ಕಾಂಗ್ರೆಸ್‌ ದಲಿತರು, ಅಲ್ಪಸಂಖ್ಯಾತರನ್ನು ಕೇವಲ ಮತಬ್ಯಾಂಕ್‌ ಆಗಿ ಪರಿಗಣಿಸಿದೆ: ಗೋವಿಂದ‌ ಕಾರಜೋಳ ವಾಗ್ದಾಳಿ

ಹೊಸದಿಗಂತ ವರದಿ, ಬಾಗಲಕೋಟೆ
ಕಾಂಗ್ರೆಸ್ ಪಕ್ಷದವರು ಹತಾಶರಾಗಿ ಸುಳ್ಳು ವಿಚಾರಗಳನ್ನು ಬಿತ್ತುತ್ತಿದ್ದಾರೆ. 60 ವರ್ಷ ಕಾಲ ದೇಶದಲ್ಲಿ ಆಡಳಿತ ನಡೆಸಿದ‌ ಕಾಂಗ್ರೆಸ್ ಪಕ್ಷದವರು ಬಡವರನ್ನು ಕೇವಲ ಮತಬ್ಯಾಂಕ್‌ ಆಗಿ ಪರಿಗಣಿಸಿದ್ದರು ಎಂದು ಜಲಸಂಪನ್ಮೂಲ ಸಚಿವ ಗೋವಿಂದ‌ ಕಾರಜೋಳ ವಾಗ್ದಾಳಿ ನಡೆಸಿದರು.
ನಗರದ ಬಿವಿವಿ ಸಂಘದ ನೂತನ ಸಭಾಭವನದಲ್ಲಿ ವಾಯುವ್ಯ ಪದವೀಧರ,ಶಿಕ್ಷಕರ ಮತಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ಬಸವಣ್ಣನವರ ಕುರಿತಾದ ವಿಚಾರವನ್ನು ಪಠ್ಯದಿಂದ ಕೈಬಿಡಲಾಗುತ್ತಿದೆ ಎಂದು ಕಾಂಗ್ರೆಸ್  ಜ‌ನರಲ್ಲಿ ಸುಳ್ಳು ಬಿತ್ತುತ್ತಿದೆ. ಇದನ್ನೆಲ್ಲ ನಂಬಲು ಜನರು ಮೂರ್ಖರಲ್ಲ. ಕಾಂಗ್ರೆಸ್ ಲಜ್ಜೆಗೆಟ್ಟ ವರ್ತನೆ ತೋರುತ್ತಿದೆ ಎಂದರು.
ಹಿಂದೆ ಇಂದಿರಾಗಾಂಧಿಯವರು ಬಡತನ ನಿರ್ಮೂಲನೆ ಮಾಡುವುದಾಗಿ ಹೇಳಿದ್ದರು. ಆದರೆ ಈಗ ಕಾಂಗ್ರೆಸ್‌ ಪಕ್ಷವೇ ನಿರ್ಮೂಲನೆ ಆಗುತ್ತಿದೆ. ಬಡವರು, ಅಲ್ಪಸಂಖ್ಯಾತರು, ದಲಿತರಿಗೆ ಶಿಕ್ಷಣ ನೀಡಿದರೆ ತಮ್ಮ ಸಾಂಪ್ರದಾಯಿಕ ಮತಬ್ಯಾಂಕ್‌ ಕಳೆದುಕೊಳ್ಳುವ ಭೀತಿಯಲ್ಲಿ ಕಾಂಗ್ರೆಸ್‌ ಅವರ ಅಭಿವೃದ್ಧಿಗೆ ಮುಂದಾಗಲಿಲ್ಲ ಎಂದು ಆರೋಪಿಸಿದರು.
ಪ್ರಧಾನಿ ನರೇಂದ್ರ ಮೋದಿಯವರು ಶಿಕ್ಷಣ ಕ್ರಾಂತಿ ನಡೆಸುತ್ತಿದ್ದಾರೆ. ಪ್ರತಿಯೊಬ್ಬರಿಗೂ ಉದ್ಯೋಗ ಸಿಗಬೇಕು ಎಂಬ ಮಹದಾಸೆಯಿಂದ ಹೊಸ ಶಿಕ್ಷಣ ನೀತಿ ಜಾರಿಗೆ ತಂದಿದ್ದಾರೆ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!