ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು, ಭಾರತದ ಉಕ್ಕಿನ ಮಹಿಳೆ, ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿಯವರ 39 ನೇ ಪುಣ್ಯತಿಥಿ. ರಾಷ್ಟ್ರ ರಾಜಧಾನಿಯ ಶಕ್ತಿ ಸ್ಥಳಕ್ಕೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭೇಟಿ ಕೊಟ್ಟು, ಇಂದಿರಾ ಗಾಂಧಿ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿದರು.
ಶಕ್ತಿ ಸ್ಥಳಕ್ಕೆ ಭೇಟಿಗೂ ಮುನ್ನ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, “ನನ್ನ ಶಕ್ತಿ, ನನ್ನ ಅಜ್ಜಿ! ಭಾರತಕ್ಕಾಗಿ ನೀವು ಎಲ್ಲವನ್ನೂ ತ್ಯಾಗ ಮಾಡಿದ್ದೀರಿ. ಈ ದೇಶವನ್ನು ನಾನು ಯಾವಾಗಲೂ ರಕ್ಷಿಸುತ್ತೇನೆ. ನಿಮ್ಮ ನೆನಪುಗಳು ಯಾವಾಗಲೂ ನನ್ನೊಂದಿಗೆ, ನನ್ನ ಹೃದಯದಲ್ಲಿರುತ್ತವೆ” ಎಂದು ಪೋಸ್ಟ್ ಮಾಡಿದ್ದಾರೆ.
“ಸಾಟಿಯಿಲ್ಲದ ಧೈರ್ಯ ಮತ್ತು ಹೋರಾಟದ ಸಂಕೇತ ಮತ್ತು ಪ್ರಜಾಸತ್ತಾತ್ಮಕ ಸಮಾಜವಾದದ ಪ್ರವರ್ತಕರಾಗಿದ್ದ ನನ್ನ ಅಜ್ಜಿ ದಿವಂಗತ ಇಂದಿರಾಗಾಂಧಿ ಅವರ ಪುಣ್ಯತಿಥಿಯಂದು ಅವರಿಗೆ ನಮನಗಳು” ಎಂದು ವರುಣ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ಇಂದಿರಾ ಗಾಂಧಿಯವರ ಪುಣ್ಯತಿಥಿಯಂದು ಶ್ರದ್ಧಾಂಜಲಿ ಸಂದೇಶ ಬರೆದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ʻಭಾರತದ ಮೊದಲ ಮಹಿಳಾ ಪ್ರಧಾನಿ ಮತ್ತು ನಮ್ಮ ಐಕಾನ್ ಇಂದಿರಾಗಾಂಧಿ ಅವರ ದೃಢವಾದ ಇಚ್ಛಾಶಕ್ತಿ, ದಕ್ಷ ನಾಯಕತ್ವ, ವಿಶಿಷ್ಟ ಕಾರ್ಯಶೈಲಿ ಮತ್ತು ದೂರದೃಷ್ಟಿಯಿಂದ, ಬಲಿಷ್ಠ ಮತ್ತು ಪ್ರಗತಿಪರ ಭಾರತವನ್ನು ನಿರ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ” ಟ್ವೀಟ್ ಮಾಡಿದ್ದಾರೆ.
ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು ಭಾರತದ ಮಾಜಿ ಪ್ರಧಾನಿ ಅವರ ಪುಣ್ಯತಿಥಿಯಂದು ಅವರೊಂದಿಗಿನ ಮೊದಲ ಭೇಟಿಯನ್ನು ನೆನಪಿಸಿಕೊಂಡರು. “ಶ್ರೀಮತಿ ಇಂದಿರಾ ಗಾಂಧಿಯವರನ್ನು ಅವರ ಹುತಾತ್ಮ ದಿನದಂದು ಸ್ಮರಿಸುತ್ತಿದ್ದೇನೆ. 1975 ರಲ್ಲಿ ದೆಹಲಿ ವಿಶ್ವವಿದ್ಯಾನಿಲಯದಿಂದ ನಮ್ಮ ಹತ್ತಾರು ಜನರೊಂದಿಗೆ ಪ್ರಧಾನಿ ಅವರ ಮನೆಯಲ್ಲಿ ಚರ್ಚಿಸಿದಾಗ ವಿದ್ಯಾರ್ಥಿ ನಾಯಕನಾಗಿ ಅವರನ್ನು ಮೊದಲು ಭೇಟಿಯಾದೆ” ಎಂದು ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.