ಬದ್ಧತೆ- ದಕ್ಷತೆಯಿಂದ ಕಾರ್ಯನಿರ್ವಹಿಸುವ ನೌಕರರಿಗೆ ಸರ್ಕಾರದಿಂದ ಎಲ್ಲಾ ರೀತಿಯ ಸೌಲಭ್ಯ: ಸಿಎಂ ಬೊಮ್ಮಾಯಿ

ಹೊಸದಿಗಂತ ವರದಿ, ಶಿವಮೊಗ್ಗ
ದಕ್ಷತೆ, ಪ್ರಾಮಾಣಿಕತೆ ಹಾಗೂ ಬದ್ಧತೆಯಿಂದ ಜನಪರ ಕೆಲಸಗಳನ್ನು ಸರ್ಕಾರಿ ನೌಕರರು ಸಕಾಲಿಕವಾಗಿ ಮಾಡಿದರೆ ಸೌಲಭ್ಯಗಳನ್ನು ಕೊಡಲು ಸರ್ಕಾರ ಯಾವಾಗಲೂ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಜಿಲ್ಲಾ ಶಾಖೆ ವತಿಯಿಂದ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಗುರುವಾರ ಆಯೋಜಿಸಿದ್ದ ರಾಜ್ಯ ಸರ್ಕಾರಿ ನೌಕರರ ದಿನಾಚರಣೆ ಹಾಗೂ ಸರ್ವೋತ್ತಮ ಸೇವಾ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಸರ್ಕಾರಿ ನೌಕರರ ಆಡಳಿತ ಯಂತ್ರದ ಬಗ್ಗೆ ಸ್ಪಷ್ಟತೆ ಹೊಂದಿರಬೇಕು. ಜನಪರವಾಗಿ ಕೆಲಸ ಮಾಡಲು ನೌಕರರು ಅಧಿಕಾರ ಬಳಕೆ ಮಾಡಿಕೊಳ್ಳಬೇಕು. ಸ್ವಾರ್ಥಕ್ಕಾಗಿ, ಸ್ವಂತಕ್ಕಾಗಿ ಯಾವುದೇ ಕಾರಣಕ್ಕೂ ಅಧಿಕಾರ ದುರ್ಬಳಕೆ ಮಾಡಿಕೊಳ್ಳಬಾರದೆಂದು ಕರೆ ನೀಡಿದ ಅವರು, ಕಾನೂನು ಬದ್ಧವಾಗಿ ಕೆಲಸ ಮಾಡುವ ಮೂಲಕ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ನ್ಯಾಯ ಕೊಡಬೇಕೆಂದು ಹೇಳಿದರು.
ಯಾವುದೇ ಕಡತಗಳು ಬಂದಾಗ ಚಿಂತನೆ ಮಾಡಿ ನಿರ್ಣಯ ಕೈಗೊಳ್ಳಬೇಕಿದೆ. ಅಂತಹ ನಿರ್ಣಯಗಳು ಜನಸಾಮಾನ್ಯರಿಗೆ ಅನುಕೂಲವಾಗುವಂತಿರಬೇಕು. ಸರ್ಕಾರದ ಕಾರ್ಯದರ್ಶಿಗಳು ಕೇವಲ ಇನಿಶಿಯಲ್ ಹಾಕಲು ಮಾತ್ರ ಇರುವವರಲ್ಲ ಎಂಬುದನ್ನು ಈಗಾಗಲೇ ತಿಳಿಸಲಾಗಿದೆ. ಗುಮಾಸ್ತರು ಸಿದ್ಧಪಡಿಸಿಕೊಂಡು ಬಂದ ಕಡತಗಳಿಗೆ ಕಣ್ಣುಮುಚ್ಚಿ ಸಹಿ ಹಾಕದೆ ಸೂಕ್ಷ್ಮವಾಗಿ ಕಡತಗಳನ್ನು ಪರಿಶೀಲಿಸಿ ಅಗತ್ಯವಿದ್ದಾಗ ಜನರಿಗೆ ಅನುಕೂಲವಾಗುವಂತೆ ತಿದ್ದುಪಡಿ ಮಾಡಿ ಕಳಿಸುವಂತೆ ಸೂಚಿಸಲಾಗಿದೆ ಎಂದರು.
