ಮೇಲೆ ಹೊರೆಸಿ ಹೋಗಿದ್ದಾರೆ. ಅಲ್ಲದೇ ಅವರ ಆಡಳಿತದಲ್ಲಿ ಏನೇನು ಅಭಿವೃದ್ಧಿ ಕೆಲಸಗಳನ್ನು ಮಾಡಿದರು ಎಂಬುದರ ಬಗ್ಗೆ ಬಹಿರಂಗವಾಗಿ ಚರ್ಚೆ ನಡೆಸಲು ಸದಾ ಸಿದ್ಧರಿದ್ದೇವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ರಾಜ್ಯ ಎಸ್ಟಿ ಮೋರ್ಚಾದ ಉಪಾಧ್ಯಕ್ಷ ಮಲ್ಲೇಶ್, ಕೋಶಾಧ್ಯಕ್ಷ ಶಿವಕುಮಾರ್, ನಗರಾಧ್ಯಕ್ಷ ಲಕ್ಷö್ಮಣ್, ಪ್ರಧಾನ ಕಾರ್ಯದರ್ಶಿಗಳಾದ ಎನ್.ಮಹೇಶ್, ಕೃಷ್ಣನಾಯಕ, ಮಾಧ್ಯಮ ಸಂಚಾಲಕ ಮಹೇಶ್ ರಾಜೇ ಅರಸ್ ಮತ್ತಿತರರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!