ಹೊಸದಿಗಂತ ಡಿಜಿಟಲ್ ಡೆಸ್ಕ್:
ಟಾಟಾ ಗ್ರೂಪ್ಗೆ ಸೇರಿದ ಏರ್ ಇಂಡಿಯಾ ಮತ್ತು ವಿಸ್ತಾರ ಏರ್ಲೈನ್ಸ್ ಸಂಸ್ಥೆಗಳು ವಿಲೀನಗೊಂಡಿವೆ. ವಿಸ್ತಾರಾ ಬ್ರ್ಯಾಂಡ್ ಇವತ್ತಿಗೆ ಮುಗಿಯುತ್ತದೆ. ವಿಸ್ತಾರಾದ ವಿಮಾನಗಳೆಲ್ಲವೂ ನವೆಂಬರ್ 12ರಿಂದ ಏರ್ ಇಂಡಿಯಾ ಬ್ರ್ಯಾಂಡ್ ಅಡಿ ಕಾರ್ಯಾಚರಿಸುವುದನ್ನು ಮುಂದುವರಿಸಲಿವೆ. ಟಾಟಾ ಗ್ರೂಪ್ ಸಂಸ್ಥೆ ತನ್ನ ಎಲ್ಲಾ ವೈಮಾನಿಕ ಸೇವೆ ಸಂಸ್ಥೆಗಳನ್ನು ಏರ್ ಇಂಡಿಯಾ ಬ್ರ್ಯಾಂಡ್ ಅಡಿಯಲ್ಲಿ ಸೇರಿಸುವ ಪ್ರಯತ್ನದ ಭಾಗವಾಗಿ ವಿಸ್ತಾರ ಮತ್ತು ಏರ್ ಇಂಡಿಯಾ ವಿಲೀನ ನಡೆದಿದೆ.
2015ರಲ್ಲಿ ಟಾಟಾ ಗ್ರೂಪ್ ಮತ್ತು ಸಿಂಗಾಪುರ್ ಏರ್ಲೈನ್ಸ್ ಸಂಸ್ಥೆಗಳು ಜಂಟಿಯಾಗಿ ವಿಸ್ತಾರ ಏರ್ಲೈನ್ಸ್ ಅನ್ನು ಆರಂಭಿಸಿದ್ದವು. ಇದರಲ್ಲಿ ಸಿಂಗಾಪುರ್ ಏರ್ಲೈನ್ಸ್ ಪಾಲು ಶೇ. 49 ಇತ್ತು. ಈಗ ಏರ್ ಇಂಡಿಯಾ ಜೊತೆ ವಿಸ್ತಾರ ವಿಲೀನಗೊಂಡ ಬಳಿಕ ಸಿಂಗಾಪುರ್ ಏರ್ಲೈನ್ಸ್ ಸಂಸ್ಥೆ ಏರ್ ಇಂಡಿಯಾದಲ್ಲಿ ಶೇ. 25.1ರಷ್ಟು ಪಾಲು ಹೊಂದಿರಲಿದೆ. ಹೊಸ ಏರ್ ಇಂಡಿಯಾದಲ್ಲಿ ಸಿಂಗಾಪುರ್ ಏರ್ಲೈನ್ಸ್ 276 ಮಿಲಿಯನ್ ಡಾಲರ್ ಹೂಡಿಕೆ ಕೂಡ ಮಾಡಲಿದೆ.
ಸರಿಯಾಗಿ ಒಂದು ವರ್ಷದ ಹಿಂದೆ, 2023ರ ನವೆಂಬರ್ನಲ್ಲಿ ವಿಸ್ತಾರ ಮತ್ತು ಏರ್ ಇಂಡಿಯಾ ವಿಲೀನವನ್ನು ಪ್ರಕಟಿಸಲಾಯಿತು. ಇದೀಗ ಎಲ್ಲಾ ಪ್ರಾಧಿಕಾರಗಳ ಅನುಮೋದನೆ ಸಿಕ್ಕಾಗಿದೆ. ನವೆಂಬರ್ 11, ಅಂದರೆ ಇವತ್ತಿಗೆ ವಿಸ್ತಾರ ಬ್ರ್ಯಾಂಡ್ನಲ್ಲಿ ವಿಮಾನ ಸೇವೆ ಅಂತ್ಯಗೊಳ್ಳುತ್ತದೆ. ನವೆಂಬರ್ 12 ಹಾಗೂ ನಂತರ ದಿನಾಂಕಕ್ಕೆ ವಿಸ್ತಾರ ಟಿಕೆಟ್ ಬುಕ್ ಮಾಡಿದವರು ಏರ್ ಇಂಡಿಯಾ ಬ್ರ್ಯಾಂಡ್ನ ವಿಮಾನದಲ್ಲಿ ಪ್ರಯಾಣ ಮಾಡಬಹುದು.
ವಿಸ್ತಾರಾ ಏರ್ಲೈನ್ಸ್ನಲ್ಲಿರುವ ವಿಮಾನಗಳು ಮಾಮೂಲಿಯ ರೀತಿಯಲ್ಲೇ ಕಾರ್ಯಾಚರಿಸಲಿವೆ. ಆದರೆ, ವಿಸ್ತಾರಾ ಹೆಸರು ಬದಲು ಏರ್ ಇಂಡಿಯಾ ಬ್ರ್ಯಾಂಡಿಂಗ್ ಹೊಂದಿರಲಿವೆ. ಏರ್ ಇಂಡಿಯಾದಿಂದ ಇದನ್ನು ಪ್ರತ್ಯೇಕವಾಗಿ ಗುರುತಿಸಲು ಸಹಾಯವಾಗುವಂತೆ ಡಿಜಿಟಲ್ ಕೋಡ್ ಅನ್ನು ಬದಲಾಯಿಸಲಾಗಿದೆ. ಎಐ2 ಎಂಬುದನ್ನು ಸೇರಿಸಲಾಗಲಿದೆ.