ಹೊಸದಿಗಂತ ವರದಿ, ಮೈಸೂರು:
ಯಾವುದೇ ಭವಿಷ್ಯದ ಯೋಚನೆಯಿಲ್ಲದ ಈ ಹಿಂದೆ ಆಡಳಿತ ನಡೆಸಿದ ಕಾಂಗ್ರೆಸ್ ನೇತೃತ್ವದ ಕೇಂದ್ರ ಸರ್ಕಾರ ತೈಲ ಕ್ಷೇತ್ರಕ್ಕೆ ಹೂಡಿಕೆ ಮಾಡದೆ ದೇಶವನ್ನು ಸಂಕಷ್ಟಕ್ಕೆ ಸಿಲುಕಿಸಿದೆ ಎಂದು ಬಿಜೆಪಿ ರಾಜ್ಯ ವಕ್ತಾರ ಎಂ.ಜಿ.ಮಹೇಶ್ ಆರೋಪಿಸಿದರು.
ಮಂಗಳವಾರ ಮೈಸೂರಿನ ಚಾಮರಾಜಪುರಂನಲ್ಲಿರುವ ಬಿಜೆಪಿ ಕಛೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪೆಟ್ರೋಲ್ ಹಾಗೂ ಡೀಸೆಲ್ ಮತ್ತು ಎಲ್ ಪಿಜಿ ಬೆಲೆಯೇರಿಕೆಯಾಗುತ್ತಿರುವುದು ನಿಜಕ್ಕೂ ಬಿಜೆಪಿಗೆ ಕಳವಳವುಂಟು ಮಾಡಿದೆ. ಇಂತಹ ಸಂಕಷ್ಟದ ಸಮಯದಲ್ಲಿ ಈ ದೇಶದ ಶ್ರೀಸಾಮಾನ್ಯ ಸರ್ಕಾರದ ಜೊತೆ ಕೈಜೋಡಿಸಬೇಕೆಂಬ ನೈಜ ಅಭಿಪ್ರಾಯಕ್ಕೆ ಕಾಂಗ್ರೆಸ್ ಅಪಹಾಸ್ಯ ಮಾಡುತ್ತಿದೆ. ಕಾಂಗ್ರೆಸ್ ನ ಈ ಧೋರಣೆ ಮತ್ತು ಮನಸ್ಥಿತಿಯನ್ನು ಬಿಜೆಪಿ ತೀವ್ರವಾಗಿ ಖಂಡಿಸುತ್ತಿದೆ ಎಂದರು.
ತೈಲ ಬೆಲೆ ನಿರ್ಧರಿಸುವುದು ಮಾರುಕಟ್ಟೆ ಬೆಲೆಯಲ್ಲಿ (ಡಾಲರ್ ಲೆಕ್ಕದಲ್ಲಿ). ಅದು ಪ್ರತಿದಿನ ಏರಿಳಿತ ವಾಗಲಿದೆ. ಡಾಲರ್ ಬೆಲೆ ಏರಿದಾಗ ತೈಲಬೆಲೆಯೂ ಏರಲಿದೆ. ಯುಪಿಎ ಸರ್ಕಾರ ಇದ್ದಾಗ ತೈಲ ಬಾಂಡ್ ಗಾಗಿ 2ಲಕ್ಷ ಕೋಟಿ ಸಾಲವಿದ್ದು, ಇದಕ್ಕೆ ಸಂಬAಧಿಸಿ ಒಟ್ಟು 45ಸಾವಿರ ಕೋಟಿ ಬಡ್ಡಿ ಕಟ್ಟಲಾಗಿದೆ. ಯುಪಿಎ ಸರ್ಕಾರ ಇದ್ದಾಗ ರಸಗೊಬ್ಬರಕ್ಕಾಗಿ 75ಸಾವಿರ ಕೋಟಿ ಸಾಲ ಮಾಡಿದ್ದರು. ಅದನ್ನು ಪ್ರಧಾನಿಗಳಾದ ನರೇಂದ್ರ ಮೋದಿಯವರ ಸರ್ಕಾರ ಮರುಪಾವತಿ ಮಾಡಿದೆ. ಇದರ ನಡುವೆ ಜನರ ಅಭಿವೃದ್ಧಿ , ಕಟ್ಟಕಡೆಯ ವ್ಯಕ್ತಿಗೆ ನೆರವಾಗಲು ಯೋಜನೆ ಜಾರಿ, 8ಕೋಟಿ ಕುಟುಂಬಗಳಿಗೆ ಉಜ್ವಲ ಯೋಜನೆಯಡಿ ಉಚಿತ ಸಿಲಿಂಡರ್ ಸಂಪರ್ಕ, ದೇಶದ 18ಸಾವಿರ ಹಳ್ಳಿಗಳಿಗೆ ಉಚಿತ ವಿದ್ಯುತ್ ಸಂಪರ್ಕ, ಜನ್ ಧನ್ ಯೋಜನೆಯಡಿ 43ಕೋಟಿ ಜನರಿಗೆ ಬ್ಯಾಂಕ್ ಖಾತೆ ನೇರ ಸೌಲಭ್ಯ ವರ್ಗಾವಣೆ ಸಾಧ್ಯವಾಗಿದೆ ಎಂದು ವಿವರಿಸಿದರು.
ರಾಜಸ್ಥಾನದಲ್ಲಿ ಪೆಟ್ರೋಲ್ ಬೆಲೆ 100ರೂ.ಇದೆ. ಮಹಾರಾಷ್ಟ್ರದಲ್ಲಿ ಕಾಂಗ್ರೆಸ್, ನ್ಯಾಷನಲಿಸ್ಟ್ ಕಾಂಗ್ರೆಸ್ ಮತ್ತು ಶಿವಸೇನೆ ಆಡಳಿತದಲ್ಲಿ 98ರೂ. 2030ರ ವೇಳೆಗೆ ಎಲೆಕ್ಟಿçಕ್ ಮತ್ತು ಸೌರ ವಿದ್ಯುತ್ ಕಾರ್ ವಾಹನಗಳು ಬರಲಿದ್ದು, ಈ ಸಂಕಷ್ಟದ ಕಾಲ ಬಹಳ ಶೀಘ್ರದಲ್ಲಿ ದೂರವಾಗಿ ಶ್ರೀ ಸಾಮಾನ್ಯನ ಬದುಕು ಸಾಮಾನ್ಯ ಸ್ಥಿತಿಗೆ ಮರಳುವುದೆಂದು ಆಶಿಸುವುದಾಗಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮೈಸೂರು ನಗರ ಅಧ್ಯಕ್ಷ ಟಿ.ಎಸ್.ಶ್ರೀವತ್ಸ, ನಗರ ವಕ್ತಾರ ಎಂ.ಎ.ಮೋಹನ್, ಸಹವಕ್ತಾರ ಕೇಬಲ್ ಮಹೇಶ್, ಮಾಧ್ಯಮ ಸಂಚಾಲಕ ಮಹೇಶ್ರಾಜೇಅರಸ್, ಸಹ ಸಂಚಾಲಕ ಎನ್.ಪ್ರದೀಪ್ ಕುಮಾರ್ ಉಪಸ್ಥಿತರಿದ್ದರು.