ದೇಶದಲ್ಲಿ ಮೊದಲು ಭ್ರಷ್ಟಾಚಾರ ಆರಂಭಿಸಿದ್ದು ಕಾಂಗ್ರೆಸ್ : ಸಿಎಂ ಬೊಮ್ಮಾಯಿ

ಹೊಸದಿಗಂತ ವರದಿ ಹಾವೇರಿ:

ದೇಶದಲ್ಲಿ ಮೊದಲು ಭ್ರಷ್ಟಾಚಾರ ಆರಂಭಿಸಿದ್ದು ಕಾಂಗ್ರೆಸ್ ಪಕ್ಷ. ದೇಶದಲ್ಲಿ ಮೊದಲ ಭ್ರಷ್ಟಾಚಾರದ ಹಗರಣ ಬೆಳಕಿಗೆ ಬಂದದ್ದು ಕಾಂಗ್ರೆಸ್ ಪಕ್ಷದ ಸಚಿವರದ್ದು ಎನ್ನುವುದನ್ನು ಮೊದಲು ತಿಳಿದುಕೊಳ್ಳಬೇಕು ಎಂದು ಮುಖ್ಯಮಂತ್ರಿ ಹೇಳಿದರು.

ಜಿಲ್ಲೆಯ ಹಿರೇಕೆರೂರಿನ ಹೆಲಿಪ್ಯಾಡ್ ನಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು. ಬೊಮ್ಮಾಯಿ ಭ್ರಷ್ಟಾಚಾರದ ಪಿತಾಮಹ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಉತ್ತರಿಸಿ. ಈ ದೇಶದ ಮೊದಲ ಭ್ರಷ್ಟಾಚಾರದ ಜೀಪ್ ಹಗರಣ ಪ್ರಾರಂಭವಾಗಿದ್ದು ಕಾಂಗ್ರೆಸ್ ಪಕ್ಷದಿಂದ. ಅಂದಿನ ರಕ್ಷಣಾ ಸಚಿವರು ರಾಜೀನಾಮೆ ನೀಡಬೇಕಾಗಿ ಬಂತು. ಸ್ವಾತಂತ್ರ್ಯ ಬಂದ ನಂತರದಲ್ಲಿ ಭ್ರಷ್ಟಾಚಾರ ಅಲ್ಲಿಂದ ಪ್ರಾರಂಭವಾಯಿತು. ಭ್ರಷ್ಟಾಚಾರ ಕಾಂಗ್ರೆಸ್ ನ ಅವಿಭಾಜ್ಯ ಅಂಗ. ಡಿ.ಕೆ.ಶಿವಕುಮಾರ್ ಬಹಳ ಸ್ವಚ್ಛ ಮನುಷ್ಯ. ಅವರಷ್ಟು ಸ್ವಚ್ಛ ಮನುಷ್ಯ ರಾಜಕಾರಣದಲ್ಲಿ ಯಾರು ಇಲ್ಲ ಎಂದು ಡಿಕೆಶಿ ಅವರ ಹೇಳಿಕೆಗೆ ತಿರುಗೇಟು ನೀಡಿದರು.

ಬಿಜೆಪಿ ಎ ಟೀಂ
ಜೆಡಿಎಸ್ ಅವರು ಕಾಂಗ್ರೆಸ್ ಬಿಜೆಪಿ ಟೀಂ ಎನ್ನುತ್ತಾರೆ. ಕಾಂಗ್ರೆಸ್ ನವರು ಜೆಡಿಎಸ್ ಹಾಗೂ ಬಿಜೆಪಿ ಟೀಂ ಎನ್ನುತ್ತಾರೆ. ನಾವು ಎ ಟೀಂ ಎಂದು ಇಬ್ಬರೂ ಒಪ್ಪುತ್ತಾರೆ. ಯಾವಾಗ ಅವರು ಬಿ ಟೀಂ ಆಗುತ್ತಾರೆ ಎನ್ನುವುದು ಅವರಿಗೆ ಬಿಟ್ಟಿದ್ದು. ನಮಗೆ ಎ , ಬಿ ಎನ್ನುವುದಕ್ಕಿಂತ ಜನತೆಯ ಟೀಂ ಎಂದರು.

