ಬಿಜೆಪಿ ವಿಶೇಷ ಕಾರ್ಯಕಾರಿಣಿ : ನೀತಿ ಇಲ್ಲದ ದೃಷ್ಟಿಹೀನ ಪಕ್ಷ ಕಾಂಗ್ರೆಸ್‌ ; ಅರುಣ್ ಸಿಂಗ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಚುನಾವಣಾ ಸಮಯ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಮಹತ್ವದ ಸಭೆ ಇದಾಗಲಿದೆ. ಪಕ್ಷದ ಸಿದ್ಧತೆ, ಜನರ ಒಲವು, ಹಿರಿಯರ ವಿಶ್ಲೇಷಣೆ ಗಮನಿಸಿದರೆ ಬಿಜೆಪಿ ಮತ್ತೆ ಅಧಿಕಾರ ಪಡೆಯುವುದು ನಿಶ್ಚಿತ ಎಂದು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕದ ಉಸ್ತುವಾರಿ ಅರುಣ್ ಸಿಂಗ್ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನ ಅರಮನೆ ಮೈದಾನದಲ್ಲಿ ಇಂದು ಬಿಜೆಪಿ ರಾಜ್ಯ ವಿಶೇಷ ಕಾರ್ಯಕಾರಿಣಿ ಸಭೆಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು ಮುಂದಿನ ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿ 150ಕ್ಕೂ ಹೆಚ್ಚು ಸೀಟು ಗೆಲ್ಲಲಿದೆ. ಬಿಜೆಪಿ ಬಳಿ ಸಕ್ರಿಯ- ಸದೃಢ ಕಾರ್ಯಕರ್ತರ ಶಕ್ತಿ ಇದೆ. ಬಿಜೆಪಿ ನಿರಂತರವಾಗಿ ದೇಶಸೇವೆ, ಸಮಾಜಸೇವೆಯಲ್ಲಿ ತನ್ನನ್ನು ತೊಡಗಿಸಿಕೊಂಡಿದೆ. ಬೂತ್ ಕಮಿಟಿ, ಪೇಜ್ ಸಮಿತಿ ಸೇರಿ ಅಭೇದ್ಯ ಸಂಘಟನೆ ನಮ್ಮ ಪಕ್ಷದ್ದು. ಇಂಥ ಸಂಘಟನೆ ಬೇರೆ ಪಕ್ಷಗಳ ಬಳಿ ಇಲ್ಲ ಎಂದು ವಿಶ್ಲೇಷಿಸಿದರು.

ಬೂತ್ ವಿಜಯ, ವಿಜಯ ಸಂಕಲ್ಪ ಅಭಿಯಾನ ಯಶಸ್ವಿ ಮಾಡಿದ ಕಾರ್ಯಕರ್ತರು ಮತ್ತು ಮುಖಂಡರನ್ನು ಅಭಿನಂದಿಸಿದರು. ಬಡವರಿಗೆ ಮನೆ, ಉಚಿತ ಕೋವಿಡ್ ಲಸಿಕೆ, 80 ಕೋಟಿ ಜನರಿಗೆ ಉಚಿತ ಪಡಿತರ ಸೇರಿದಂತೆ ವಿವಿಧ ಜನೋಪಯೋಗಿ ಯೋಜನೆಗಳನ್ನು ಜನರಿಗೆ ತಿಳಿಸಿ ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಕಾಲದಲ್ಲಿ ಸ್ಥಗಿತಗೊಂಡಿದ್ದ ಭದ್ರಾ ಮೇಲ್ದಂಡೆ ಯೋಜನೆಗೆ ಗರಿಷ್ಠ ಅನುದಾನ ನೀಡಿದ್ದಕ್ಕಾಗಿ ಮೋದಿಜಿ ಅವರನ್ನು ಅಭಿನಂದಿಸಿದರು.

ಸಮರ್ಥ ನಾಯಕರೇ ಇಲ್ಲದ ಪಕ್ಷ ಕಾಂಗ್ರೆಸ್‌ ಹಾಗಾಗಿ ಕಾಂಗ್ರೆಸ್ ತೊರೆಯುವವರ ಸಂಖ್ಯೆ ಹೆಚ್ಚಾಗಿದೆ. ನೀತಿ ಇಲ್ಲದ ಮತ್ತು ದೃಷ್ಟಿಹೀನ ಪಕ್ಷವದು, ರಾಹುಲ್ ಗಾಂಧಿಯವರು ಏನು ಹೇಳುತ್ತಾರೆಂದು ಯಾರಿಗೂ ಅರ್ಥ ಆಗುವುದಿಲ್ಲ. ತುಷ್ಟೀಕರಣದ ನೀತಿ ಕಾಂಗ್ರೆಸ್‍ನದು. ಸಿದ್ದರಾಮಯ್ಯ ಆಡಳಿತದಲ್ಲಿ ಪಿಎಫ್‍ಐಗೆ ಪ್ರೋತ್ಸಾಹ, ಹಿಂದೂಗಳ ಹತ್ಯೆ ನಿರಂತರವಾಗಿತ್ತು ಎಂದು ಅರುಣ್ ಸಿಂಗ್ ಟೀಕಿಸಿದರು.

ಹಿಂದೂಗಳ ಅವಹೇಳನ ಮಾಡುವ ಕೆಲಸವನ್ನೇ ಸಿದ್ದರಾಮಯ್ಯ ಮಾಡುತ್ತಾರೆ. ಇದೇ ಕಾರಣಕ್ಕಾಗಿ ಕಾಂಗ್ರೆಸ್ ಪಕ್ಷ ನೆಲಕಚ್ಚುವ ಸ್ಥಿತಿ ತಲುಪಿದೆ ಎಂದು ಆಕ್ಷೇಪಿಸಿದರು. ಕಾಂಗ್ರೆಸ್ ಭರವಸೆ ಕೇವಲ ಆಶ್ವಾಸನೆಯಾಗಿಯೇ ಉಳಿಯುತ್ತದೆ. ಕಾಂಗ್ರೆಸ್ ಪಕ್ಷ ಸುಳ್ಳುಗಳ ಸರದಾರನಂತಿದೆ ಎಂದು ಆರೋಪಿಸಿದರು. ಅದಲ್ಲದೆ ರಾಜಸ್ಥಾನ, ಛತ್ತೀಸಗಡದಲ್ಲೂ ಅದು ನೀಡಿದ್ದ ಆಶ್ವಾಸನೆಗಳನ್ನು ಈಡೇರಿಸಿಲ್ಲ ಎಂದು ನೆನಪಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!