Sunday, October 1, 2023

Latest Posts

ಕಿವುಡ, ಮಂಪರು ಕವಿದ ಕಾಂಗ್ರೆಸ್‌ ಸರ್ಕಾರ ರೈತ, ಜನವಿರೋಧಿ ನೀತಿಗಳನ್ನು ಅಳವಡಿಸಿಕೊಂಡಿದೆ: ಬಿ.ವೈ.ವಿಜಯೇಂದ್ರ ಕಿಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕಿವುಡ, ಮಂಪರು ಕವಿದ ರಾಜ್ಯ ಕಾಂಗ್ರೆಸ್ ಸರಕಾರ ರೈತ ವಿರೋಧಿ, ಜನವಿರೋಧಿ ನೀತಿಗಳನ್ನು ಅಳವಡಿಸಿಕೊಂಡಿದೆ ಎಂದು ರಾಜ್ಯ ಉಪಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ಟೀಕಿಸಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಹೆಚ್ಚು ಪರಿಹಾರ ಪಡೆಯಲು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂಬ ಸಚಿವರ ಹೇಳಿಕೆಯನ್ನು ಟೀಕಿಸಿದರು. ಕಾಂಗ್ರೆಸ್ ಸರಕಾರಕ್ಕೆ ಅಧಿಕಾರದ ಮದ ನೆತ್ತಿಗೇರಿದೆ ಎಂದು ಜನರ ಮಾತನ್ನು ಉಲ್ಲೇಖಿಸಿದರಲ್ಲದೆ, ಈ ಹೇಳಿಕೆ ನೀಡಿದ ಸಚಿವರು ರಾಜ್ಯದ ರೈತರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.

ಗ್ಯಾರಂಟಿ ಈಡೇರಿಸದ ಕಾಂಗ್ರೆಸ್‌ ಸರ್ಕಾರ

ಕಾಂಗ್ರೆಸ್‌ ನೀಡಿದ ಭರವಸೆ ಈಡೇರಿಸಲಾಗದೆ ಚಾಲಾಕಿತನದಿಂದ ಕೇಂದ್ರ ಸರಕಾರವನ್ನು ಟೀಕಿಸುತ್ತಿದ್ದಾರೆ. ಬರದ ವಿಚಾರದಲ್ಲಿ ಮಾನದಂಡ ಸಡಿಲಿಸಲು ಸಿಎಂ ಕೇಂದ್ರಕ್ಕೆ ಪತ್ರ ಬರೆದಿದ್ದು, ಇದರ ಹಿಂದೆ ದುರುದ್ದೇಶ ಇದೆ. ಗ್ಯಾರಂಟಿ ಈಡೇರಿಸಲು ಸಾಧ್ಯವಾಗುತ್ತಿಲ್ಲ. ಸರಕಾರಿ ನೌಕರರಿಗೆ ವೇತನ ನೀಡುತ್ತಿಲ್ಲ. ಅಕ್ಕಿ ಬದಲು ಸರಿಯಾಗಿ ಹಣ ಕೊಡುತ್ತಿಲ್ಲ ಎಂದು ಆಕ್ಷೇಪಿಸಿದರು.

ಕೇಂದ್ರದ ಮೇಲೆ ಗೂಬೆ ಕೂರಿಸುತ್ತಿರುವ ಕಾಂಗ್ರೆಸ್‌

ಬರಪೀಡಿತ ತಾಲ್ಲೂಕುಗಳನ್ನು ಘೋಷಿಸುವುದಾಗಿ ಕಂದಾಯ ಸಚಿವರು ಕೆಲದಿನಗಳ ಹಿಂದೆ ಹೇಳಿದ್ದರು. ಬಳಿಕ ಅದನ್ನು ಮುಂದೂಡಿದ್ದಾರೆ. ಸರ್ವೇ, ರಾಜ್ಯ ಪ್ರವಾಸದ ನೆಪ ಒಡ್ಡುತ್ತಿದ್ದಾರೆ. ಗ್ಯಾರಂಟಿ ಜಾತ್ರೆಗೆ ನಿಮಗೆ ಸಮಯ ಸಿಗುತ್ತದೆ. ಹಾಗಿದ್ದರೆ ನಿಮ್ಮ ಆದ್ಯತೆ ಏನು? ಎಂದು ಕೇಳಿದರು.

