Tuesday, June 28, 2022

Latest Posts

ಕಾಂಗ್ರೆಸ್ ಭ್ರಷ್ಟಾಚಾರ ಕರ್ಮಕಾಂಡ ಬಯಲಾಗಿದೆ: ನಳಿನ್ ಕುಮಾರ್ ಕಟೀಲ್

ಹೊಸ ದಿಗಂತ ವರದಿ, ಮಂಗಳೂರು:

ಕಾಂಗ್ರೆಸ್ ನಾಯಕರಿಬ್ಬರು ಡಿ.ಕೆ.ಶಿವಕುಮಾರ್ ಬಗ್ಗೆ ಹೇಳಿಕೆ ನೀಡುವುದರ ಮೂಲಕ ಕಾಂಗ್ರೆಸ್‌ನ ಭ್ರಷ್ಟಾಚಾರ ಕರ್ಮಕಾಂಡ ಬಯಲಾಗಿದೆ. ಇವರು ಕಲೆಕ್ಷನ್ ಗಿರಾಕಿಗಳೆಂದು ಕಾಂಗ್ರೆಸ್ ನಾಯಕರೇ ಹೇಳಿದ್ದಾರೆ. ಕಾಂಗ್ರೆಸ್ ನಾಯಕರಿಬ್ಬರ ಮಾತು ವೈರಲ್ ಆಗಿರುವುದು ಡಿಕೆಶಿಯನ್ನು ಮುಗಿಸಲು ಸಿದ್ದರಾಮಯ್ಯನವರು ಮಾಡಿರುವ ತಂತ್ರವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಡಿಕೆಶಿಯವರ ಪ್ರಭಾವ ಕುಗ್ಗಿಸಲು ಸಿದ್ದರಾಮಯ್ಯನವರು ಇನ್ನಿಲ್ಲದ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಸಂಭಾಷಣೆಯ ತುಣುಕು ವೈರಲ್ ಆಗಿರುವುದು ಕೂಡ ಸಿದ್ದರಾಮಯ್ಯನವರ ತಂತ್ರದಿಂದಲೇ ಎಂದರು.
ಡಿಕೆಶಿಯವರ ಹುಡುಗರಲ್ಲೇ ರೂ.೫೦೦ ಕೋಟಿ ಇದೆ ಎಂಬ ಸಂಭಾಷಣೆಯ ತುಣುಕು ಭಾರೀ ಸದ್ದು ಮಾಡುತ್ತಿದೆ. ಇದರ ಸತ್ಯಾಸತ್ಯತೆ ಹೊರಬರಬೇಕು. ಈ ನಿಟ್ಟಿನಲ್ಲಿ ಸಿಬಿಐ ತನಿಖೆಯಾಗಬೇಕಿದೆ ಎಂದು ನಳಿನ್ ಒತ್ತಾಯಿಸಿದರು.
ಒಂದೆಡೆ ಎಚ್.ಡಿ.ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ಆರ್‌ಎಸ್‌ಎಸ್‌ಬಗ್ಗೆ ಮಾತನಾಡುತ್ತಾ ತಮ್ಮ ರಾಜಕೀಯ ಸ್ಥಾನ ಭದ್ರತೆಗೆ ಯತ್ನಿಸುತ್ತಿದ್ದಾರೆ. ಪ್ರಚಾರದಲ್ಲಿ ಉಳಿಯಲು ಸಿದ್ದರಾಮಯ್ಯನವರು ಆರ್‌ಎಸ್‌ಎಸ್ ಬಗ್ಗೆ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಇದು ಪ್ರಚಾರದಲ್ಲಿ ಉಳಿಯುವ ಅವರ ಮತ್ತೊಂದು ತಂತ್ರವಾಗಿದೆ ಎಂದರು.
ರಾಜ್ಯದಲ್ಲಿ ಜೆಡಿಎಸ್ ಈಗಾಗಲೇ ಸರ್ವನಾಶ ವಾಗಿದೆ. ಕಾಂಗ್ರೆಸ್ ಒಳಜಗಳದಲ್ಲಿ ಮುಳುಗಿ ಅಸ್ತಿತ್ವ ಕಳೆದುಕೊಳ್ಳುತ್ತಿದೆ. ಸಿದ್ದರಾಮಯ್ಯವರು ಈ ರಾಜ್ಯದ ಹಿಟ್ಲರ್‌ನಂತೆ ವರ್ತಿಸುತ್ತಿದ್ದಾರೆ. ತಮ್ಮ ಕುಟುಂಬಕ್ಕಾಗಿ ಮಾತ್ರ ಆಸ್ತಿ ಮಾಡಿದ ಅವರಿಂದ ಕಾಂಗ್ರೆಸ್‌ನ ಒಂದು ಕಚೇರಿ ಕೂಡ ಮಾಡಲು ಸಾಧ್ಯವಾಗಿಲ್ಲ ಎಂದು ನಳಿನ್ ಟೀಕಿಸಿದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘ ಜಗತ್ತಿನಾದ್ಯಂತ ಸಮಾಜ ಸೇವೆ ಮಾಡುತ್ತಿದೆ. ಕಾಂಗ್ರೆಸ್ ಒಂದೇ ಒಂದು ಸೇವಾಕಾರ್ಯ ಮಾಡಿಲ್ಲ. ಜೆಡಿಎಸ್ ನಲ್ಲಿ ಇದ್ದಾಗಲೂ ದೇವೇಗೌಡರನ್ನ ತುಳಿದವರು ಸೋನಿಯಾ ಗಾಂಧಿ ಬಗ್ಗೆಯೇ ಕೆಟ್ಟ ಶಬ್ದದಲ್ಲಿ ಮಾತನಾಡಿದವರು ಮತ್ತೆ ಅದೇ ಸೋನಿಯಾ ಕಾಲಿಗೆ ಬಿದ್ದಿದ್ದಾರೆ ಎಂದು ಸಿದ್ದರಾಮಯ್ಯನವರ ವಿರುದ್ಧ ನಳಿನ್ ವಾಗ್ದಾಳಿ ನಡೆಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss