ಪೇಸಿಎಂ ಅಭಿಯಾನದ ಮೂಲಕ ಕಾಂಗ್ರೆಸ್ ರಾಜ್ಯದ ಜನರನ್ನು ಅಪಮಾನಿಸುತ್ತಿದೆ: ಅರುಣ್ ಸಿಂಗ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌, ಬೆಂಗಳೂರು:
ಪೇಸಿಎಂ ಅಭಿಯಾನದ ಮೂಲಕ ಕಾಂಗ್ರೆಸ್ ಪಕ್ಷವು ಕರ್ನಾಟಕದ ಜನರ ಅವಮಾನ ಮಾಡುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕದ ಉಸ್ತುವಾರಿ ಅರುಣ್ ಸಿಂಗ್ ಅವರು ಆಕ್ರೋಶ ವ್ಯಕ್ತಪಡಿಸಿದರು.
ನಗರದ ಕುಮಾರಕೃಪಾ ಗೆಸ್ಟ್ ಹೌಸ್ ನಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಸಣ್ಣತನವನ್ನು ಪ್ರದರ್ಶಿಸುತ್ತಿದೆ. ಅವ ವರ್ತನೆಯನ್ನು ಜನರು ಕ್ಷಮಿಸುವುದಿಲ್ಲ ಎಂದು ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ಪಕ್ಷದ ಧೋರಣೆಗೆ ಬಡಜನರು, ರೈತರು ಸೇರಿದಂತೆ ಎಲ್ಲ ಮತದಾರರು ಸಮರ್ಥ ಉತ್ತರ ಕೊಟ್ಟು ಆ ಪಕ್ಷವನ್ನು ರಾಜ್ಯದಲ್ಲಿ ನಾಮಾವಶೇಷಗೊಳಿಸಲಿದ್ದಾರೆ ಎಂದು ಹೇಳಿದರು.
ಬಸವರಾಜ ಬೊಮ್ಮಾಯಿಯವರ ಸರಕಾರವು ರೈತರಿಗೆ ಕಿಸಾನ್ ಸಮ್ಮಾನ್ ಮೂಲಕ ಹೆಚ್ಚುವರಿ ನಿಧಿ, ರೈತ ವಿದ್ಯಾ ನಿಧಿ ಸ್ಕಾಲರ್‌ ಶಿಪ್ ನೀಡುತ್ತಿದೆ. ಎಸ್‍ಸಿ, ಎಸ್‍ಟಿ ವರ್ಗಕ್ಕೆ ವಿಶೇಷ ಪ್ಯಾಕೇಜ್ ನೀಡುವ ಮೂಲಕ ಜನಸಾಮಾನ್ಯರ ಸರಕಾರವಾಗಿ ಪ್ರಖ್ಯಾತಿ ಗಳಿಸಿದೆ. ಅವರು ಕಾಮನ್ ಮ್ಯಾನ್ ಸಿಎಂ ಆಗಿದ್ದಾರೆ ಎಂದು ಶ್ಲಾಘಿಸಿದರು.
ಎಸ್‍ಸಿ ಹಾಸ್ಟೆಲ್ ಖರೀದಿ ಹಗರಣ, ಪಡಿತರದಲ್ಲೂ ಹಗರಣ, ಅರ್ಜಿ ಹಾಕದ ವ್ಯಕ್ತಿಯನ್ನು ಶಿಕ್ಷಕರನ್ನಾಗಿ ನೇಮಕ ಮಾಡಿದ್ದು, ಪೊಲೀಸರ ನೇಮಕಾತಿಯಲ್ಲಿ ಹಗರಣಗಳು ಸಿದ್ದರಾಮಯ್ಯರ ಅಧಿಕಾರಾವಧಿಯಲ್ಲಿ ನಡೆದಿವೆ. ಕಾಂಗ್ರೆಸ್ ಭ್ರಷ್ಟಾಚಾರದ ತಾಯಿಬೇರಿನಂತಿದೆ. ಭ್ರಷ್ಟರ ಪಕ್ಷವಾದ ಕಾಂಗ್ರೆಸ್, ಸಜ್ಜನ, ಅತ್ಯುತ್ತಮ ಆಡಳಿತ ನೀಡುತ್ತಿರುವ ಬೊಮ್ಮಾಯಿಯವರ ಹೆಸರನ್ನು ಹಾಳು ಮಾಡಲು ವ್ಯರ್ಥ ಆರೋಪ ಮಾಡುತ್ತಿದೆ ಎಂದು ಟೀಕಿಸಿದರು.
ಪಂಜಾಬ್‍ನಲ್ಲಿ ಕಾಂಗ್ರೆಸ್ ಪಕ್ಷ ಒಡೆಯಿತು. ಗೋವಾದಲ್ಲೂ 8 ಶಾಸಕರು ಪಕ್ಷ ತೊರೆದರು. ರಾಜಸ್ಥಾನದಲ್ಲೂ ಕಾಂಗ್ರೆಸ್ ಒಳಜಗಳ ಮುಂದುವರಿದಿದೆ. ಕರ್ನಾಟಕದಲ್ಲೂ ಎರಡು ಮುಖಂಡರ ನಡುವೆ ಭಿನ್ನಮತ ಭುಗಿಲೇಳಲಿದೆ ನೋಡುತ್ತಿರಿ ಎಂದು ಹೇಳಿದರು. ರಾಜ್ಯದಲ್ಲಿ ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿ 150ಕ್ಕೂ ಹೆಚ್ಚು ಸ್ಥಾನಗಳೊಂದಿಗೆ ಅಧಿಕಾರ ಪಡೆಯಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ದೇಶಾದ್ಯಂತ ಗಲಭೆ, ದಂಗೆಗಗಳನ್ನು ಎಬ್ಬಿಸುವಲ್ಲಿ ಪಿಎಫ್‍ಐ ನಿರತವಾಗಿತ್ತು. ಸಮಾಜವಿದ್ರೋಹಿ ಕೆಲಸಗಳಲ್ಲಿ ತೊಡಗಿಕೊಂಡಿತ್ತು. ಆತಂಕವಾದಿ ಘಟನೆಗಳಲ್ಲೂ ಅದು ಕಾಣಿಸಿಕೊಂಡಿತ್ತು. ದೇಶವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿದ್ದ ಸಂಸ್ಥೆಯನ್ನು ನಿಷೇಧಿಸಿದ್ದು, ಅತ್ಯಂತ ಉತ್ತಮ ನಿರ್ಧಾರ ಎಂದು ಅವರು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!