ಹೊಸದಿಗಂತ ವರದಿ, ವಿಜಯಪುರ:
ಸಚಿವ ಗೋವಿಂದ ಕಾರಜೋಳ ವಿರುದ್ಧ, ಶಾಸಕ ಎಂ.ಬಿ. ಪಾಟೀಲ ಅವಹೇಳನಕಾರಿಯಾಗಿ ಮಾತನಾಡಿರುವುದನ್ನು ಖಂಡಿಸಿ ದಲಿತ ಸಂಘಟನೆ ಮುಖಂಡರು ಎಂಬಿಪಿ ನಿವಾಸಕ್ಕೆ ಮುತ್ತಿಗೆ ಹಾಕಿ ಬುಧವಾರ ಪ್ರತಿಭಟನೆ ನಡೆಸಿದರು.
ಸಾವಿರಾರು ಸಂಖ್ಯೆಯಲ್ಲಿ ಪ್ರತಿಭಟನಾಕಾರರು, ನಗರದ ಬಂಜಾರಾ ಕ್ರಾಸ್ ಬಳಿಯಿಂದ ಎಂ.ಬಿ. ಪಾಟೀಲ ವಿರುದ್ಧ ಘೋಷಣೆ ಕೂಗುತ್ತ ಮೆರವಣಿಗೆ ಹೊರಟು, ಅವರ ನಿವಾಸದ ಎದುರು ಧರಣಿ ನಡೆಸಿದರು.
ಈ ಸಂದರ್ಭ ಎಂ.ಬಿ. ಪಾಟೀಲ ಪ್ರತಿಕೃತಿ ದಹಿಸಿ, ವಿರುದ್ಧ ಘೋಷಣೆ ಕೂಗಿ, ಹಲಗೆ ಬಾರಿಸಿ ಆಕ್ರೋಶ ವ್ಯಕ್ತಪಡಿಸಿದರು.
ಕೂಡಲೇ ಎಂ.ಬಿ. ಪಾಟೀಲ ಕ್ಷಮೆ ಕೇಳದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.
ಎಂಬಿಪಿ ನಿವಾಸದ ಎದುರಿನ ಸೊಲ್ಲಾಪುರ ರಸ್ತೆಯಲ್ಲಿ ನಾಲ್ಕು ಗಂಟೆಗೂ ಹೆಚ್ಚು ಕಾಲ ಪ್ರತಿಭಟನಾಕಾರರು ರಸ್ತೆ ಬಂದ್ ಮಾಡಿದ್ದು, ಟ್ರಾಫಿಕ್ ಸಮಸ್ಯೆ ಉಂಟಾಗಿ, ವಾಹನ ಸವಾರರು ಪರದಾಡುವಂತಾಯಿತು.
ಎಂ.ಬಿ. ಪಾಟೀಲ ನಿವಾಸದ ಸುತ್ತಲೂ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದ್ದು, ಬ್ಯಾರಿಕೇಡ್ ಅಳವಡಿಸಲಾಗಿದೆ.
ಈ ಸಂದರ್ಭ ಮುತ್ತಣ್ಣ ಬೆಣ್ಣೂರ, ಬಾಳಪ್ಪ ಮಾದರ, ಪರಶುರಾಮ ಹೊನ್ನಳ್ಳಿ, ವಿಠ್ಠಲ ನಡುವಿನಕೇರಿ, ಸುರೇಶ ಆಸಂಗಿ ಸೇರಿದಂತೆ ಹಲವರು ಇದ್ದರು.