ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಂಗ್ರೆಸ್ ಶಾಸಕ ಶಿವಶಂಕರ್ ರೆಡ್ಡಿ ವಿರುದ್ಧ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ವಿವೇಕ್ ರೆಡ್ಡಿ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.
ಇತ್ತೀಚೆಗೆ ನಡೆದ ಸ್ಟಿಂಗ್ ಆಪರೇಷನ್‌ನಲ್ಲಿ ಗೌರಿಬಿದನೂರಿನ ಶಾಸಕ ಶಿವಶಂಕರ್ ರೆಡ್ಡಿ ಬಹುರಾಷ್ಟ್ರೀಯ ಕೇಬಲ್ ಕಂಪನಿಯ ಪ್ರತಿನಿಧಿಗಳಿಗೆ ಒಎಫ್‌ಸಿ ಕೇಬಲ್ ಹಾಕು ಒಂದು ಕಿ.ಮೀಗೆ ಎರಡು ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಲಾಗಿದೆ.
ತಮ್ಮ ಸಹಾಯಕ ಈರಣ್ಣನಿಗೆ ಹಣ ಕೊಡಲು ಹೇಳಿದ್ದು, ಅದೇ ಕೊಠಡಿಯಲ್ಲಿ ಹಣ ಪಡೆದುಕೊಂಡಿರುವುದು ಪ್ರಸಾರವಾಗಿದೆ. ಸ್ಟಿಂಗ್ ಆಪರೇಷನ್‍ನಲ್ಲಿ ಕಾಂಗ್ರೆಸ್‍ನ ಹಲವಾರು ಎಂಎಲ್‍ಎಗಳ ಭ್ರಷ್ಟಾಚಾರ ಪ್ರಕರಣಗಳು ಪತ್ತೆಯಾಗಿವೆ. ಸ್ಟಿಂಗ್ ಆಪರೇಷನ್ ಕುರಿತು ತನಿಖೆ ಆಗಬೇಕು; ಎಫ್‍ಐಆರ್ ದಾಖಲಿಸಿ ಆಪಾದಿತನನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.
ಎಸ್ಪಿಗೆ ದೂರು ನೀಡಿದ್ದೇವೆ, ಕರ್ನಾಟಕವು ಬಹುದೊಡ್ಡ ಹೆಮ್ಮೆಯ ತಾಣ, ಇಲ್ಲಿ ಸುಲಭವಾಗಿ ವ್ಯಾಪಾರ ವಹಿವಾಟು ಮಾಡಬಹುದು. ಆದರೆ, ಹೀಗಾಗುತ್ತಿರುವುದು ದುರದೃಷ್ಟಕರ. ಅಂತರರಾಷ್ಟ್ರೀಯ ಕಂಪೆನಿಗೆ ಇಲ್ಲಿ ಬರಲು ತಿಳಿಸಿ ಈ ರೀತಿ ಹಣ ಕೇಳುತ್ತಿರುವುದು ಸರಿಯಲ್ಲ ಎಂದರು.
ಶಾಸಕರ ವಿರುದ್ಧ ಎಫ್‍ಐಆರ್ ದಾಖಲಿಸಿ ಬಂಧಿಸಿ ಕಾನೂನು ಕ್ರಮಕೈಗೊಳ್ಳಬೇಕು. ಮಾಡಾಳ್ ವಿರೂಪಾಕ್ಷಪ್ಪ ಅವರಿಗೆ ಅನ್ವಯವಾಗುವ ಕಾನೂನು ಇವರಿಗೂ ಅನ್ವಯ ಆಗಲಿ ಎಂದು ತಿಳಿಸಿದರು. ಕಾನೂನು ಪ್ರಕೋಷ್ಠದ ರಾಜ್ಯ ಸಂಚಾಲಕ ಯೋಗೇಂದ್ರ ಹೂಡಾಘಟ್ಟ, ರಾಜ್ಯ ಪ್ಯಾನಲಿಸ್ಟ್ ಮಧು ಎನ್ ರಾವ್, ಜಿಲ್ಲಾ ವಕ್ತಾರ ಡಾ|| ರಾಘವೇಂದ್ರ ರಾವ್ ಮತ್ತು ಪಕ್ಷದ ಮುಖಂಡರು ಉಪಸ್ಥಿತರಿದ್ದರು.