ಕಾಂಗ್ರೆಸ್‌ ಪ್ರತಿಭಟನೆಯಿಂದ ಬಿಜೆಪಿಯನ್ನು ಕುಗ್ಗಿಸಲು ಸಾಧ್ಯವಿಲ್ಲ: ಕೆ.ಜಿ.ಬೋಪಯ್ಯ

ಹೊಸದಿಗಂತ ವರದಿ ಮಡಿಕೇರಿ:

ಪ್ರತಿಭಟನೆ ಮಾಡಿ ಬಿಜೆಪಿಯನ್ನು ನೈತಿಕವಾಗಿ ಕುಗ್ಗಿಸಬಹುದು ಎಂದು ಕಾಂಗ್ರೆಸ್ ಅಂದುಕೊಂಡಿದೆ. ಆದರೆ ಅದು ಸಾಧ್ಯವಿಲ್ಲ. ಅದೇನಿದ್ದರೂ ಕಾಂಗ್ರೆಸ್ಸಿನ ಕನಸು ಎಂದು ಶಾಸಕ ಕೆ.ಜಿ.ಬೋಪಯ್ಯ ಟೀಕಿಸಿದ್ದಾರೆ. ಮಡಿಕೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಅಂದಿನ ಗೃಹ ಸಚಿವರ ವಿರುದ್ಧ ನೇರ ಆರೋಪ ಮಾಡಿ ಆತ್ಮಹತ್ಯೆ ಮಾಡಿಕೊಂಡರು. ಆಗ ಗೃಹ ಸಚಿವರಾಗಿದ್ದ ಜಾರ್ಜ್ ರಾಜೀನಾಮೆಯನ್ನು ಕೊಟ್ಟಿರಲಿಲ್ಲ. ಕೊನೆ ಪಕ್ಷ ಅವರ ವಿರುದ್ಧ ಪ್ರಕರಣ ಕೂಡಾ ದಾಖಲಾಗಿರಲಿಲ್ಲ. ಖಾಸಗಿ ದೂರು ದಾಖಲಾದ ಎಷ್ಟೋ ದಿನಗಳ ನಂತರ ಜಾರ್ಜ್ ರಾಜೀನಾಮೆ ನೀಡಿದ್ದರು ಎಂದು ಬೋಪಯ್ಯ ನೆನಪಿಸಿದರು.
ಸಚಿವ ಈಶ್ವರಪ್ಪ ವಿರುದ್ಧವೂ ಯಾವುದೇ ನೇರ ಸಾಕ್ಷ್ಯಗಳು ಇಲ್ಲ. ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ. ಯಾವುದೇ ಸಾಕ್ಷ್ಯ ಆಧಾರಗಳಿಲ್ಲದೆ ಹೇಗೆ ಬಂಧಿಸಲು ಸಾಧ್ಯ ಎಂದು ಅವರು ಪ್ರಶ್ನಿಸಿದರು. ಬಿಜೆಪಿ ಅಥವಾ ನಮ್ಮ ಸರ್ಕಾರದ ವಿರುದ್ಧ ಮಾತನಾಡುವುದಕ್ಕೆ ಕಾಂಗ್ರೆಸ್‌ಗೆ ಬೇರೆ ವಿಷಯಗಳಿಲ್ಲ. ಹೀಗಾಗಿ ಸಂತೋಷ್ ಪಾಟೀಲ್ ಆತ್ಮಹತ್ಯೆ ವಿಷಯವನ್ನು ತೆಗೆದುಕೊಂಡು ಪ್ರತಿಭಟನೆಯ ನಾಟಕವಾಡುತ್ತಿದೆ ಎಂದು ತಿರುಗೇಟು ನೀಡಿದರು.

ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡಿರುವುದಕ್ಕೆ ಎಲ್ಲರಿಗೂ ಮರುಕವಿದೆ. ಆದರೆ ಕಾಂಗ್ರೆಸ್ ಅದನ್ನೇ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!