ಕಾಂಗ್ರೆಸ್’ಗೆ ಪ್ರತಿಪಕ್ಷವಾಗಿ ವರ್ತಿಸುವುದೇ ಗೊತ್ತಿಲ್ಲ: ಸಚಿವ ನಾಗೇಶ್

ಹೊಸದಿಗಂತ ವರದಿ ಮಡಿಕೇರಿ:
ದೀರ್ಘ ಕಾಲ‌ ಅಧಿಕಾರದಲ್ಲಿದ್ದ ಕಾಂಗ್ರೆಸ್’ಗೆ ಪ್ರತಿಪಕ್ಷವಾಗಿ ಹೇಗೆ ವರ್ತಿಸಬೇಕೆಂದೇ ತಿಳಿದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ನಾಗೇಶ್ ಅವರು, ಪ್ರಕೃತಿ ವಿಕೋಪದಂತಹ ಸಂದರ್ಭದಲ್ಲಿ ಪ್ರತಿಪಕ್ಷಗಳು ರಾಜಕೀಯ ಮಾಡಬಾರದು ಎಂದು ಕಿವಿಮಾತು ಹೇಳಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 10 ದಿನಗಳ ಹಿಂದೆಯಷ್ಟೇ ಕೊಡಗಿಗೆ ಬಂದು ಮಳೆಗಾಲದಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳನ್ನು ಸೂಚಿಸಿದ್ದೆ. ಇದರೊಂದಿಗೆ ಕಂದಾಯ ಸಚಿವ ಆರ್.ಅಶೋಕ್ ಅವರು ಕಳೆದ ವಾರವಷ್ಟೇ ಬಂದು ಪರಿಶೀಲನೆ ನಡೆಸಿದ್ದರು. ಹೀಗಿರುವಾಗ ಸರ್ಕಾರ ಕೊಡಗನ್ನು‌‌‌ ಮರೆತಿದೆ ಎನ್ನುವ ಕಾಂಗ್ರೆಸ್ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಇದು ಕೇವಲ ರಾಜಕೀಯ ಪ್ರೇರಿತ ಹೇಳಿಕೆ ಎಂದು ಟೀಕಿಸಿದರು.
ಪ್ರಕೃತಿ ವಿಕೋಪ ನಿರ್ವಹಣೆಗಾಗಿ ಗ್ರಾಮ ಪಂಚಾಯತಿ ಮಟ್ಟದಿಂದ ಜಿಲ್ಲಾ ಪಂಚಾಯಿತಿವರೆಗೂ ಕಾರ್ಯಪಡೆ ರಚಿಸಲಾಗಿದೆ. 2018ರ ದುರಂತದ ಮಾದರಿಯಲ್ಲೇ ಪರಿಹಾರ ಕಾರ್ಯಾಚರಣೆ ನಡೆಸಲಾಗಿದೆ. ಮನೆ ಹಾನಿಯಾದವರಿಗೆ ಪರಿಹಾರ ವಿತರಿಸಲಾಗಿದೆ ಎಂದರು.

ಕೆಲವರು ಒತ್ತಡ ಹಾಕಿ‌ ಕೆಲಸ ಮಾಡಿಸಿಕೊಳ್ಳಬೇಕು ಎನ್ನುವ ಉದ್ದೇಶ ಹೊಂದಿದ್ದಾರೆ. ಆದರೆ ಕೆಲಸ ಆಗಲಿಲ್ಲ ಎಂದಾಗ ಕೈಗೆಟುಕದ ದ್ರಾಕ್ಷಿ ಹುಳಿ ಎನ್ನುತ್ತಾರೆ.. ಹಾಗಾಗಿ ಕೆಲವರು ನನ್ನ ವಿರುದ್ಧ ಕೆಲವರು ಪ್ರಧಾನಿಗೆ ಪತ್ರ ಬರೆದಿರಬಹುದು ಎಂದು ಅವರು ನುಡಿದರು.

ಕೊಯನಾಡು ಬಳಿ ಚೆಕ್ ಡ್ಯಾಂನಲ್ಲಿ ಮರಗಳು ಸಿಲುಕಿ ಮನೆಗಳಿಗೆ ನೀರು ನುಗ್ಗಿದೆ. ಕೂಡಲೇ ಮರಗಳನ್ನು ತೆರವುಗೊಳಿಸಲಾಗಿದೆ‌. ಮಳೆಯಿಂದಾಗಿ ಜಿಲ್ಲೆಯಲ್ಲಿ ಇದುವರೆಗೆ 55 ಮನೆಗಳು ಭಾಗಶಃ , ಎರಡು ಮನೆಗಳು ಸಂಪೂರ್ಣ ಹಾನಿಗೀಡಾಗಿದ್ದು, 3 ಸೇತುವೆ, ತಲಾ ಒಂದು ಶಾಲೆ ಮತ್ತು ದೇಗುಲಕ್ಕೆ ಹಾನಿಯಾಗಿದೆ ಎಂದು ಉಸ್ತುವಾರಿ ಸಚಿವರು ಮಾಹಿತಿ ನೀಡಿದರು.

ಶಾಸಕ ಕೆ.ಜಿ.ಬೋಪಯ್ಯ ಮಾತನಾಡಿ ಮರಗಳಿಂದ ಹಾನಿ ಉಂಟಾಗಿರುವುದಕ್ಕೆ ಅರಣ್ಯ ಇಲಾಖೆಯ‌ ಅಧಿಕಾರಿಗಳೇ ನೇರ ಹೊಣೆ ಎಂದು ಆರೋಪಿಸಿದರೆ, ಪಶ್ಚಿಮ ಘಟ್ಟಗಳ ಕಾರ್ಯಪಡೆ ಅಧ್ಯಕ್ಷ ‌ರವಿ ಕುಶಾಲಪ್ಪ ಮಾತನಾಡಿ, 2018 ರಲ್ಲಿ ಬಿದ್ದ ಮರಗಳನ್ನು ಅಂದಿನ ಸರ್ಕಾರ ತೆರವುಗೊಳಿಸದಿದ್ದುದೇ ಸೇತುವೆಗೆ ಹಾನಿಯಾಗಲು ಕಾರಣ ಎಂದರು. ಶಾಸಕ ಎಂ.ಪಿ.ಅಪ್ಪಚ್ಚುರಂಜನ್, ಬಿಜೆಪಿ ಜಿಲ್ಲಾಧ್ಯಕ್ಷ ರಾಬಿನ್‌ ದೇವಯ್ಯ ಮತ್ತಿತರರು ಈ ಸಂದರ್ಭ ಹಾಜರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!