ಬಿಜೆಪಿ ಭ್ರಷ್ಟಾಚಾರದ ಬಗ್ಗೆ ಕಾಂಗ್ರೆಸ್ ದೂರು ದಾಖಲಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿ. ಇದು ಅತ್ಯಂತ ಕೀಳು ಮಟ್ಟದ್ದು. ಹೇಳಿಕೆ ಕೊಟ್ಟವರು ಅದಕ್ಕೆ ಸ್ಪಷ್ಟೀಕರಣ ಕೊಡುತ್ತಾರೆ. ಮೊನ್ನೆ ದಿಗ್ವಿಜಯ ಸಿಂಗ್ ಅವರು ಒಂದು ಹೇಳಿಕೆ ಕೊಟ್ಟಿದ್ದಾರೆ. ನಿನ್ನೆ ರಾಹುಲ್ ಗಾಂಧಿ ಅವರು ಹೇಳಿಕೆ ನೀಡಿದ್ದು, ಯಾರಾದರೂ ಹೇಳಿಕೆ ನೀಡಿದರೆ. ಅದಕ್ಕೆ ಸರ್ಕಾರ ಜವಾಬ್ದಾರಿಯಲ್ಲ. ವೈಯಕ್ತಿಕವಾಗಿ ಅವರೇ ಜವಾಬ್ದಾರರು ಎಂದು ಸುಪ್ರೀಂಕೋರ್ಟ್ ತೀರ್ಪು ಕೂಡ ಬಂದಿದೆ. ಇದೆಲ್ಲ ಗೊತ್ತಿದ್ದು, ಕೇವಲ ರಾಜಕೀಯ ಕಾರಣಕ್ಕೆ, ಸೋಲು ಗ್ಯಾರಂಟಿಯಾಗಿರುವ ಕಾರಣ ಸುಳ್ಳು ಹಾಗೂ ರಾಜಕೀಯ ಪ್ರೇರಿತ ಆರೋಪಗಳನ್ನು ಮಾಡಿ ಜನರ ದಾರಿ ತಪಿಲಿಸುವ ಸಣ್ಣ ಪ್ರಯತ್ನ. ಆದ್ರೆ ಜನಕ್ಕೆ ಇದೆಲ್ಲಾ ಗೊತ್ತಿದೆ ಎಂದರು.
ಮುಂದೆ ಇನ್ನೂ ಪ್ರಯತ್ನ ಮಾಡುತ್ತಾರೆ. ದೇಶದಲ್ಲಿ ಕಾನೂನಿದೆ. ಆ ಕಾನೂನಿನ ಪ್ರಕಾರ ಎಲ್ಲವೂ ನಡೆಯಲಿದೆ. ಕಾಂಗ್ರೆಸ್ ಶಾಸಕರು ಮತದಾರರಿಗೆ ಆಮಿಷ ಒಡ್ಡುವಾಗ ಸಿಕ್ಕಿಹಾಕಿಕೊಂಡಿದ್ದಾರೆ. ಅವರ ಬಗ್ಗೆ ಇವರು ಏನೂ ಮಾತನಾಡುವುದಿಲ್ಲ ಎಂದು ಹೇಳಿದರು.

ಕಾಂಗ್ರೆಸ್ ಎಂದರೆ ಪ್ರೆಶರ್ ಕುಕ್ಕರ್ ಪಕ್ಷ. ಅಲ್ಲಿ ಬಾಂಬ್ ಕುಕ್ಕರ್ ಇಲ್ಲಿ ಪ್ರೆಶರ್ ಕುಕ್ಕರ್. ಚುನಾವಣೆ ಸಮಯದಲ್ಲಿ ಪ್ರೆಶರ್ ಕುಕ್ಕರ್ ಕೊಟ್ಟು ಗೆಲ್ಲುವುದು. ಹೀಗಾಗಿ ಅವರಿಗೆ ಕುಕ್ಕರ್ ಮೇಲೆ ಬಹಳ ಪ್ರೀತಿ. ಅದರಲ್ಲಿ ಬಾಂಬ್ ಇಟ್ಟರೂ ಅಲ್ಲ ಪ್ರೆಶರ್ ಕುಕ್ಕರ್ ಎನ್ನುತ್ತಾರೆ. ಈ ರೀತಿಯ ದೊಂಬರಾಟದಿಂದ ಯಾವುದೇ ಸಹಾಯವಾಗುವುದಿಲ್ಲ. ಕಾಂಗ್ರೆಸ್ ರಾಜಕೀಯವಾಗಿ ದಿವಾಳಿಯಾಗಿದ್ದಾರೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಹರಿಹಾಯ್ದರು.

ಬ್ಯಾಡಗಿ, ಹಾನಗಲ್, ಹಾವೇರಿಯಲ್ಲಿ ಎಲ್ಲಾ ನೀರಾವರಿ ಯೋಜನೆಗೆ ಚಾಲನೆ ಕೊಟ್ಟಿದ್ದು ನಮ್ಮ ಸರ್ಕಾರ.
ಹಿರೇಕೆರೂರಿನಲ್ಲಿ ನೀರಾವರಿ ಸೇರಿದಂತೆ ಅನೇಕ ಅಭಿವೃದ್ಧಿ ಕಾಮಗಾರಿಗಳಿಗೆ ಇಂದು ಚಾಲನೆ ನೀಡುತ್ತಿದ್ದೇವೆ. ಈ ಭಾಗದ ನೀರಾವರಿಗೆ ಬಹಳ ದಿನಗಳ ಬೇಡಿಕೆಯಿತ್ತು. ಸಚಿವ ಬಿ.ಸಿ ಪಾಟೀಲರ ಒತ್ತಾಸೆಯಂತೆ ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಅನುಮೋದನೆ ನೀಡಿದ್ದು, ನಾವು ಚಾಲನೆ ನೀಡುತ್ತಿದ್ದೇವೆ ಎಂದು ತಿಳಿಸಿದರು.

ಜನಸಂಕಲ್ಪ ಯಾತ್ರೆಯ ಮುಂದುವರೆದ ಭಾಗ ಪ್ರಾರಂಭಿಸಿದ್ದೇವೆ. ಬಿ ಎಸ್. ಯಡಿಯೂರಪ್ಪ ಅವರು ಕೂಡ ಆಗಮಿಸಿದ್ದಾರೆ. ಜನಸಂಕಲ್ಪ ಯಾತ್ರೆ ವಿಜಯಸಂಕಲ್ಪ ಯಾತ್ರೆಯಾಗಲಿದೆ. ಈ ಸಂದರ್ಭದಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ, ಶಾಸಕರಾದ ನೆಹರು ಓಲೇಕಾರ, ವಿರುಪಾಕ್ಷಪ್ಪ ಬಳ್ಳಾರಿ ಇತರರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!