ರಾಜ್ಯ ಸರಕಾರಕ್ಕೆ ರೈತರ ಸಮಸ್ಯೆಗೆ ಸ್ಪಂದಿಸುವ ಕಳಕಳಿ, ಇಚ್ಛೆ ಇಲ್ಲ. ಇದಕ್ಕಾಗಿ ಕೇಂದ್ರಕ್ಕೆ ಪತ್ರ ಬರೆಯುತ್ತಿದ್ದಾರೆ. ಬರಪೀಡಿತ ಪ್ರದೇಶ ಘೋಷಣೆ ಯಾವಾಗ? ನೀವಿಲ್ಲಿ ತಡ ಮಾಡುತ್ತೀರಿ. ಕೇಂದ್ರದ ಮೇಲೆ ಗೂಬೆ ಕೂರಿಸುವ ಪ್ರಯತ್ನ ನಡೆದಿದೆ. ಪ್ರಾಮಾಣಿಕ ಕಳಕಳಿ ಸರಕಾರಕ್ಕೆ ಇಲ್ಲ ಎಂದು ಟೀಕಿಸಿದರು. ವೈಫಲ್ಯಗಳನ್ನು ಮುಚ್ಚಿಹಾಕಲು ಕೇಂದ್ರದ ಮೇಲೆ ಗೂಬೆ ಕೂರಿಸುತ್ತಿದ್ದಾರೆ ಎಂದು ದೂರಿದರು.

ಬರಪೀಡಿತ ತಾಲ್ಲೂಕು ಘೋಷಿಸಿ ರೈತರ ಸಂಕಷ್ಟಕ್ಕೆ ನೆರವಾಗಿ

ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ಅತಿವೃಷ್ಟಿ ಆದಾಗ ಸಚಿವ ಸಂಪುಟ ರಚನೆ ಆಗಿರಲಿಲ್ಲ. ಆದರೂ ತಾವೇ ಸಮೀಕ್ಷೆ ನಡೆಸಿ ಮನೆ ಬಿದ್ದುದಕ್ಕೆ ಹೆಚ್ಚು ಹಣ ನೀಡಿದ್ದರು ಎಂದು ನೆನಪಿಸಿದ ಅವರು, ರಾಜ್ಯ ಸರಕಾರ ತಕ್ಷಣ ಬರಗಾಲ ಪೀಡಿತ ತಾಲ್ಲೂಕುಗಳನ್ನು ಘೋಷಿಸಿ ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂದು ಒತ್ತಾಯಿಸಿದರು.

ನುಡಿದಂತೆ ನಡೆಯದ ಸರಕಾರ

ಡಿಸಿಎಂ ಶಿವಕುಮಾರ್, ಸಿಎಂ ಸಿದ್ದರಾಮಯ್ಯನವರು ಹಿಂದೆ ಮೇಕೆದಾಟು ಯೋಜನೆಗೆ ಆಗ್ರಹಿಸಿ ಪಾದಯಾತ್ರೆ ಮಾಡಿದ್ದರು. ಈಗ ಕೇಂದ್ರದ ವಿರುದ್ಧ ಗೂಬೆ ಕೂರಿಸುತ್ತಿದ್ದಾರೆ. ಕಾವೇರಿ ಹೋರಾಟ ಮಾಡುತ್ತಿರುವ ರೈತರು, ಕನ್ನಡಪರ ಹೋರಾಟಗಾರರ ಧ್ವನಿ ಹತ್ತಿಕ್ಕುವ ಕೆಲಸ ನಡೆದಿದೆ. ನುಡಿದಂತೆ ನಡೆಯದ ಸರಕಾರಕ್ಕೆ ರಾಜ್ಯದ ಜನರು, ರೈತರು ಶಾಪ ಹಾಕುತ್ತಿದ್ದಾರೆ ಎಂದರು.

ಲೋಡ್ ಶೆಡ್ಡಿಂಗ್ ನಿರಂತರವಾಗಿದೆ. ನನ್ನ ಕ್ಷೇತ್ರ ಶಿಕಾರಿಪುರದಲ್ಲಿ 40 ಸಾವಿರ ಪಂಪ್‍ಸೆಟ್ ಇವೆ. ನೀರು ಮೇಲೆತ್ತಿ ಹಾಯಿಸಲು ಒಂದೆರಡು ತಾಸು ಕೂಡ ಕರೆಂಟ್ ಸಿಗುತ್ತಿಲ್ಲ. 200 ಯೂನಿಟ್ ಕರೆಂಟ್ ಉಚಿತ ಎನ್ನುವ ಸರಕಾರವು ರೈತರಿಗೆ ಪಂಪ್‍ಸೆಟ್‍ಗಳಿಗೆ ವಿದ್ಯುತ್ ಕೊಡುತ್ತಿಲ್ಲ. ರೈತರ ಬಗ್ಗೆ ಇವರಿಗೆ ಕನಿಕರ, ಅನುಕಂಪ ಇಲ್ಲ. ಇದು ಖಂಡನೀಯ ಎಂದರು.

ರಾಜ್ಯ ರೈತಸಂಘ ಕಾವೇರಿ ವಿಚಾರದಲ್ಲಿ ಸುಪ್ರೀಂ ಕೋರ್ಟಿನಲ್ಲಿ ದಾವೆ ಹೂಡಿದೆ. ಸರಕಾರವು ನಿಜಾಂಶ ತಿಳಿಸುವ ಸಾಧ್ಯತೆ ಇಲ್ಲ ಎಂದು ಗಮನಿಸಿ ಈ ದಾವೆ ಹೂಡಲಾಗಿದೆ. ರೈತರಿಗೆ ರಾಜ್ಯ ಸರಕಾರದ ಕುರಿತು ವಿಶ್ವಾಸ ಇಲ್ಲ ಎಂದರು.