ತಂತ್ರಜ್ಞಾನವನ್ನು ಸಮರ್ಥವಾಗಿ ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಪ್ರತಿಯೊಬ್ಬ ನೌಕರನೂ ಕೂಡ ಕಂಪ್ಯೂಟರ್ ಶಿಕ್ಷಣ ಪಡೆಯಬೇಕು. ಈಗಾಗಲೇ ಗ್ರಾಮ ಪಂಚಾಯತಿಯಿಂದ ವಿಧಾನಸೌಧದ ವರೆಗೆ ತಂತ್ರಜ್ಞಾನ ಬಳಕೆಯಾಗುತ್ತಿದೆ. ತಂತ್ರಜ್ಞಾನ ಹೆಚ್ಚು ಬಳಕೆ ಮಾಡಿದಾಗ ನಿಗದಿ ಸಮಯದಲ್ಲಿ ಕೆಲಸ ಮಾಡಬಹುದಾಗಿದೆ ಎಂದರು.
ಜನರ ಬಗ್ಗೆ ಸಹಾನುಭೂತಿಯಿಂದ ಕೆಲಸ ಮಾಡಬೇಕು. ಕಡತಗಳನ್ನು ಅಧ್ಯಯನ ಮಾಡಬೇಕು. ಕೇವಲ ಖುರ್ಚಿ ಬಿಸಿ ಮಾಡುವ ಸಲುವಾಗಿ ಕಚೇರಿಯಲ್ಲಿ ಕುಳಿತರೆ ಯಾವುದೇ ಕೆಲಸಗಳು ಆಗುವುದಿಲ್ಲ. ಸ್ಥಿತ ಪ್ರಜ್ಞೆ, ಸಮಯ ಪ್ರಜ್ಞೆ ಜತೆಗೆ ಪ್ರಮಾಣಿಕತೆ ಸರ್ಕಾರಕ್ಕೆ ಒಳ್ಳೆಯ ಹೆಸರು ತುರುವುದರ ಜತೆಗೆ ನಿಮ್ಮನ್ನು ಕೂಡ ಸರ್ಕಾರ ಹಾಗೂ ಜನ ಗುರುತಿಸುತ್ತಾರೆ ಎಂದರು.
ರಾಜ್ಯದಲ್ಲಿ 2 ಲಕ್ಷ ವಿವಿಧ ಹುದ್ದೆಗಳು ಖಾಲಿ ಇವೆ. ಆದರೂ ಇರುವ ನೌಕರರೇ ಸಕಾಲಿಕವಾಗಿ ಕೆಲಸ ಮಾಡುತ್ತಿರುವುದರಿಂದ ಯಾವ ಕೆಲಸಗಳು ಬಾಕಿ ಉಳಿಯುತ್ತಿಲ್ಲ. ಇದನ್ನು ಮನಗಂಡು ಈಗಾಗಲೇ ಎರಡು ಬಾರಿ ಡಿಎ ಹೆಚ್ಚಳ ಮಾಡಲಾಗಿದೆ. ಕೇಂದ್ರಕ್ಕೆ ಸರಿಸಮಾನವಾಗಿ ವೇತನ ನೀಡಲು ಆಯೋಗ ರಚನೆ ಮಾಡಲಾಗಿದೆ ಎಂದು ಹೇಳಿದರು.
ವೇದಿಕೆಯಲ್ಲಿ ಸಚಿವರಾದ ಭೈರತಿ ಬಸವರಾಜ್, ಡಾ. ಅಶ್ವತ್ಥನಾರಾಯಣ, ಶಾಸಕರಾದ ಕೆ.ಬಿ. ಅಶೋಕ್‌ನಾಯ್ಕ, ಲಕ್ಷ್ಮಣ ಸವದಿ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸಿ.ಎಸ್. ಷಡಾಕ್ಷರಿ ಮತ್ತಿತರರು ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!