ಸಿದ್ದರಾಮೋತ್ಸವದಲ್ಲಿ ಕಾಂಗ್ರೆಸ್ ಸರ್ಕಾರ ಮಾಡಿರುವ ಅಭಿವೃದ್ಧಿ ಕೆಲಸಗಳ ಮೆಲುಕು: ಡಿಕೆಶಿ

ಹೊಸದಿಗಂತ ವರದಿ, ಮೈಸೂರು:

ದಾವಣಗೆರೆಯಲ್ಲಿ ನಡೆಯಲಿರುವ ವಿಪಕ್ಷ ನಾಯಕ ಸಿದ್ದರಾಮಯ್ಯನವರ 75 ನೇ ಜನ್ಮ ದಿನಾಚರಣೆಯಾದ ಸಿದ್ದರಾಮೋತ್ಸವದಲ್ಲಿ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ರಾಜ್ಯದಲ್ಲಿ ಆಗಿರುವ ಅಭಿವೃದ್ಧಿ ಕೆಲಸ, ಪ್ರಗತಿಯನ್ನೂ ಮೆಲಕು ಹಾಕುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದರು.
ಶುಕ್ರವಾರ ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಾವಣಗೆರೆಯಲ್ಲಿ ನಡೆಯಲಿರುವ ಸಿದ್ದರಾಮೋತ್ಸವದಲ್ಲಿ ಹುಟ್ಟು ಹಬ್ಬ ಆಚರಣೆಯನ್ನು ಮಾಡುವುದಷ್ಟೇ ಅಲ್ಲ, ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಮಾಡಿರುವ ಸಾಧನೆಗಳನ್ನೂ ಜನರಿಗೆ ತಿಳಿಸುತ್ತೇವೆ. ನಮ್ಮ ಆಡಳಿತದ ಅವಧಿಯಲ್ಲಿ ರಾಜ್ಯದಲ್ಲಿ ಏನೇನು ಅಭಿವೃದ್ಧಿ ಕೆಲಸಗಳಾಗಿತ್ತು. ಈಗ ಪರಿಸ್ಥಿತಿ ಏನಾಗಿದೆ ಎಂಬುದನ್ನು ಜನರಿಗೆ ವಿವರಿಸುತ್ತೇವೆ. ಬಿಜೆಪಿ ಸರ್ಕಾರದ ದುರಾಡಳಿತದ ಮೇಲೆ ಬೆಳಕು ಚೆಲ್ಲಲಿದ್ದೇವೆ. ಬಿಜೆಪಿಯವರು ಸಿದ್ದರಾಮೋತ್ಸವ ಅದು-ಇದು ಎಂದೆಲ್ಲಾ ಮಾತನಾಡುತ್ತಿದ್ದಾರಷ್ಟೇ, ಅವರು ಹೇಳುತ್ತಿರುವಂತೆ ಕಾಂಗ್ರೆಸ್‌ನಲ್ಲಿ ಏನೂ ಆಗುವುದಿಲ್ಲ, ಆಗುತ್ತಿಲ್ಲ ಎಂದು ತಿರುಗೇಟು ನೀಡಿದರು.
ಸಿದ್ಧರಾಮಯ್ಯ ನೀಡಿದ್ಧ ಪರಿಹಾರ ಹಣವನ್ನ ಮುಸ್ಲಿಂ ಮಹಿಳೆ ನಿರಾಕರಿಸಿ ವಾಪಸ್ ಕಾರಿಗೆ ಎಸೆದ ಘಟನೆಗೆ ಪ್ರತಿಕ್ರಿಯಿಸಿ, ಶಾಂತಿ ಬೇಕಾದರೇ ನೀವು ರಾಜ್ಯದ ಸಿಎಂ ಕೇಳಬೇಕು. ಶಾಂತಿ ಕದಡುವವರಿಗೆ ನೀವು ಈ ಪ್ರಶ್ನೆ ಮಾಡಬೇಕು ಎಂದು ಮಹಿಳೆಗೆ ಕಿವಿಮಾತು ಹೇಳಿ, ರಾಜ್ಯ ಬಿಜೆಪಿ ಸರ್ಕಾರಕ್ಕೆ ಟಾಂಗ್ ನೀಡಿದರು.
ಅಲ್ಲಿನ ಜನ ನೆಮ್ಮದಿ ರಕ್ಷಣೆ ಕೇಳಿದ್ದಲ್ಲಿ ತಪ್ಪಿಲ್ಲ. ಸರ್ವಜನಾಂಗದ ಶಾಂತಿಯ ತೋಟ ನಮ್ಮದು. ಅರ್ಜಿ ಹಾಕಿಕೊಂಡು ಯಾರು ಯಾವ ಜಾತಿಯಲ್ಲಿ ಹುಟ್ಟಲ್ಲ. ನಾಯಕತ್ವ ವಹಿಸಿಕೊಂಡಿರುವ ಸರ್ಕಾರ ಕಾಳಜಿ ವಹಿಸಲಿ. ರಾಜ್ಯದಲ್ಲಿ ಶಾಂತಿ ಕಾಪಾಡುವ ಜವಾಬ್ದಾರಿ ಸರ್ಕಾರದ್ದು ಎಂದು ಹೇಳಿದರು.
ಬಸ್ಸಿನಲ್ಲಿಯೇ ತೆರಳಿ ನಾಡ ಶಕ್ತಿ ದೇವತೆಯ ದರ್ಶನ ಪಡೆದರು;
ಚಾಮುಂಡಿ ಬೆಟ್ಟಕ್ಕೆ ತೆರಳುವ ಖಾಸಗಿ ವಾಹನಗಳಿಗೆ ನಿರ್ಬಂಧ ವಿಧಿಸಿ ವಿಐಪಿ ಪಾಸ್‌ಗಳನ್ನು ರದ್ದು ಮಾಡಿದ್ದ ಹಿನ್ನಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಾರಿಗೆ ಸಂಸ್ಥೆಯ ಬಸ್‌ನಲ್ಲೇ ಚಾಮುಂಡಿಬೆಟ್ಟಕ್ಕೆ ತೆರಳಿ, ನಾಡ ಅಧಿದೇವತೆ ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆದು ಪ್ರಾರ್ಥನೆ ಸಲ್ಲಿಸಿದರು. ಅವರಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್ ಸೇರಿದಂತೆ ಕಾಂಗ್ರೆಸ್ ಮುಖಂಡರು ಸಾಥ್ ನೀಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!