ಮಂಗಳೂರಿನಲ್ಲಿ ಅಕ್ರಮ ಕಸಾಯಿಖಾನೆ ಜಾಗ ಯುಪಿ ಮಾದರಿಯಲ್ಲಿ ಮುಟ್ಟುಗೋಲು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಕ್ರಮ ಕಸಾಯಿಖಾನೆ ಜಾಗವನ್ನು ಉತ್ತರ ಪ್ರದೇಶ ಮಾದರಿಯಲ್ಲಿ ಮುಟ್ಟುಗೋಲು ಹಾಕುವ ಪ್ರಕ್ರಿಯೆ ಮಂಗಳೂರಿನಲ್ಲಿ ಮುಂದುವರಿದಿದೆ.
ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಅನಿಯಮ 2020ರ ಅಡಿಯಲ್ಲಿ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣಕ್ಕೆ ಸಂಬಂಸಿ ಗೋಹತ್ಯೆ ನಡೆಸಿದ ಸ್ಥಳ ಹಾಗೂ ಗೋಹತ್ಯೆಗೆ ಬಳಸಿದ ಸ್ವತ್ತುಗಳನ್ನು ಸರಕಾರದ ವಶಕ್ಕೆ ಪಡೆದು ಮಂಗಳೂರು ಸಹಾಯಕ ಆಯುಕ್ತ ಮದನ್‌ಮೋಹನ್ ಆದೇಶ ಹೊರಡಿಸಿದ್ದಾರೆ.

ಏಳು ಜನ ಆರೋಪಿಗಳು ಗೋಹತ್ಯೆ ನಡೆಸಲು ಬಳಸಿದ ಮಂಗಳೂರು ತಾಲೂಕು ಅಡ್ಡೂರು ಗ್ರಾಮದ ಆದ್ಯಪಾಡಿಯ ಯಾಕೂಬ್ ಎಂಬವರ ಮನೆಯ 15  ಸೆಂಟ್ಸ್ ಜಾಗ, ಕೃತ್ಯಕ್ಕೆ ಬಳಸಿದ ಆಮ್ನಿ ಕಾರ್, ಇತರ ಸ್ವತ್ತುಗಳನ್ನು ಸರಕಾರದ ವಶಕ್ಕೆ ಪಡೆಯಲಾಗಿದೆ.

ಕಾಟಿಪಳ್ಳ, ಅರ್ಕುಳ, ಗಂಜಿಮಠ ಬಳಿಕ ಅಡ್ಡೂರು ಗ್ರಾಮದ ಅದ್ಯಪಾಡಿಯಲ್ಲಿ ಅಕ್ರಮ ಕಸಾಯಿಖಾನೆ ಹೊಂದಿದ ಜಾಗದ ಮಾಲೀಕನ ಆಸ್ತಿ ಮುಟ್ಟುಗೋಲಿಗೆ ಮದನ್ ಮೋಹನ್ ಅವರು ಅ.17ರಂದು ಆದೇಶ ಹೊರಡಿಸಿದ್ದಾರೆ.

ಕಂಕನಾಡಿಯಲ್ಲಿ ಅಕ್ರಮ ಗೋ ಸಾಗಾಟ ಪತ್ತೆ ಮಾಡಿ ಆರೋಪಿಗಳನ್ನು ಬಂಧಿಸಿದ ವೇಳೆ ಅದ್ಯಪಾಡಿಯಲ್ಲಿ ಅಕ್ರಮ ಕಸಾಯಿಖಾನೆ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಆದ್ಯಪಾಡಿಯಲ್ಲಿ ಕಳವು ಮಾಡಿ ತಂದ ಜಾನುವಾರನ್ನು ವಸುತ್ತಿರುವ ಬಗ್ಗೆ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಆ.29ರಂದು 7 ಮಂದಿ ಆರೋಪಿಗಳ ವಿರುದ್ಧ ಕೇಸು ದಾಖಲಾಗಿತ್ತು.

ವಿಚಾರಣೆ ವೇಳೆ ಆರೋಪಿಗಳು ಯಾಕೂಬ್ ಎಂಬಾತನಿಗೆ ಸೇರಿದ ಜಾಗದಲ್ಲಿ ಅಕ್ರಮ ಕಸಾಯಿಖಾನೆಯಲ್ಲಿ ಜಾನುವಾರು ವಧೆ ಮಾಡುತ್ತಿರುವ ಬಗ್ಗೆ ಮಾಹಿತಿ ನೀಡಿದ್ದರು. ಇದರ ಆಧಾರದಲ್ಲಿ ತನಿಖೆ ಮುಂದುವರಿಸಿದ ಪೊಲೀಸರು ಜಾಗದ ಮಾಲೀಕರಿಗೆ ನೋಟಿಸ್ ನೀಡಿದ್ದು, ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗಿದೆ.

ಅಕ್ರಮ ಕಸಾಯಿಖಾನೆ ಹೊಂದಿದ್ದ ಆರೋಪದಲ್ಲಿ ಕಾಟಿಪಳ್ಳದ ಹಕೀಂ, ಅರ್ಕುಳದ ಬಾತೀಶ್ ಹಾಗೂ ಗಂಜಿಮಠದ ಯೂಸುಫ್ ಎಂಬವರ ಆಸ್ತಿ ಮುಟ್ಟುಗೋಲಿಗೆ ಅ.15 ರಂದು ಸಹಾಯಕ ಕಮಿಷನರ್ ಆದೇಶ ಹೊರಡಿಸಿದ್ದರು.

ಅಕ್ರಮ ಜಾನುವಾರ ಸಾಗಾಟ ಹಾಗೂ ಕಸಾಯಿಖಾನೆ ವಿರುದ್ಧ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಅನಿಯಮ 2020ರಡಿ ಆಸ್ತಿಮುಟ್ಟುಗೋಲಿನಂತಹ ಕಠಿಣ ಕ್ರಮ ಕೈಗೊಳ್ಳುವಂತೆ ಮಂಗಳೂರು ಉತ್ತರ ಶಾಸಕ ಡಾ.ಭರತ್ ಶೆಟ್ಟಿ ಆಗ್ರಹಿಸಿದ್ದರು.

ಇದೀಗ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಸೂಚನೆ ಮೇರೆಗೆ ಅವರ ಕ್ಷೇತ್ರದಲ್ಲೂ ಆಸ್ತಿ ಮುಟ್ಟುಗೋಲಿನ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!