ರಾಜ್ಯ ಸರಕಾರಕ್ಕೆ ಮಂಪರು ಕವಿದಿದೆ

ರಾಜ್ಯದಲ್ಲಿ ಭೀಕರ ಬರದ ಛಾಯೆ ಆವರಿಸಿದೆ. 196ಕ್ಕೂ ಹೆಚ್ಚು ತಾಲ್ಲೂಕುಗಳಲ್ಲಿ ಬರದ ವಾತಾವರಣ ನಿರ್ಮಾಣವಾಗಿದೆ. ಅತ್ಯಂತ ತುರ್ತಾಗಿ ತೀರ್ಮಾನ ತೆಗೆದುಕೊಂಡು ಕಾಮಗಾರಿ ನಡೆಸಬೇಕಾದ ರಾಜ್ಯ ಸರಕಾರಕ್ಕೆ ಮಂಪರು ಕವಿದಂತಿದೆ ಎಂದು ಟೀಕಿಸಿದರು.

ರಾಜ್ಯ ಸರಕಾರ ಆಮೆ ನಡಿಗೆಯಲ್ಲಿ ಸಾಗುತ್ತಿದೆ. ಇದರಿಂದ ರಾಜ್ಯದ ರೈತರು, ಜನತೆ ಸಂಕಷ್ಟದಲ್ಲಿದ್ದಾರೆ. ಮುಂದೆ ಏನೇ ಅನಾಹುತವಾದರೂ ರಾಜ್ಯ ಸರಕಾರವೇ ಹೊಣೆ ಹೊರಬೇಕು. ಬರದ ವಿಚಾರವಾಗಿ ನಿರಂತರ ಸಮೀಕ್ಷೆ ನಡೆದಿದೆ. ಮಾಧ್ಯಮಗಳೂ ರಾಜ್ಯ ಸರಕಾರವನ್ನು ಎಚ್ಚರಿಸುತ್ತಿವೆ. ಇಷ್ಟಾದರೂ ಕೂಡ ರಾಜ್ಯ ಸರಕಾರ ಎಚ್ಚೆತ್ತಿಲ್ಲ. ರೋಮ್ ಹೊತ್ತಿ ಉರಿಯುತ್ತಿದ್ದಾಗ ದೊರೆ ಪಿಟೀಲು ಬಾರಿಸುತ್ತಿದ್ದನಂತೆ ಎಂಬಂತಿದೆ ಇಲ್ಲಿನ ಸರಕಾರದ ದುಸ್ಥಿತಿ ಎಂದರು.

ಸಿಎಂ, ಡಿಸಿಎಂ ಜನರ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ. ಗ್ಯಾರಂಟಿ ಜಾತ್ರೆ, ದುಂದುವೆಚ್ಚ ಖಂಡನೀಯ. ಮುಂಗಾರು ವಿಫಲದಿಂದ ಉಂಟಾದ ಪರಿಸ್ಥಿತಿ ಬಗ್ಗೆ ಕಾಲಾನುಸಾರ ಹವಾಮಾನ ತಜ್ಞರು ರಾಜ್ಯ ಸರಕಾರಕ್ಕೆ ಎಚ್ಚರಿಸಿದ್ದಾರೆ. ಆದರೂ ಅದನ್ನು ಪರಿಗಣಿಸಿಲ್ಲ ಎಂದು ಆಕ್ಷೇಪಿಸಿದರು.

ಸರ್ಕಾರದ ವೈಫಲ್ಯಗಳನ್ನು ಖಂಡಿಸಿ ಸೆ.8ರಂದು ಹೋರಾಟ

ರಾಜ್ಯ ಸರಕಾರದ ವೈಫಲ್ಯಗಳನ್ನು ಖಂಡಿಸಿ ಮಾಜಿ ಸಿಎಂ, ರೈತ ನಾಯಕ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಇದೇ 8ರಂದು ಹೋರಾಟ ನಡೆಯಲಿದೆ. ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್, ಡಾ. ಅಶ್ವತ್ಥನಾರಾಯಣ್, ಆರ್.ಅಶೋಕ್ ಮತ್ತಿತರ ಮುಖಂಡರು ಭಾಗವಹಿಸುತ್ತಾರೆ ಎಂದು ವಿವರಿಸಿದರು. ಇದು ನುಡಿದಂತೆ ನಡೆದ ಸರಕಾರವಲ್ಲ. ಇದು ಎಡವುತ್ತಿರುವ ಸರಕಾರ ಎಂದು ರಾಜ್ಯದ ಜನತೆ ಗಮನಿಸಿದ್ದಾರೆ. ಇವರಿಗೆ ಲೋಕಸಭಾ ಚುನಾವಣೆಯಲ್ಲಿ ಜನತೆ ಪಾಠ ಕಲಿಸುತ್ತಾರೆ ಎಂದು ಎಚ್ಚರಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!