ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಕೇಂದ್ರ ಸರ್ಕಾರ ಜಾರಿ ಗೊಳಿಸಿರುವ ನೂತನ ಶಿಕ್ಷಣ ನೀತಿ-2020 ವಿರುದ್ಧ ರಾಹುಲ್ ಗಾಂಧಿ ಅಸಮಾಧಾನ ವ್ಯಕ್ತಪಡಿಸಿದ್ದು, ಶಿಕ್ಷಕ ಹಾಗೂ ವಿದ್ಯಾರ್ಥಿ ಸಮುದಾಯದಗಳೊಂದಿಗೆ ಚರ್ಚಿಸದೆ ನೂತನ ಶಿಕ್ಷಣ ನೀತಿ ಜಾರಿಗೆ ತಂದಿದ್ದಾರೆ ಎಂದು ಆರೋಪಿಸಿದರು.
ತಮಿಳುನಾಡಿನ ತಿರುನೆಲ್ವೇಲಿಯ ಸೇಂಟ್ ಝೇವಿಯರ್ಸ್ ಕಾಲೇಜಿನಲ್ಲಿ ಉಪನ್ಯಾಸಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಈ ಹೊಸ ಶಿಕ್ಷಣ ನೀತಿಯ ಮೂಲಕ ದೇಶದಲ್ಲಿ ನಿರ್ದಿಷ್ಟ ಧರ್ಮದ ನೀತಿಗಳನ್ನು ಹೇರಲು ಕೇಂದ್ರ ಸರ್ಕಾರ ಮುಂದಾಗಿದೆ. ಶಿಕ್ಷಣ ವ್ಯವಸ್ಥೆಯು ವಿದ್ಯಾರ್ಥಿಗಳಿಗಾಗಿ ರೂಪಿತವಾಗಿರಬೇಕು ಹಾಗೂ ಅದನ್ನು ಶಿಕ್ಷಕರು ಮುನ್ನಡೆಸಬೇಕು. ಯಾವುದೇ ಹೊಸ ಶಿಕ್ಷಣ ನೀತಿಯನ್ನು ಜಾರಿಗೊಳಿಸಬೇಕಾದರೆ ಅದು ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಚರ್ಚೆಯಿಂದ ಒಮ್ಮತವಾಗಿ ಮೂಡಿಬರಬೇಕು. ಆದರೆ ಹೀಗೆ ಆಗದಿರುವುದು ನಮ್ಮ ದುರಾದೃಷ್ಟ ಎಂದು ರಾಹುಲ್ ಕಿಡಿಕಾರಿದರು.
ಹೊಸ ಶಿಕ್ಷಣ ನೀತಿಯ ಹೆಸರಲ್ಲಿ ಕೇಂದ್ರ ಕೋಮುವಾದ ಸೃಷ್ಟಿಸುತ್ತಿದೆ ಎಂದು ಆರೋಪಿಸಿದ ರಾಹುಲ್, ತಮ್ಮ ಪಕ್ಷದ ಸರ್ಕಾರ ತಮಿಳುನಾಡಿನಲ್ಲಿ ಅಧಿಕಾರಕ್ಕೆ ಬಂದಲ್ಲಿ ಹೆಚ್ಚು ಸಂಖ್ಯೆಯ ಶೈಕ್ಷಣಿಕ ಸ್ಕಾಲರಶಿಪ್ಗಳನ್ನು ನೀಡಲಾಗುವುದು ಎಂದು ಭರವಸೆ ನೀಡಿದರು.